Home ಮುಖಪುಟ ಸುದ್ದಿ ವಿದ್ಯುತ್ ಕಂಬಕ್ಕೆ ಬೊಲೆರೋ ಡಿಕ್ಕಿ: ಮೂವರು ಕೂಲಿ ಕಾರ್ಮಿಕರು ಸಾವು

ವಿದ್ಯುತ್ ಕಂಬಕ್ಕೆ ಬೊಲೆರೋ ಡಿಕ್ಕಿ: ಮೂವರು ಕೂಲಿ ಕಾರ್ಮಿಕರು ಸಾವು

ಯಾದಗಿರಿ.ಆ.೨೩ – ಕೂಲಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬೊಲೆರೋ ವಾಹನ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿರುವ ಘಟನೆ ಶಹಾಪುರ ತಾಲ್ಲೂಕಿನ ಮಡ್ನಾಳ್ ಗ್ರಾಮದ ಬಳಿ ನಡೆದಿದೆ.


ಮೃತರನ್ನು ಭಾಗ್ಯಶ್ರೀ (೩೫), ಸತ್ಯಮ್ಮ (೩೦) ಹಾಗೂ ಹೊನ್ನಿಂಗಮ್ಮ (೧೮) ಎಂದು ಗುರುತಿಸಲಾಗಿದೆ.


ಮಡ್ನಾಳ್ ಗ್ರಾಮದ ಸುತ್ತಮುತ್ತಲಿನ ಜಮೀನುಗಳಲ್ಲಿ ಹತ್ತಿ ಕಸ ತೆಗೆಯುವ ಕೂಲಿ ಕೆಲಸಕ್ಕೆ ಬೆಳಗಿನ ಜಾವ ತೆರಳಿದ್ದ ಕಾರ್ಮಿಕರು, ಕೆಲಸ ಮುಗಿಸಿಕೊಂಡು ಬೊಲೆರೋ ವಾಹನದಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆಬದಿಯ ವಿದ್ಯುತ್ ಕಂಬಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವಾಹನದಲ್ಲಿದ್ದ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದು,ಎಂಟು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನೆಲ್ಲಾ ಗಾಯಾಳುಗಳನ್ನು ಶಹಾಪುರ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಮೂವರು ಕೂಲಿ ಕಾರ್ಮಿಕರ ದುರಂತ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.


ಘಟನೆ ಕುರಿತು ಮಾಹಿತಿ ಪಡೆದ ಭೀ.ಗುಡಿ ಪೊಲೀಸ್ ಠಾಣೆಯ ಪಿಎಸ್‌ಐ ದೇವಿಂದ್ರರೆಡ್ಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಭೀ.ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.