
ಹುಮನಾಬಾದ,ಆ 12 : ಪಟ್ಟಣದ ಆಶ್ರಯ ಕಾಲೋನಿಯಲ್ಲಿ ಒಂದೇ ಪ್ಲಾಟ್ ಅನ್ನು ಹಲವು ಬಾರಿ ಮಾರಾಟ ಮಾಡಿ ಬಡ ಕುಟುಂಬವೊಂದಕ್ಕೆ ಮೋಸ ಮಾಡಲಾಗಿದೆ ಎಂದು ಆರೋಪಿಸಿ, ಮೊದಲು ಪ್ಲಾಟ್ ಖರೀದಿಸಿದ ಕುಟುಂಬವು ಪತ್ರಿಕಾ ಗೋಷ್ಠಿ ನಡೆಸಿ ನ್ಯಾಯ ಕೋರಿದೆ.
2002ರಲ್ಲಿ ಆಶ್ರಯ ಕಾಲೋನಿಯಲ್ಲಿನ ಒಂದು ಪ್ಲಾಟ್ ಅನ್ನು ಮೊಹಮ್ಮದ್ ದಸ್ತಾಗೀರ್ ಉಸ್ಮಾನ್ ಸಾಬ್ ಎಂಬುವವರ ಹೆಸರಿಗೆ ಮಾರಾಟ ಮಾಡಲಾಗಿತ್ತು. ವರ್ಷಗಳ ಕಾಲ ಹಣ ಜಮಾ ಮಾಡಿ ಸ್ವಂತ ಮನೆ ಕಟ್ಟುವ ಕನಸು ಕಂಡಿದ್ದ ಈ ಕುಟುಂಬವು, ಈಗ ಮನೆ ನಿರ್ಮಾಣಕ್ಕೆ ಮುಂದಾದಾಗ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ.
ಪ್ಲಾಟ್ ಖರೀದಿಸಿದ ನಂತರವೂ ಅದೇ ಜಾಗವನ್ನು ಇನ್ನೊಬ್ಬರಿಗೆ ಮಾರಾಟ ಮಾಡಲಾಗಿದೆ. ಅದು ನಮ್ಮ ಹೆಸರಿನಲ್ಲಿದೆ ಎಂದು ತಿಳಿದಿದ್ದರೂ ಕೆಲವರು ಹಣ ವಾಪಸ್ ಪಡೆದಿದ್ದಾರೆ ಎಂದು ಕುಟುಂಬದವರು ಆರೋಪಿಸಿದರು.
ಇದೀಗ ಅದೇಪ್ರಕರಣವನ್ನು ಮತ್ತೆ ಮುಂದುವರೆಸಿರುವ ಅಂಗನವಾಡಿ ಕಾರ್ಯಕರ್ತೆ ಉಷಾದೇವಿ ಅವರು,ಆ ಪ್ಲಾಟ್ ಅನ್ನು ಆನ್‍ಲೈನ್ ಖಾತಾ ಮಾಡಿಸಿ ಮತ್ತೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.
ತಮ್ಮ ಜೀವನ ಬೀದಿಗೆ ಬಾರದಂತೆ ಸಂಬಂಧಪಟ್ಟ ಅಧಿಕಾರಿಗಳು ಮಧ್ಯಪ್ರವೇಶಿಸಿ ನ್ಯಾಯ ಒದಗಿಸಬೇಕುಎಂದು ಅವರು ಕೈಜೋಡಿಸಿ ಮನವಿ ಮಾಡಿದರು. ಆರೋಪದ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಈ ಪ್ರಕರಣದಲ್ಲಿ ಅಂಗನವಾಡಿ ಕಾರ್ಯಕರ್ತೆ ಉಷಾದೇವಿ ಅವರ ಪಾತ್ರದ ಬಗ್ಗೆ ಅನುಮಾನ ವ್ಯಕ್ತವಾಗಿದೆ.ಒಂದೇ ಆಸ್ತಿಯನ್ನು ಹಲವು ಬಾರಿ ಮಾರಾಟ ಮಾಡಿ ವಂಚನೆಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಸಂಬಂಧಪಟ್ಟ ಇಲಾಖೆಗಳು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು
ಹೊಟ್ಟೆ ಕಟ್ಟಿ ಹಣ ಕೂಡಿಸಿದ್ದೆವು
ನಾವು ಬಡತನದಲ್ಲಿ ಬದುಕುತ್ತಿದ್ದೇವೆ. ಹೊಟ್ಟೆಗೆ ತಿನ್ನದೇ ಕಷ್ಟಪಟ್ಟು ಹಣ ಜಮಾ ಮಾಡಿದ್ದೇವೆ. ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ.ಈಗ ಸ್ವಂತ ಮನೆ ಕಟ್ಟೋಣ ಎಂದು ಹೋದರೆ, ಪ್ಲಾಟ್ ಬೇರೆಯವರಿಗೆ ಮಾರಾಟವಾಗಿದೆ ಎಂದು ತಿಳಿದುಬಂತು. ಇದು ನಮಗೆ ಮಾಡಿದ ದೊಡ್ಡ ಅನ್ಯಾಯ ಎಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕುಟುಂಬದವರು ಕಣ್ಣೀರಿಟ್ಟರು.




























