
ವಾಷಿಂಗ್ಟನ್,ಆ. ೧: ಮಧ್ಯಪ್ರಾಚ್ಯದಲ್ಲಿ ತಿಂಗಳುಗಳಿಂದ ನಡೆಯುತ್ತಿರುವ ಯುದ್ಧ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಕಂಡುಬಂದಿದ್ದು, ಇರಾನ್ ವಿರುದ್ಧ ಮತ್ತೊಂದು ಹಂತದ ಭೀಕರ ಮಿಲಿಟರಿ ದಾಳಿಗೆ ಅಮೆರಿಕ ಮತ್ತು ಇಸ್ರೇಲ್ ತೆರೆಮರೆಯಲ್ಲಿ ಸಜ್ಜಾಗಿವೆ. ಇರಾನ್‌ಗೆ ಈ ಬಾರಿ “ಅತ್ಯಂತ ಭೀಕರ ಪೆಟ್ಟು” ನೀಡಲಾಗುವುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕದ ‘ದಿ ವಾಲ್ ಸ್ಟ್ರೀಟ್ ಜರ್ನಲ್’ ಹಾಗೂ ‘ಸಿಬಿಎಸ್ ನ್ಯೂಸ್’ ವರದಿಗಳ ಪ್ರಕಾರ, ಈ ವಾರಾಂತ್ಯದಲ್ಲೇ ಹೊಸ ಹಂತದ ಮಿಲಿಟರಿ ಕಾರ್ಯಾಚರಣೆ ಆರಂಭವಾಗುವ ಸಾಧ್ಯತೆಯಿದೆ. ಇರಾನ್‌ನ ತೈಲ ರಿಫೈನರಿಗಳು, ವಿದ್ಯುತ್ ಉತ್ಪಾದನಾ ಸ್ಥಾವರಗಳು ಹಾಗೂ ಪ್ರಮುಖ ಶಕ್ತಿ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಲು ಬ್ಲೂಪ್ರಿಂಟ್ ಸಿದ್ಧಪಡಿಸಲಾಗಿದೆ.
ಇರಾನ್ ಸಂಪೂರ್ಣವಾಗಿ ಶರಣಾಗುವಂತೆ ಮಾಡಲು ಹಾಗೂ ಅದರ ಆರ್ಥಿಕ-ಮಿಲಿಟರಿ ಬೆನ್ನೆಲುಬನ್ನು ಮುರಿಯಲು ಟ್ರಂಪ್ ಆಡಳಿತ ಈ ಕಠಿಣ ಹೆಜ್ಜೆಗೆ ಮುಂದಾಗಿದೆ.
ಮೆರಿಲ್ಯಾಂಡ್‌ನ ‘ಕ್ಯಾಂಪ್ ಡೇವಿಡ್’ ಅಧ್ಯಕ್ಷೀಯ ನಿವಾಸದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಾತನಾಡಿದ ಟ್ರಂಪ್, “ನಾವು ಇರಾನ್‌ಗೆ ಅತ್ಯಂತ ಭೀಕರವಾದ ಪೆಟ್ಟು ನೀಡಲಿದ್ದೇವೆ. ‘ಇನ್ನು ಮುಂದೆ ಈ ಹೊಡೆತ ತಡೆಯಲು ನಮ್ಮಿಂದ ಸಾಧ್ಯವಿಲ್ಲ’ ಎಂದು ಅವರೇ ಶರಣಾಗುವ ದಿನ ಶೀಘ್ರದಲ್ಲೇ ಬರಲಿದೆ” ಎಂದು ಹೇಳಿದ್ದಾರೆ.
ಫೆಬ್ರವರಿ ೨೮ ರಿಂದ ಯುದ್ಧ: ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಫೆಬ್ರವರಿ ೨೮ ರಂದು ಇರಾನ್ ಮೇಲೆ ನಡೆಸಿದ ಜಂಟಿ ದಾಳಿಯೊಂದಿಗೆ ಈ ಸಂಘರ್ಷ ಆರಂಭಗೊಂಡಿತ್ತು. ಹೋರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಮೇಲೆ ದಾಳಿಯಾದರೆ, ಇರಾನ್‌ನ ಪ್ರತಿ ಪ್ರಮುಖ ಸೇತುವೆ ಹಾಗೂ ವಿದ್ಯುತ್ ಸ್ಥಾವರವನ್ನು ಧ್ವಂಸಗೊಳಿಸುವುದಾಗಿ ಟ್ರಂಪ್ ಈಗಾಗಲೇ ಮುನ್ನೆಚ್ಚರಿಕೆ ನೀಡಿದ್ದರು. ನೂತನ ದಾಳಿಯ ಯೋಜನೆಯಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಸಕ್ರಿಯವಾಗಿ ಭಾಗವಹಿಸಿದ್ದು, ಇಸ್ರೇಲ್ ಪಡೆಗಳು ನೇರವಾಗಿ ಈ ದಾಳಿಯಲ್ಲಿ ಸಾಥ್ ನೀಡಲಿವೆ.
ಶ್ವೇತಭವನದ ಕೆಲ ಸಲಹೆಗಾರರು ಈ ತೀವ್ರ ಸ್ವರೂಪದ ದಾಳಿಯಿಂದ ಎದುರಾಗಬಹುದಾದ ಜಾಗತಿಕ ಪರಿಣಾಮಗಳ ಕುರಿತು ಕಳವಳ ವ್ಯಕ್ತಪಡಿಸಿದ್ದರೂ, ಮಿಲಿಟರಿ ಕಾರ್ಯಾಚರಣೆಗೆ ಅಂತಿಮ ಅನುಮೋದನೆ ದೊರೆಯುವ ಸಾಧ್ಯತೆ ದಟ್ಟವಾಗಿದೆ.































