Home ಜಿಲ್ಲೆ ಕನಮಡಿಯಲ್ಲಿ ‘ವಿಬಿ-ಜಿ ರಾಮ ಜಿ’ ಜನಜಾಗೃತಿ ಅಭಿಯಾನಕ್ಕೆ ಚಾಲನೆ

ಕನಮಡಿಯಲ್ಲಿ ‘ವಿಬಿ-ಜಿ ರಾಮ ಜಿ’ ಜನಜಾಗೃತಿ ಅಭಿಯಾನಕ್ಕೆ ಚಾಲನೆ

ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೩೦: ಗ್ರಾಮೀಣ ಕೂಲಿಕಾರರಿಗೆ ಉದ್ಯೋಗ ಭದ್ರತೆ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಂಟಿಯಾಗಿ ಜಾರಿಗೊಳಿಸಿರುವ ‘ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಅಂಡ್ ಆಜೀವಿಕಾ ಮಿಷನ್ ಗ್ರಾಮೀಣ (ವಿಬಿ-ಜಿ ರಾಮ ಜಿ)’ ಯೋಜನೆಯ ಜನಜಾಗೃತಿ ಅಭಿಯಾನಕ್ಕೆ ತಿಕೋಟಾ ತಾಲೂಕಿನ ಕನಮಡಿ ಗ್ರಾಮ ಪಂಚಾಯತಿಯಲ್ಲಿ ಬುಧವಾರ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ರೇಣುಕಾ ಸೋಲಾಪುರ, “ಕೆಲಸ ಅರಸಿ ಗ್ರಾಮ ಪಂಚಾಯತಿಗೆ ಬರುವ ಯಾವುದೇ ಅರ್ಹ ಕೂಲಿಕಾರರು ಉದ್ಯೋಗದಿಂದ ವಂಚಿತರಾಗುವುದಿಲ್ಲ. ಗ್ರಾಮಾಭಿವೃದ್ಧಿಯ ಕಾಮಗಾರಿಗಳಲ್ಲಿ ಪಾಲ್ಗೊಂಡು ತಮ್ಮ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಯೋಜನೆಯಡಿ ಪ್ರತಿ ಕುಟುಂಬಕ್ಕೆ ವರ್ಷಕ್ಕೆ ೧೨೫ ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತಿದ್ದು, ದಿನಗೂಲಿಯನ್ನು ?೩೭೦ರಿಂದ ?೩೮೨ಕ್ಕೆ ಹೆಚ್ಚಿಸಲಾಗಿದೆ ಎಂದು ತಿಳಿಸಿದರು. ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ, ಗರಿಷ್ಠ ೧೫ ದಿನಗಳೊಳಗೆ ಕೂಲಿಯನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಹಾಗೂ ವಿಳಂಬವಾದರೆ ಪರಿಹಾರ ನೀಡುವ ವ್ಯವಸ್ಥೆಯೂ ಕಲ್ಪಿಸಲಾಗಿದೆ ಎಂದರು.
ಇದಲ್ಲದೆ ಕೆರೆ, ಕಾಲುವೆ, ರಸ್ತೆ, ಶಾಲಾ ಆವರಣ ಗೋಡೆ ಸೇರಿದಂತೆ ಗ್ರಾಮದ ಶಾಶ್ವತ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮೀಣ ಅಭಿವೃದ್ಧಿಯೊಂದಿಗೆ ಉದ್ಯೋಗ ಸೃಷ್ಟಿಯೂ ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.
ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಮಾತನಾಡಿ, ಜುಲೈ ೧ರಿಂದ ಮನರೇಗಾ ಯೋಜನೆಗೆ ಬದಲಾಗಿ ‘ವಿಬಿ-ಜಿ ರಾಮ ಜಿ’ ಯೋಜನೆ ಜಾರಿಗೆ ಬಂದಿದೆ. ತಾಲೂಕಿನ ೧೪ ಗ್ರಾಮ ಪಂಚಾಯತಿಗಳಲ್ಲಿ ಈಗಾಗಲೇ ಜನಜಾಗೃತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ತಿಳಿಸಿದರು.
ಎಲ್ಲಾ ನೋಂದಾಯಿತ ಕೂಲಿಕಾರರು ಇ-ಕೆವೈಸಿ ಪೂರ್ಣಗೊಳಿಸಿ, ಆಧಾರ್ ಜೋಡಣೆಯೊಂದಿಗೆ ಜಾಬ್ ಕಾರ್ಡ್ಗಳನ್ನು ನವೀಕರಿಸಿಕೊಳ್ಳಬೇಕು ಎಂದು ಮನವಿ ಮಾಡಿದ ಅವರು, ಜೂನ್ ೩೦ರವರೆಗೆ ಮನರೇಗಾ ಅಡಿಯಲ್ಲಿ ಆರಂಭಗೊAಡಿದ್ದ ಕಾಮಗಾರಿಗಳನ್ನು ಹೊಸ ಯೋಜನೆಯ ನಿಯಮಾನುಸಾರ ಯಾವುದೇ ಅಡಚಣೆ ಇಲ್ಲದೆ ಮುಂದುವರಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
“ಗ್ರಾಮೀಣ ಭಾಗದ ಕೂಲಿಕಾರರು ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ ಹೋಗುವ ಅಗತ್ಯವಿಲ್ಲ. ತಮ್ಮ ಊರಿನಲ್ಲಿಯೇ ಗೌರವಯುತ ಉದ್ಯೋಗ ಮತ್ತು ಜೀವನೋಪಾಯವನ್ನು ಈ ಯೋಜನೆಯಡಿ ಪಡೆದುಕೊಳ್ಳಬಹುದು” ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶ್ರೀಶೈಲ ಜಾಲಗೇರಿ, ಬಿಎಫ್‌ಟಿ ಸಿದ್ರಾಯ ದಾಶ್ಯಾಳ, ಎಂಬಿಕೆ ಶಾಂತಾ ಬಿರಾದಾರ, ಸ್ವಸಹಾಯ ಸಂಘಗಳ ಮಹಿಳೆಯರು ಹಾಗೂ ನೂರಾರು ಕೂಲಿಕಾರರು ಭಾಗವಹಿಸಿದ್ದರು.