
ಬೆಂಗಳೂರು, ಆ.೫-ಕೆ.ಆರ್. ಮಾರುಕಟ್ಟೆಯಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಸ್ವಚ್ಛತೆ, ಸಂಚಾರ, ಅಗ್ನಿ ಸುರಕ್ಷತೆ ಹಾಗೂ ಸಾರ್ವಜನಿಕ ಸೌಲಭ್ಯಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಪಾಲಿಕೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚಿಸಿದರು.
ಮಾರುಕಟ್ಟೆ ಪ್ರದೇಶದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಅವರು, ಮಳೆನೀರು ನಿಲ್ಲುವ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಮಗ್ರ ಪ್ಲಂಬಿಂಗ್ ಹಾಗೂ ಒಳಚರಂಡಿ ವ್ಯವಸ್ಥೆ ರೂಪಿಸುವಂತೆ ನಿರ್ದೇಶಿಸಿದರು. ಅಗತ್ಯವಿರುವ ಕಡೆ ರಸ್ತೆ ಸಮತಟ್ಟುಗೊಳಿಸಿ ಕಾಂಕ್ರೀಟೀಕರಣ ಕೈಗೊಳ್ಳಬೇಕು. ಅನಗತ್ಯ ಕಂಬಗಳು, ಅಡೆತಡೆಗಳು ಹಾಗೂ ಒತ್ತುವರಿಗಳನ್ನು ತೆರವುಗೊಳಿಸಿ ವಾಹನ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದರು.
ತರಕಾರಿ ಹಾಗೂ ಹಣ್ಣು ಮಾರುಕಟ್ಟೆ ಮಾರ್ಗದಲ್ಲಿ ಅಗ್ನಿಶಾಮಕ ವಾಹನಗಳ ಸಂಚಾರಕ್ಕೆ ಕನಿಷ್ಠ ೬ ಮೀಟರ್ ಅಗಲದ ಪ್ರವೇಶ ಮಾರ್ಗ ಕಲ್ಪಿಸಬೇಕು. ಅಗ್ನಿ ಸುರಕ್ಷತೆಗೆ ಅಡ್ಡಿಯಾಗುವ ಎಲ್ಲ ಅಡೆತಡೆಗಳನ್ನು ತೆರವುಗೊಳಿಸುವಂತೆ ಸೂಚಿಸಿದರು.
ಮಾರುಕಟ್ಟೆ ಪ್ರವೇಶ ದ್ವಾರಗಳು, ತ್ಯಾಜ್ಯ ಸಂಗ್ರಹಣಾ ಕೇಂದ್ರಗಳು ಹಾಗೂ ಅಗ್ನಿ ಸುರಕ್ಷತಾ ವಲಯಗಳ ಬಳಿ ಅನಧಿಕೃತ ವಾಹನ ನಿಲುಗಡೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರಮುಖ ಪ್ರವೇಶ ದ್ವಾರಗಳಲ್ಲಿ ಬ್ಯಾರಿಕೇಡ್ ಅಳವಡಿಸುವ ಸಾಧ್ಯತೆಯನ್ನು ಪರಿಶೀಲಿಸುವಂತೆಯೂ ತಿಳಿಸಿದರು.
ತೆಂಗಿನಕಾಯಿ, ಬಾಳೆಹಣ್ಣು ಮಾರುಕಟ್ಟೆ ರಸ್ತೆ, ಹೋಟೆಲ್ ಮುಂಭಾಗ ಸೇರಿದಂತೆ ವಿವಿಧೆಡೆ ಇರುವ ಒತ್ತುವರಿಗಳನ್ನು ತೆರವುಗೊಳಿಸಬೇಕು. ಪಾದಚಾರಿ ಮಾರ್ಗಗಳಿಗೆ ಅಡ್ಡಿಯಾಗಿರುವ ವ್ಯಾಪಾರಿಗಳನ್ನು ಸ್ಥಳಾಂತರಿಸಿ, ಮಾರ್ಷಲ್‌ಗಳ ಮೂಲಕ ನಿರಂತರ ಮೇಲ್ವಿಚಾರಣೆ ನಡೆಸಬೇಕು ಎಂದರು.
ತ್ಯಾಜ್ಯ ನಿರ್ವಹಣೆಗೆ ಅಗತ್ಯ ಕ್ರೇಟ್‌ಗಳು ಬಂದಿರುವುದರಿಂದ ಕೂಡಲೇ ಕಾರ್ಯಾಚರಣೆ ಆರಂಭಿಸಬೇಕು. ಅಗತ್ಯವಿರುವ ಕಡೆ ಬಯೋಗ್ಯಾಸ್ ಶೆಡ್‌ಗಳನ್ನು ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಾಗಿ ಬಳಸಬೇಕು. ಟ್ರಾಲಿಗಳ ದುರಸ್ತಿಗೆ ಪ್ರತ್ಯೇಕ ಮೆಕ್ಯಾನಿಕ್ ನಿಯೋಜಿಸಬೇಕು ಎಂದು ಸೂಚಿಸಿದರು.
ಸರಕುಗಳ ಲೋಡಿಂಗ್ ಮತ್ತು ಅನ್‌ಲೋಡಿಂಗ್ ವ್ಯವಸ್ಥೆಯನ್ನು ನಗರ ವಿನ್ಯಾಸ ತಜ್ಞರ ಸಹಕಾರದೊಂದಿಗೆ ವೈಜ್ಞಾನಿಕವಾಗಿ ರೂಪಿಸುವಂತೆ ಮಹೇಶ್ವರ್ ರಾವ್ ನಿರ್ದೇಶನ ನೀಡಿದರು.
ಪಾರ್ಕಿಂಗ್ ಎಂಟ್ರಿ-೨ ಹಾಗೂ ಹೂ ಮಾರುಕಟ್ಟೆ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿ ಸಮರ್ಪಕ ನಿರ್ವಹಣೆ ಮಾಡುವಂತೆ ಸೂಚಿಸಿದರು. ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆಗೆ ಎಇಇ ಅಥವಾ ಸಮಾನ ಹುದ್ದೆಯ ಅಧಿಕಾರಿಯನ್ನು ವಿಶೇಷವಾಗಿ ನಿಯೋಜಿಸಿ, ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಸ್ಥಳ ಪರಿಶೀಲನೆ ವೇಳೆ ಕೇಂದ್ರ ನಗರ ಪಾಲಿಕೆ ಆಯುಕ್ತ ಜಿ. ಜಗದೀಶ್, ಅಪರ ಆಯುಕ್ತ ವೆಂಕಟಚಲಪತಿ, ಮುಖ್ಯ ಅಭಿಯಂತರ ವಿಜಯ್ ಕುಮಾರ್ ಹರಿದಾಸ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.


































