Home ಜಿಲ್ಲೆ ಬೆಂಗಳೂರು ಸಚಿವರ ಪಟ್ಟಿ ತರಲಿರುವ ವೇಣುಗೋಪಾಲ್, ಸುರ್ಜೆವಾಲ

ಸಚಿವರ ಪಟ್ಟಿ ತರಲಿರುವ ವೇಣುಗೋಪಾಲ್, ಸುರ್ಜೆವಾಲ

ಬೆಂಗಳೂರು, ಆ. ೨- ರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ನೂತನ ಸಚಿವರ ಪ್ರಮಾಣ ವಚನಕ್ಕೆ ರಾಜ್ಯಭವನದಲ್ಲಿ ಸಿದ್ಧತೆಗಳು ನಡೆದಿರುವಾಗಲೇ, ಸಚಿವರ ಪಟ್ಟಿಯನ್ನು ಹೊತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಇಂದು ಸಂಜೆ ನಂತರ ಬೆಂಗಳೂರಿಗೆ ಆಗಮಿಸುವರು.


ರಾಜ್ಯ ಸಚಿವ ವಿಸ್ತರಣೆ ಬಗ್ಗೆ ಮೂರು ದಿನಗಳ ಹಿಂದೆ ದೆಹಲಿಯಲ್ಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ ಅವರ ನಿವಾಸದಲ್ಲಿ ರಾಹುಲ್‌ಗಾಂಧಿ ಉಪಸ್ಥಿತಿಯಲ್ಲಿ ಚರ್ಚೆಗಳು ನಡೆದಿದ್ದವು. ಈ ಸಭೆಯಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಇವರುಗಳ ಜತೆ ರಾಹುಲ್‌ಗಾಂಧಿ, ಮಲ್ಲಿಕಾರ್ಜುನಖರ್ಗೆ ಇವರುಗಳು ಚರ್ಚೆ ನಡೆಸಿ, ಭಾನುವಾರ ನೂತನ ಸಚಿವರ ಪಟ್ಟಿಯನ್ನು ಕಳುಹಿಸುತ್ತೇವೆ. ಸೋಮವಾರ ಸಚಿವರ ಪದಗ್ರಹಣಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಿ ಎಂದು ಹೇಳಿದ್ದರು.


ಇದಾದ ಬಳಿಕ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲು ದೆಹಲಿಗೆ ತೆರಳಿದ್ದ ರಾಜ್ಯ ನಾಯಕರು ಬೆಂಗಳೂರಿಗೆ ವಾಪಸ್ಸಾಗಿದ್ದು, ನಾಳೆ ಸಂಪುಟ ವಿಸ್ತರಣೆಗೆ ಮುಹೂರ್ತ ನಿಗದಿಯಾಗಿದ್ದು, ನೂತನ ಸಚಿವರುಗಳ ಪಟ್ಟಿಯನ್ನು ಇಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ವೇಣುಗೋಪಾಲ್ ರವರು ತಾವೇ ಖುದ್ಧ ತರಲಿದ್ದಾರೆ ಎಂದು ಹೇಳಲಾಗಿದೆ.


ಇಂದು ಸಂಜೆ ಈ ಇಬ್ಬರು ನಾಯಕರು ಬೆಂಗಳೂರಿಗೆ ಬರಲಿದ್ದು, ಹೈಕಮಾಂಡ್ ಸಿದ್ಧಪಡಿಸಿರುವ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ನೀಡುವರು. ನಂತರ ಮುಖ್ಯಮಂತ್ರಿಗಳು ಅದನ್ನು ರಾಜ್ಯಪಾಲರಿಗೆ ಕಳುಹಿಸಿ ನಾಳೆ ನೂತನ ಸಚಿವರ ಪದಗ್ರಹಣಕ್ಕೆ ಅವಕಾಶ ನೀಡುವರು ಎಂದು ಹೇಳಲಾಗಿದೆ.


ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈಗಾಗಲೇ ನಾಳೆ ನೂತನ ಸಚಿವರ ಪ್ರಮಾಣ ವಚನ ನಡೆಯಲಿದೆ ಎಂದು ಹೇಳಿದ್ದು, ರಾಜ್ಯಭವನದಲ್ಲೂ ನೂತನ ಸಚಿವರ ಪದಗ್ರಹಣಕ್ಕೆ ಎಲ್ಲ ಸಿದ್ಧತೆಗಳು ನಡೆದಿವೆ. ನಾಳೆ ಸಂಜೆ ೬ ಗಂಟೆಗೆ ನೂತನ ಸಚಿವರು ಪದಗ್ರಹಣ ಮಾಡಲಿದ್ದಾರೆ.


ರಾಜ್ಯ ಸಚಿವ ಸಂಪುಟದಲ್ಲಿ೨೦ ಸ್ಥಾನಗಳು ಖಾಲಿ ಇದ್ದು, ಆ ಪೈಕಿ ೨ ಸ್ಥಾನಗಳನ್ನು ಉಳಿಸಿಕೊಂಡು ೧೮ ಸ್ಥಾನಗಳನ್ನು ಭರ್ತಿ ಮಾಡಲು ಹೈಕಮಾಂಡ್ ನಿರ್ಧಱಿಸಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ಹೊಸ ಮುಖಗಳಿಗೆ ಹೆಚ್ಚಿನ ಆದ್ಯತೆ ಸಿಗಲಿದ್ದು, ೩-೪ ಬಾರಿ ಗೆದ್ದಿರುವ ಶಾಸಕರಿಗೆ ಸಚಿವ ಸಂಪುಟದಲ್ಲಿ ಪ್ರಾತಿನಿದ್ಯ ಸಿಗುವ ಸಾಧ್ಯತೆಗಳು ಹೆಚ್ಚಿವೆ.