
ಕಲಬುರಗಿ,ಆ.3-ವಿದ್ಯುತ್ ತಂತಿ ತಗುಲಿ ಇಬ್ಬರು ಕಾರ್ಮಿಕರು ಗಾಯಗೊಂಡಿರುವ ಘಟನೆ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬೆಲೂರ್ (ಕೆ) ಗ್ರಾಮದ ದಸ್ತಗೀರ ಲದಾಫ್ ಮತ್ತು ಇಮಾಮ್ ಪಟೇಲ್ ಎಂಬುವವರು ಗಾಯಗೊಂಡಿದ್ದು, ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಮಲಾಪುರದ ಧನಶೆಟ್ಟಿ ಅಲಿಯಾಸ್ ದಾನಪ್ಪ ಮತ್ತು ಸತೀಶ್ ಜಾಧವ್ ಅವರು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಎರಡನೇ ಅಂತಸ್ತಿನ ಕಟ್ಟದಲ್ಲಿ ಇವರು ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದರು. ಛತ್ತಿನ ಕಬ್ಬಿಣದ ಪ್ಲೇಟ್ ತೆಗೆಯುವಾಗ ಬಿಲ್ಡಿಂಗ್ ಮುಂದೆ ಹಾದು ಹೋದ ವಿದ್ಯುತ್ ವಾಂiÀiರ್‍ಗೆ ತಗುಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಸೆಂಟ್ರಿಂಗ್ ಕೆಲಸ ಮಾಡುವಾಗ ಯಾವುದೇ ಸುರಕ್ಷಾ ಸಾಮಗ್ರಿ ನೀಡದೆ ನಿರ್ಲಕ್ಷವಹಿಸಿರುವ ಬಿಲ್ಡಿಂಗ್‍ನ ಮಾಲೀಕರಾದ ಧನಶೆಟ್ಟಿ ಚಿಕ್ಕಗೌಡ ಮತ್ತು ಸತೀಶ್ ಜಾಧವ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ದಸ್ತಗೀರ ಲದಾಫ್ ಅವರ ಪತ್ನಿ ಶಬನಾಬೇಗಂ ಅವರು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಒತ್ತಾಯಿಸಿದ್ದಾರೆ. ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.































