
ನಟಿ ತ್ರಿಷಾ ವಿರುದ್ಧ ಹೇಳಿಕೆ
ಚೆನ್ನೈ,ಆ.೪:ಕಾವೇರಿ ನೀರು ಹಂಚಿಕೆ ಕುರಿತ ಪ್ರತಿಭಟನಾ ಸಭೆಯಲ್ಲಿ ನಟಿ ತ್ರಿಷಾ ಅವರನ್ನು ಉಲ್ಲೇಖಿಸಿ ದ್ವಂದ್ವಾರ್ಥ ಹಾಗೂ ಅಶ್ಲೀಲ ಹೇಳಿಕೆ ನೀಡಿದ ಆರೋಪದ ಮೇಲೆ ತಮಿಳುನಾಡಿನ ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ಅವರನ್ನು ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚೆನ್ನೈ ಪೊಲೀಸರು ಉದಯನಿಧಿ ವಿರುದ್ಧ ೬ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಈ ಬೆಳವಣಿಗೆಯ ಬೆನ್ನಲ್ಲೇ ಉದಯನಿಧಿ ಅವರು ಮುನ್ನೆಚ್ಚರಿಕೆ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಕಾವೇರಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಸರ್ಕಾರದ ವೈಫಲ್ಯವನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ಉದಯನಿಧಿ ಸ್ಟಾಲಿನ್ ಭಾಷಣ ಮಾಡುತ್ತಿದ್ದರು. ಈ ವೇಳೆ ಅವರು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದಾಗ, ನೆರೆದಿದ್ದ ಸಾರ್ವಜನಿಕರೊಬ್ಬರು ‘ತ್ರಿಷಾ, ತ್ರಿಷಾ’ ಎಂದು ಘೋಷಣೆ ಕೂಗಿದ್ದಾರೆ. ಈ ಸಂದರ್ಭದಲ್ಲಿ ಭಾಷಣ ತಡೆದು ಉದಯನಿಧಿ ನೀಡಿದ ದ್ವಂದ್ವಾರ್ಥ ಪ್ರತಿಕ್ರಿಯೆಯು ನಟಿ ತ್ರಿಷಾ ಹಾಗೂ ಸಿಎಂ ವಿಜಯ್ ಅವರ ನಡುವಿನ ಸ್ನೇಹವನ್ನು ಕುರಿತು ಕೀಳಾಗಿ ಸೃಷ್ಟಿಸಿದ ಹೇಳಿಕೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ಟಿವಿಕೆ ಮುಖಂಡ ಆದವ್ ಅರ್ಜುನ್, “ಉದಯನಿಧಿ ಅವರ ಮಾತುಗಳು ಮಹಿಳೆಯರ ಕುರಿತ ಅವರ ವಿಕೃತ ಮನಸ್ಥಿತಿಯನ್ನು ತೋರಿಸುತ್ತವೆ. ಅಣ್ಣಾದೊರೆ ಕಟ್ಟಿದ ಘನತೆಯ ಚಳವಳಿಯನ್ನು ಇಂತಹ ಅಶ್ಲೀಲ ಭಾಷೆಯಿಂದ ಹಾಳುಮಾಡುತ್ತಿದ್ದಾರೆ” ಎಂದು ಆಕ್ರೋಶ ಹೊರಹಾಕಿದ್ದಾರೆ.
ತಮಿಳುನಾಡು ಬಿಜೆಪಿ ವಕ್ತಾರ ನಾರಾಯಣನ್ ತಿರುಪತಿ ಮತ್ತು ನಾಯಕಿ ಖುಷ್ಬೂ ಸುಂದರ್, “ಈ ಹೇಳಿಕೆ ಅಸಹ್ಯಕರ ಹಾಗೂ ನಾಚಿಕೆಗೇಡಿನ ಸಂಗತಿ. ಉದಯನಿಧಿ ತಕ್ಷಣವೇ ನಟಿ ತ್ರಿಷಾ ಅವರಲ್ಲಿ ಸಾರ್ವಜನಿಕವಾಗಿ ಬೇಷರತ್ ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
ಈ ವಿವಾದವನ್ನು ತಳ್ಳಿಹಾಕಿರುವ ಡಿಎಂಕೆ ನಾಯಕರು, “ಕಾವೇರಿ ರೈತರ ನೈಜ ಸಮಸ್ಯೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಆಡಳಿತ ಪಕ್ಷಗಳು ಈ ಸುಳ್ಳು ಸುದ್ದಿಯನ್ನು ಹೆಣೆದಿವೆ” ಎಂದು ಹೇಳಿದ್ದು, ತಮ್ಮ ನಾಯಕನ ಪರ ಸಮರ್ಥನೆ ನೀಡಿದ್ದಾರೆ.
































