
ಬೆಂಗಳೂರು, ಆ.೫: ನಗರದಾದ್ಯಂತ ಎಲ್‌ಇಡಿ ಬೀದಿ ದೀಪ ಯೋಜನೆ ಸಂಪೂರ್ಣವಾಗಿ ಅನುಷ್ಠಾನಗೊಂಡರೆ ಶೇ.೬೧.೦೧ರಷ್ಟು ವಿದ್ಯುತ್ ಉಳಿತಾಯ ಸಾಧ್ಯವಿದೆ. ಆದರೆ ಯೋಜನೆಯ ಅನುಷ್ಠಾನ ವಿಳಂಬವಾಗುತ್ತಿರುವುದಕ್ಕೆ ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಎಲ್‌ಇಡಿ ಬೀದಿ ದೀಪ ಅಳವಡಿಕೆ ಕುರಿತು ನಡೆದ ಜಿಬಿಎ ವಿದ್ಯುತ್ ಎಂಜಿನಿಯರ್‌ಗಳ ಸಭೆಯಲ್ಲಿ ಮಾತನಾಡಿದ ಅವರು, ೨೦೨೫ರ ಮೇ ೭ ಮತ್ತು ೧೫ರಂದು ಕಾರ್ಯಾದೇಶ ನೀಡಿದ್ದರೂ ಯೋಜನೆ ನಿರೀಕ್ಷಿತ ವೇಗದಲ್ಲಿ ಸಾಗಿಲ್ಲ ಎಂದು ಪ್ರಶ್ನಿಸಿದರು. ನಗರದಾದ್ಯಂತ ಒಟ್ಟು ೩,೦೨,೯೧೯ ಎಲ್‌ಇಡಿ ದೀಪಗಳನ್ನು ಅಳವಡಿಸಬೇಕಿದ್ದು, ಈವರೆಗೆ ೨,೬೭,೨೭೦ ದೀಪಗಳು ಮಾತ್ರ ಅಳವಡಿಸಲಾಗಿದೆ.
ಇದೇ ರೀತಿ ೨೪,೬೭೭ ಸಿಸಿಎಂಎಸ್ ಪ್ಯಾನಲ್‌ಗಳ ಪೈಕಿ ಕೇವಲ ೭,೫೬೭ ಪ್ಯಾನಲ್‌ಗಳು ಅಳವಡಿಕೆಯಾಗಿವೆ. ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಆಗಸ್ಟ್ ೩ರಿಂದ ಎರಡು ತಿಂಗಳ ಹೆಚ್ಚುವರಿ ಕಾಲಾವಕಾಶ ನೀಡಲಾಗಿದೆ.
ಸಾಂಪ್ರದಾಯಿಕ ಬೀದಿ ದೀಪಗಳನ್ನು ತೆರವುಗೊಳಿಸಿ ಎಲ್‌ಇಡಿ ದೀಪಗಳನ್ನು ಅಳವಡಿಸುವುದರ ಜೊತೆಗೆ, ದೀಪಗಳೇ ಇಲ್ಲದ ಪ್ರದೇಶಗಳಲ್ಲಿ ಹೊಸ ದೀಪಗಳನ್ನು ಅಳವಡಿಸಬೇಕು.
ಬೀದಿ ದೀಪಗಳ ಕಾರ್ಯನಿರ್ವಹಣೆಯನ್ನು ಸ್ವಯಂಚಾಲಿತವಾಗಿ ಮೇಲ್ವಿಚಾರಣೆ ಮಾಡಲು ಸಿಸಿಎಂಎಸ್ ವ್ಯವಸ್ಥೆಯನ್ನೂ ಕಡ್ಡಾಯವಾಗಿ ಅಳವಡಿಸಬೇಕು ಎಂದು ಸಚಿವರು ಸೂಚಿಸಿದರು.
೪೮ ಗಂಟೆಯೊಳಗೆ ದೂರು ಪರಿಹರಿಸಲು ಸೂಚನೆ
‘ಸಹಾಯ’ ಪೋರ್ಟಲ್‌ನಲ್ಲಿ ದಾಖಲಾಗುತ್ತಿರುವ ದೂರುಗಳ ಪೈಕಿ ಶೇ.೩೪ರಷ್ಟು ದೂರುಗಳು ಬೀದಿ ದೀಪಗಳು ಕಾರ್ಯನಿರ್ವಹಿಸದಿರುವುದಕ್ಕೆ ಸಂಬಂಧಿಸಿವೆ. ಇಂತಹ ದೂರುಗಳನ್ನು ಗರಿಷ್ಠ ೪೮ ಗಂಟೆಯೊಳಗೆ ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.
ನಿಗದಿತ ಅವಧಿಯಲ್ಲಿ ಸಮಸ್ಯೆ ಬಗೆಹರಿಸದ ಗುತ್ತಿಗೆದಾರರಿಗೆ ದಂಡ ವಿಧಿಸಬೇಕು. ದೀಪಗಳ ಸಂಖ್ಯೆ ಹಾಗೂ ದೂರು ಪರಿಹಾರಕ್ಕೆ ವಿಳಂಬವಾದ ದಿನಗಳ ಆಧಾರದ ಮೇಲೆ ದಂಡದ ಮೊತ್ತ ನಿಗದಿಪಡಿಸಿ, ನಿರ್ಲಕ್ಷ್ಯ ತೋರುವ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೈರೇಗೌಡ ನಿರ್ದೇಶಿಸಿದರು.
‘ಬೇಸಿಕ್ ಡೇಟಾ ಇಲ್ಲದೆ ಸಭೆಗೆ ಏಕೆ ಬರಬೇಕು?’
ಸಭೆಗೆ ಸೂಕ್ತ ಅಂಕಿಅಂಶಗಳೊಂದಿಗೆ ಬಾರದ ಅಧಿಕಾರಿಗಳ ವಿರುದ್ಧ ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಗರದ ಐದೂ ಪಾಲಿಕೆಗಳಲ್ಲಿ ಬೀದಿ ದೀಪಗಳಿಗೆ ಪ್ರಸ್ತುತ ಪಾವತಿಸುತ್ತಿರುವ ವಿದ್ಯುತ್ ಬಿಲ್ ಎಷ್ಟು ಹಾಗೂ ಎಲ್‌ಇಡಿ ದೀಪ ಅಳವಡಿಸಿದ ಬಳಿಕ ಎಷ್ಟು ಉಳಿತಾಯವಾಗಲಿದೆ ಎಂಬ ಮಾಹಿತಿ ನೀಡುವಂತೆ ಕೇಳಿದಾಗ ಅಧಿಕಾರಿಗಳ ಬಳಿ ಅಧಿಕೃತ ಅಂಕಿಅಂಶಗಳೇ ಇರಲಿಲ್ಲ.
“ಬೇಸಿಕ್ ಡೇಟಾ ಇಲ್ಲ, ಪ್ರಶ್ನೆಗೆ ಉತ್ತರ ಇಲ್ಲ. ಸಭೆ ಕರೆದಾಗ ಕನಿಷ್ಠ ಸಿದ್ಧತೆಯೂ ಇಲ್ಲದೆ ಬರುವುದೇಕೆ? ಸರ್ಕಾರಿ ಕೆಲಸ ಅಂದರೆ ಕೈಬೀಸಿಕೊಂಡು ಬಂದು ಹೋಗಬಹುದು ಎಂಬ ಧೋರಣೆ ಬೆಳೆದಿದೆ. ಅಧಿಕಾರಿಗಳ ಇಂತಹ ವರ್ತನೆಯಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ,” ಎಂದು ಸಚಿವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಭೆಯಲ್ಲಿ ಮುಖ್ಯ ಆಯುಕ್ತ ಮಹೇಶ್ವರ ರಾವ್, ನಗರ ಪಾಲಿಕೆ ಆಯುಕ್ತರಾದ ಕೆ.ಎನ್. ರಮೇಶ್, ಡಾ. ರಾಜೇಂದ್ರ ಕೆ.ವಿ., ಮುಖ್ಯ ಎಂಜಿನಿಯರ್‌ಗಳಾದ ಆನಂದ್, ಸ್ವಯಂಪ್ರಭಾ ಸೇರಿದಂತೆ ವಿದ್ಯುತ್ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.


































