
ಬೆಂಗಳೂರು, ಆ. ೨- ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ಹಿತ ಕಾಯುವ ಬಗ್ಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿಂದು ನಡೆದ ಸರ್ವ ಪಕ್ಷ ಸಭೆಯಲ್ಲಿ ಚರ್ಚೆಗಳನ್ನು ನಡೆಸಲಾಗಿದ್ದು, ರಾಜ್ಯದ ಹಿತ ಕಾಯಲು ಏನೆಲ್ಲಾ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸರ್ವಪಕ್ಷಗಳ ಸಭೆ ನಡೆದು, ಈ ಸಭೆಯಲ್ಲಿ ಕಾವೇರಿ ವಿಚಾರದಲ್ಲಿ ರಾಜ್ಯದ ಹಿತ ಕಾಯುವ ವಿಚಾರದಲ್ಲಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು, ಯಾವ ನಿಲುವನ್ನು ರಾಜ್ಯ ಸರ್ಕಾರ ಹೊಂದಬೇಕು ಎಂಬ ಬಗ್ಗೆ ಚರ್ಚೆಗಳು ನಡೆದಿದ್ದು, ಇದರ ಜತೆಗೆ ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆಯೂ ಚರ್ಚೆಗಳು ನಡೆದವು.
ತಮಿಳುನಾಡಿಗೆ ನಿತ್ಯ ೩೫೦೦ ಕ್ಯೂಸೆಕ್ಸ್ ನೀರು ಬಿಡಬೇಕು ಎಂಬ ಕಾವೇರಿ ಅಧಿನೀರು ಪ್ರಾಧಿಕಾರದ ಆದೇಶದ ಸಂಬಂಧ ಚರ್ಚಿಸಲು ಇಂದಿನ ಸಭೆ ಕರೆಯಲಾಗಿತ್ತು. ಆದರೆ, ಕಾವೇರಿ ಜಲಾಯನ ಭಾಗದಲ್ಲಿ ಉತ್ತಮ ಮಳೆಯಾಗಿ ತಮಿಳುನಾಡಿಗೆ ಸಹಜವಾಗಿ ನೀರು ಹರಿದು ಹೋಗುತ್ತಿರುವುದರಿಂದ ಆದೇಶ ಪಾಲನೆ ಸಂಕಷ್ಟದಿಂದ ಸದ್ಯಕ್ಕೆ ರಾಜ್ಯ ಪಾರಾಗಿದೆ. ಹಾಗಾಗಿ ಇಂದಿನ ಸಭೆಯಲ್ಲಿ ರಾಜ್ಯದ ಹಿತ ಕಾಯಲು ಮುಂದೆ ಯಾವ ರೀತಿ ಹೆಜ್ಜೆ ಇಡಬೇಕು ಎಂಬ ಬಗ್ಗೆ ಹೆಚ್ಚಿನ ಚರ್ಚೆಗಳು ನಡೆದವು.
ಸರ್ವಪಕ್ಷಗಳ ಇಂದಿನ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ, ಯಡಿಯೂರಪ್ಪ, ಸಿದ್ಧರಾಮಯ್ಯ, ಡಿ.ವಿ. ಸದಾನಂದಗೌಡ, ಬಸವರಾಜಬೊಮ್ಮಾಯಿ, ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವರುಗಳಾದ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ. ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಕೆ.ಜೆ. ಜಾರ್ಜ್, ಎಂ.ಬಿ. ಪಾಟ೪ಲ್, ಕೃಷ್ಣಬೈರೇಗೌಡ, ಯು.ಟಿ. ಖಾದರ್, ನವದೆಹಲಿಯ ಕರ್ನಾಟಕದ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ವಿಪಕ್ಷ ನಾಯಕರುಗಳಾದ ಆರ್. ಅಶೋಕ್, ಚಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವ ಹೆಚ್.ಕೆ. ಪಾಟೀಲ್, ಚಲುವರಾಯಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸಿ.ಬಿ. ಸುರೇಶ್‌ಬಾಬು, ಬೋಜೇಗೌಡ, ಸಂಸದ ಯಧುವೀರ್ ಒಡೆಯರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ನಿವೃತ್ತ ನ್ಯಾ. ನಾಗಮೋಹನ್ ದಾಸ್, ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ವಿಶೇಷ ಸಲಹೆಗಾರರಾದ ಬಿ.ಸಿ. ಚಂದ್ರಶೇಖರ್, ಆರ್ಥಿಕ ಸಲಹೆಗಾರ ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಕುಡಿಯುವ ನೀರಿಗೆ ಆದ್ಯತೆ:ಡಿಕೆಶಿ
ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಕುಡಿಯುವ ನೀರಿಗೆ ನಾವು ಆದ್ಯತೆ ನೀಡಿದ್ದೇವೆ. ಕುಡಿಯುವ ನೀರನ್ನು ಸಂಗ್ರಹಿಸುವ ಜತೆಗೆ ರೈತರ ಹಿತದೃಷ್ಟಿಗೂ ಮುಂದಾಗಿದ್ದೇವೆ ಎಂದರು.
ರಾಜಕಾರಣ ಏನೆ ಇದ್ದರೂ ನಾವು ಅದನ್ನು ಬಿಟ್ಟು ಎಲ್ಲ ಸಂದರ್ಭದಲ್ಲೂ ರಾಜ್ಯದ ರೈತರ ಹಿತಕ್ಕಾಗಿ ಒಗ್ಗಟ್ಟಿನಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಎಲ್ಲರೂ ಹೊರಗೆ ಏನೇ ಹೇಳಿಕೆ ನೀಡಿದರೂ ರಾಜ್ಯದ ವಿಚಾರದಲ್ಲಿ ನೀವೆಲ್ಲಾ ಸಹಕಾರ ನೀಡುತ್ತಾ ಬಂದಿದ್ದೀರಿ ಅದಕ್ಕೆ ನಾನು ಆಭಾರಿ ಎಂದರು
ರಾಜಕೀಯಕ್ಕಿಂತ ರಾಜ್ಯದ ರೈತರ, ಜನರ ಹಿತ ಮುಖ್ಯ. ರಾಜ್ಯದ ಹಿತಾಸಕ್ತಿ ವಿಚಾರದಲ್ಲಿ ರಾಜಕಾರಣವನ್ನು ಪಕ್ಕಕ್ಕಿಟ್ಟು ರಾಜ್ಯದ ಹಿತಕ್ಕಾಗಿ ಎಲ್ಲ ರಾಜಕೀಯ ಪಕ್ಷಗಳು ಒಟ್ಟಿಗೆ ನಿಂತಿರುವ ಚರಿತ್ರೆ ನಮ್ಮ ರಾಜ್ಯಕ್ಕೆ ಇದೆ ಎಂದರು
ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಆದ್ಯತೆ ನಿಲುವು ನಮಮದಾಗಿದೆ. ಈ ನಮ್ಮ ನಿಲುವಿಗೆ ನಾವೆಲ್ಲಾರೂ ಸಂಪೂರ್ಣ ಸಹಮತ ಹೊಂದಿದ್ದೀರಿ ಎಂಬುದು ನನಗೆ ಗೊತ್ತಿದೆ. ದೆಹಲಿಯಲ್ಲಿ ನಡೆದ ಸಂಸತ್ ಸದಸ್ಯರ ಸಭೆಯಲ್ಲಿ ಪಕ್ಷಬೇಧ ಮರೆತು ಎಲ್ಲರೂ ರಾಜ್ಯದ ಪರ ನಿಲ್ಲುವ ಮಾತು ಹೇಳಿದ್ದಾರೆ. ಅವರಿಗೂ ಧನ್ಯವಾದ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ನಾನು ಕಾವೇರಿ ನೀರು ನಿರ್ವಹಣಾ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಗೂ ಮೊದಲೇ ಕೇಂದ್ರ ಸಚಿವರಾದ ಪಾಟೀಲ್, ಪ್ರಹ್ಲಾದ್ ಜೋಷಿ, ವಿ. ಸೋಮಣ್ಣ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜಬೊಮ್ಮಾಯಿ ಜಗದೀಶ್‌ಶೆಟ್ಟರ್ ಅವರನ್ನು ಭೇಟಿ ಮಾಡಿ ವಿಚಾರ ಮನವರಿಕೆ ಮಾಡಿಕೊಟ್ಟಿದ್ದೆ ಎಂದು ಹೇಳಿದರು.
ನದಿ ನೀರನ ಹಂಚಿಕೆ ವಿಚಾರದಲ್ಲಿ ಸೌಹಾರ್ದಯುತ ಸಮಸ್ಯೆ ನಿವಾರಣೆಗೆ ನಮ್ಮ ಆದ್ಯತೆ. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೀರು ಸಂಗ್ರಹಿಸಿದ್ದೇವೆ. ಕಬಿನಿ ಜಲಾಶಯ ತುಂಬಿದೆ. ಹೆಚ್ಚುವರಿ ಒಳ ಹರಿವು ಸಂಗ್ರಹ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಸಹಜ ಹರಿವು ಮಾತ್ರ ಆಗುತ್ತದೆ ಈಗಾಗಲೇ ನಾಲೆಗಳಿಗೆ ನೀರು ಹರಿದಿದೆ. ರೈತರಿಗೂ ಅನುಕೂಲವಾಗುತ್ತಿದೆ ಎಂದರು
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ಮಾತುಕತೆಗೆ ಬರುತ್ತೇನೆ ಎಂದಿದ್ದರು. ಕಾವೇರಿ ಪರಿಸ್ಥಿತಿ ತಿಳಿಯಾದ ನಂತರ ಬರುವಂತೆ ಹೇಳಿದೆ. ಈಗ ಸಮಾಧಾನದ ಸಂಗತಿ ಎಂದರೆ ಮಳೆ ಚೆನ್ನಾಗಿ ಆಗುತ್ತಿದೆ. ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಇವೆ ಎಂದರು
ಎಲ್ಲ ಸಂದರ್ಭಗಳಲ್ಲೂ ಕೇಂದ್ರದ ಜಲಸಂಪನ್ಮೂಲ ಸಚಿವ ಪಾಟೀಲ್ ಅವರು ಹೆಚ್ಚಿನ ಸಹಕಾರ ನೀಡುತ್ತಾ ಬಂದಿದ್ದಾರೆ. ಕೃಷ್ಣಾ ನೀರಿನ ವಿಚಾರದಲ್ಲೂ ಸಂಪೂರ್ಣ ಸಹಕಾರ ನೀಡಿದ್ದಾರೆ. ತುಂಗಭದ್ರಾ ಅಣೆಕಟ್ಟು ಕ್ರಸ್ಟ್ ಗೇಟ್ ಅಳವಡಿಕೆ ಸಂದರ್ಭದಲ್ಲಿ ನವಿಲೆ ಸಮತೋಲನಾ ಅಣೆಕಟ್ಟು ಸಂಬಂಧ ನಾನು ಇಟ್ಟಿದ್ದ ಪ್ರಸ್ತಾಪಕ್ಕೂ ಸಮ್ಮತಿ ಸೂಚಿಸಿದ್ದಾರೆ. ಕೃಷ್ಣ, ಗೋದಾವರಿ, ಕಾವೇರಿ ಜೋಡಣೆ ಪ್ರಸ್ತಾಪ ಕೃಷ್ಣಾ ನದಿ ನೀರು ಹಂಚಿಕೆಯಲ್ಲೂ ಸಮನ್ವಯಕ್ಕೆ ನೆರವು ನೀಡಿದ್ದಾರೆ ಎಂದರು.
ವರುಣನ ಕೃಪೆಯಿಂದ ಕೊಡಗಿನ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ. ನಮ್ಮಲ್ಲಿ ಈಗಾಗಲೇ ೫೭ ಟಿಎಂಸಿ ನೀರು ಇದ್ದು ನೀರಿನ ಒಳ ಹರಿವು ಹೆಚ್ಚಾಗಿದೆ. ನಿತ್ಯ ೩೫೦೦ ಕ್ಯೂಸೆಕ್ಸ್ ನೀರು ಬಿಡಲು ಆದೇಶವಾಗಿದ್ದು, ಈಗಾಗಲೇ ನೀರಿನ ಒಳ ಅರಿವು ಹೆಚ್ಚಾಗಿರುವ ಕಾರಣ ಅಣೆಕಟ್ಟು ತುಂಬಿ ನೀರು ಹರಿದು ಹೋಗುತ್ತಿದೆ. ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಲ್ಲ. ಇಂದಿನ ಸಭೆಗೆ ಎಲ್ಲ ಹಿರಿಯರು ರಾಜ್ಯದ ಹಿತ ಕಾಪಾಡುವ ದೃಷ್ಟಿಯಿಂದ ಬಂದಿದ್ದೀರೀ ನಿಮ್ಮ ಮುಕ್ತ ಸಲಹೆಗೆ ಸ್ವಾಗತ ಎಂದು ಮುಖ್ಯಮಂತ್ರಿಗಳು ಹೇಳಿದರು.
ಕಾವೇರಿ ವಿವಾದ ನಮಗೂ ಹೊಸದಲ್ಲ, ನಿಮಗೂ ಹೊಸದಲ್ಲ. ಕಾವೇರಿ ವಿವಾದವನ್ನು ನಾವೆಲ್ಲಾ ಮೈಗೆ ಅಂಟಿಕೊಂಡೆ ಬೆಳೆದಿದ್ದೇವೆ. ರಾಜಕೀಯಕ್ಕಿಂತ ರಾಜ್ಯದ ರೈತರ, ಜನರ ಹಿತ ಮುಖ್ಯ ಎಂದರು.
ಜಲಾಶಯಗಳಿಗೆ ಉತ್ತಮ ಪ್ರಮಾಣದ ನೀರು
ಆ ೨ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮಲೆನಾಡು ಹಾಗೂ ಕೊಡಗು ಭಾಗದಲ್ಲಿ ಸುರಿದ ಮಳೆಯಿಂದಾಗಿ ಜಲಾಶಯಗಳಿಗೆ ಉತ್ತಮ ಪ್ರಮಾಣದ ನೀರು ಹರಿದುಬರುತ್ತಿದೆ. ಈ ಹಿನ್ನೆಲೆಯಲ್ಲಿ ತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸಿ ಸಾಧನೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕೋರ್ ಕಮಿಟಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಕರ್ನಾಟಕದಲ್ಲಿ ವರುಣದೇವನ ಕೃಪೆಯಿಂದ ಉತ್ತಮ ಮಳೆಯಾಗಿದೆ. ಆದರೆ, ಜಲಾಶಯಗಳು ಭರ್ತಿಯಾಗುವ ಮುನ್ನವೇ ತಮಿಳುನಾಡಿಗೆ ತರಾತುರಿಯಲ್ಲಿ ನೀರು ಹರಿಸಿದೆ.ಏನೇ ಆಗಲಿ ಸುಪ್ರೀಂಕೋರ್ಟ್‌ನಲ್ಲಿ ನಮ್ಮ ಪರವಾಗಿ ವಾದ ಮಂಡಿಸಲು ನಮಗೆ ಬಲವಾದ ಅಂಶಗಳು ಲಭ್ಯವಾಗಿವೆ. ಜೂನ್ ಜುಲೈನಲ್ಲಿ ನೀರು ಬಿಡುವುದು ಅಷ್ಟೆ ಅಲ್ಲ, ಸರ್ಕಾರ ಮುಂದಿನ ದಿನಗಳಲ್ಲಿ ಕಾವೇರಿ ನೀರಿನ ನಿರ್ವಹಣೆಯನ್ನು ಹೇಗೆ ಮಾಡುತ್ತದೆ ಎಂಬುದನ್ನು ನಾವು ಕಾದು ನೋಡಬೇಕಿದೆ ಎಂದು ಹೇಳಿದರು.
ಕರ್ನಾಟಕದ ಜನತೆಗೆ ಕುಡಿಯುವ ನೀರು ಒದಗಿಸುವುದು, ಬೆಂಗಳೂರು, ಮಂಡ್ಯ, ಮೈಸೂರು ಭಾಗದ ಕುಡಿಯುವ ನೀರಿನ ಅಗತ್ಯತೆ ಹಾಗೂ ನಮ್ಮ ಮುಂಗಾರು ಬೆಳೆಗೆ ನೀರು ಸುರಕ್ಷಿತವಾಗಿ ಸಿಗುವಂತೆ ಮಾಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು. ತಮಿಳುನಾಡಿನವರು ೯೫೦೦ ನಾವು ೩೫೦೦ ಕ್ಯೂಸೆಕ್ಸ್ ಬಿಟ್ಟಿದ್ದೇವೆ ಎನ್ನುವುದು ಹುಡುಗಾಟಿಕೆಯ ಮಾತಾಗಿದೆ.ಅದನ್ನೇ ದೊಡ್ಡ ಸಾಧನೆ ಎಂದು ಬಿಂಬಿಸುವ ರಾಜ್ಯ ಸರ್ಕಾರದ ಧೋರಣೆ ಸರಿಯಲ್ಲ. ಏಕೆಂದರೆ ಇಲ್ಲಿಯವರೆಗೆ ನಮ್ಮ ರೈತರ ಕಾಲುವೆಗಳಿಗೆ ಒಂದು ಹನಿ ನೀರನ್ನೂ ಹರಿಸಿಲ್ಲ. ರೈತರಿಗೆ ನೀರು ಕೊಡದೆ, ಸಾಧನೆ ಮಾಡಿದ್ದೇವೆ ಎಂದು ಬಿಂಬಿಸಿಕೊಳ್ಳುವುದು ಸರಿಯಲ್ಲ” ಎಂದು ಅವರು ಸರ್ಕಾರದ ವಿರುದ್ಧ ಕಿಡಿಕಾರಿದರು.
ಸರ್ಕಾರ ಕೈಗೊಳ್ಳುವ ನಿರ್ಧಾರ ಹಾಗೂ ಸಭೆಯಲ್ಲಿ ಮಂಡಿಸುವ ಪ್ರಸ್ತಾಪಗಳನ್ನು ಗಮನಿಸಿ ಮುಂದಿನ ನಡೆ ತೀರ್ಮಾನಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.

































