Home ಜಿಲ್ಲೆ ಹಂಪಾಪಟ್ಟಣಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರಿಗೆ ಶಾಸಕರಿಗೆ ಮನವಿ

ಹಂಪಾಪಟ್ಟಣಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರಿಗೆ ಶಾಸಕರಿಗೆ ಮನವಿ

Oplus_131072

ಸಂಜೆವಾಣಿ ವಾರ್ತೆ

ಹಗರಿಬೊಮ್ಮನಹಳ್ಳಿ, ಆ.5  ತಾಲೂಕಿನ  ಹಂಪಾಪಟ್ಟಣ ಗ್ರಾಮಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡುವಂತೆ ಒತ್ತಾಯಿಸಿ ಹಂಪಾಪಟ್ಟಣ ಪದವಿಪೂರ್ವ ಕಾಲೇಜು ಹೋರಾಟ ಸಮಿತಿ ವತಿಯಿಂದ ಕ್ಷೇತ್ರದ ಶಾಸಕ ಕೆ. ನೇಮಿರಾಜನಾಯ್ಕ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಲಾಯಿತು.

 ಹೋರಾಟ ಸಮಿತಿ ಸಂಚಾಲಕ ಬುಡ್ಡಿ ಬಸವರಾಜ್ ಮಾತನಾಡಿ, ಹಂಪಾಪಟ್ಟಣ ಗ್ರಾಮವು ಸುತ್ತಮುತ್ತಲಿನ ಸುಮಾರು 12 ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದ್ದು, ಈ ಭಾಗದ ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣಕ್ಕಾಗಿ ದೂರದ ಪಟ್ಟಣಗಳಿಗೆ ತೆರಳಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ. ರೈತರು, ಕೃಷಿ ಕೂಲಿ ಕಾರ್ಮಿಕರು ಹಾಗೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಹೆಚ್ಚಾಗಿ ವಿದ್ಯಾಭ್ಯಾಸ ಮಾಡುತ್ತಿದ್ದು  ಶೈಕ್ಷಣಿಕ ಹಿತದೃಷ್ಟಿಯಿಂದ ಗ್ರಾಮದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜು ಸ್ಥಾಪನೆ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಆಗಸ್ಟ್ 13ರಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಹಂಪಾಪಟ್ಟಣಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡುವ ಕುರಿತು ಪ್ರಸ್ತಾವನೆ ಮಂಡಿಸಿ, ಸರ್ಕಾರದಿಂದ ಶೀಘ್ರದಲ್ಲೇ ಕಾಲೇಜು ಮಂಜೂರು ಮಾಡಿಸಿಕೊಡುವಂತೆ ಅವರು ಶಾಸಕರಿಗೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಶಾಸಕ ಕೆ. ನೇಮಿರಾಜನಾಯ್ಕ ಅವರು, ಹಂಪಾಪಟ್ಟಣಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡುವ ಸಂಬಂಧ ಸರ್ಕಾರದ ಗಮನ ಸೆಳೆದು, ವಿಧಾನಸಭಾ ಅಧಿವೇಶನದಲ್ಲಿ ಈ ವಿಷಯವನ್ನು ಪ್ರಸ್ತಾಪಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಪತ್ರಿ ಎಲ್ಲಪ್ಪ, ಉಪಾಧ್ಯಕ್ಷ ಟಿ. ಮಂಜುನಾಥ, ಗ್ರಾಮ ಪಂಚಾಯಿತಿ ಸದಸ್ಯರಾದ ಸಿ.ಎಲ್. ಕುಮಾರ, ಮಂಜುಳಾ ಅಂಜನಪ್ಪ, ಹನುಮಕ್ಕ ಬಿ. ನಾಗರಾಜ್, ವಿಎಸ್ಎಸ್ಎನ್ ಅಧ್ಯಕ್ಷ ಕೆ. ಹುಲುಗಪ್ಪ, ಮುಖಂಡರಾದ ಎಸ್.ಎನ್. ಭಜಂತ್ರಿ, ಪತ್ರಿ ಎಲ್ಲಪ್ಪ, ವಿ. ಹನುಮಂತ, ಟೈಲರ್ ಹನುಮಂತ, ಗುಬ್ಬೆ ಅಂಜಿನಪ್ಪ, ಉಪ್ಪಾರ್ ಅಂಜನಪ್ಪ, ಜಿ. ಶ್ರೀನಿವಾಸ್, ಬೆಸ್ತರ್ ಮಂಜುನಾಥ್, ಬಂಟರ ಸೋಮನಾಥ್, ದಾದಾ, ಎಚ್. ರಮೇಶ್, ಪೂಜಾರ್ ಸೋಮಣ್ಣ, ಉಪ್ಪಾರ್ ಸೋಮಣ್ಣ, ಕಡ್ಲೆಪ್ಪ, ಹಡಗಲಿ ಖಾಜಾ, ಜಿ. ಪಕ್ಕೀರಪ್ಪ, ಕುಮಾರ, ಬಂಟರ ಮಂಜುನಾಥ, ಬರದೂರು ಸೋಮ, ಎನ್. ನಿಂಗರಾಜ್, ಎ. ಕೇಶವಮೂರ್ತಿ ಸೇರಿದಂತೆ ಗ್ರಾಮಸ್ಥರು, ಶಿಕ್ಷಣ ಪ್ರೇಮಿಗಳು ಹಾಗೂ ಪದವಿಪೂರ್ವ ಕಾಲೇಜು ಹೋರಾಟ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.