
ರಾಮನಗರ, ಆ.೨೩- ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಗ್ಗೆ ಮಾಜಿ ಸಂಸದ ಡಿ.ಕೆ.ಸುರೇಶ್ ಹಾಗೂ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಮಾಡಿರುವ ಟೀಕೆಗಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ತಾಲೂಕಿನ ಅಕ್ಕೂರು ಗ್ರಾಮದಲ್ಲಿ ತೀವ್ರ ತಿರುಗೇಟು ನೀಡಿದ್ದಾರೆ.ನಿನ್ನೆ ಇಬ್ಬರು ಮಹಾನ್ ನಾಯಕರು, ಅಭಿವೃದ್ಧಿಯ ಹರಿಕಾರರು ಹೇಳಿಕೆ ಕೊಟ್ಟಿದ್ದಾರೆ. ನಾವು ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ ಅಂತಾರೆ. ಹೌದು ನಾವು ಕೈಮುಗಿಯೋದು ಸಂಸ್ಕೃತಿಯ ಬೃಂದಾವನಕ್ಕೆ, ಆದರೆ ಅವರದ್ದು ಸೂಟ್‌ಕೇಸ್ ಬೃಂದಾವನ ಎಂದು ಲೇವಡಿ ಮಾಡಿದರು.
ನೈಸ್ ರಸ್ತೆ ಬೃಹತ್ ಹಗರಣ:
ನೈಸ್ ರಸ್ತೆಗಾಗಿ ೨೦ ವರ್ಷದಿಂದ ರೈತರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಪರಿಹಾರದ ಹಣ ಕೊಟ್ಟಿಲ್ಲ. ಟೇಪ್ ಹಿಡಿದುಕೊಂಡು ಭೂಮಿ ದೋಖಾ ಮಾಡುವವರು ಅವರು. ಅಭಿವೃದ್ಧಿ ಹೆಸರಲ್ಲಿ ರೈತರ ಭೂಮಿ ವಶಪಡಿಸಿಕೊಂಡು ಕಳೆದ ೨೦ ವರ್ಷದಿಂದ ಅನಧಿಕೃತವಾಗಿ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಕರ್ನಾಟಕದ ಇತಿಹಾಸದಲ್ಲೇ ಇಂತಹ ಕೆಟ್ಟ ಹಗರಣ ನೋಡಲು ಸಾಧ್ಯವಿಲ್ಲ. ಈಗ ಕುಮಾರಸ್ವಾಮಿ ಕೇಂದ್ರದಲ್ಲಿ ಟೋಲ್ ನಿಲ್ಲಿಸಲಿ ಅಂತಾರೆ.
ಅವರಿಗೆ ಓದೋಕೆ ಬರುತ್ತಾ? ಸಬ್ಜೆಕ್ಟ್ ಗೊತ್ತಿದೆಯಾ? ಆ ರಸ್ತೆ ನ್ಯಾಷನಲ್ ಹೈವೇಗೆ ಸೇರಿದ್ದಲ್ಲ, ಅದು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸೇರಿದ್ದು. ಅಲ್ಲಿ ಟೋಲ್ ಕಲೆಕ್ಟ್ ಮಾಡುತ್ತಿರುವುದೇ ದೊಡ್ಡ ಅಕ್ರಮ. ಸರ್ಕಾರ ತಕ್ಷಣ ಕ್ರಮವಹಿಸಿ ಟೋಲ್ ಸಂಗ್ರಹ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಬಿಡದಿ ಟೌನ್‌ಶಿಪ್ ಸಮಿತಿ ರಚನೆಗೆ ಆಕ್ಷೇಪ:
ಬಿಡದಿ ಟೌನ್‌ಶಿಪ್‌ಗಾಗಿ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದ್ದೀರಿ. ಈ ಹಿಂದೆ ಅವರೇ ಬಿಡದಿಯ ಈಗಲ್ಟನ್ ವಿಚಾರದಲ್ಲಿ ಎಕರೆಗೆ ೧೨ ಕೋಟಿ ಪರಿಹಾರ ಕೊಡಬೇಕು ಎಂದು ತೀರ್ಪು ನೀಡಿದ್ದರು. ೧೦ ವರ್ಷದ ಹಿಂದೆಯೇ ೧೨ ಕೋಟಿ ಎಂದು ತೀರ್ಪು ಕೊಟ್ಟಿದ್ದಾರೆ. ಈಗ ಬಿಡದಿಯ ರೈತರ ಜಮೀನಿಗೆ ಎಷ್ಟು ಹಣ ಕೊಡಬೇಕು ಎಂದು ನಾನು ನಿವೃತ್ತ ನ್ಯಾಯಾಧೀಶರನ್ನು ಪ್ರಶ್ನಿಸುತ್ತೇನೆ. ಈ ಬಗ್ಗೆ ಸ್ಪಷ್ಟಪಡಿಸಿ ವರದಿ ಕೊಡಿ ಎಂದು ಸರ್ಕಾರವನ್ನು ಒತ್ತಾಯಿಸಿದರು.
೨೦ ವರ್ಷದಿಂದ ರೈತರಿಗೆ ಅನ್ಯಾಯ:
೪,೦೦೦ ಕುಟುಂಬಗಳಿಗೆ ನಿವೇಶನ ಕೊಡುತ್ತೇವೆ ಎಂದು ಹೇಳಿ ಕೊಡಲಿಲ್ಲ. ಭೂಮಿ ಕೊಟ್ಟ ರೈತರಿಗೆ ಇನ್ನೂ ದುಡ್ಡು ಕೊಟ್ಟಿಲ್ಲ. ಇದನ್ನು ನೋಡಿ ನಾನು ಧ್ವನಿ ಎತ್ತಿದ್ದೇನೆ ಹೊರತು ಅಭಿವೃದ್ಧಿಗೆ ಅಡ್ಡಿ ಮಾಡಲು ಅಲ್ಲ. ರೈತರು ಇನ್ನೂ ಎಷ್ಟು ವರ್ಷ ಕಾಯಬೇಕು? ನೈಸ್ ರಸ್ತೆ ಮಾಡಲು ಎಷ್ಟು ವರ್ಷ ಬೇಕು? ಈಗಾಗಲೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೆ ಆಗಿದೆ. ಹಿಂದೆ ಮಾಯಗನಹಳ್ಳಿ ಬಳಿ ಶಾಲಾ ಬಸ್ ಅಪಘಾತದಲ್ಲಿ ೮ ಮಕ್ಕಳು ಸತ್ತಾಗ, ಬೆಂಗಳೂರು-ಮೈಸೂರು ನಡುವೆ ದೊಡ್ಡ ರಸ್ತೆ ಮಾಡಬೇಕು ಎಂದು ದೇವೇಗೌಡರು ತೀರ್ಮಾನ ಮಾಡಿದ್ದರು. ಜನರಿಗೆ ಒಳ್ಳೆಯದು ಮಾಡಬೇಕೆಂದು ಕೆಲಸ ಮಾಡಿದವರು ನಾವು ಎಂದು ಹೇಳಿದರು.
ಡಿಕೆ ಬ್ರದರ್ಸ್ ವಿರುದ್ಧ ಹರಿಹಾಯ್ದ ಹೆಚ್‌ಡಿಕೆ:
ಕುಮಾರಸ್ವಾಮಿ ಪಾಪದ ಕೊಳೆಯನ್ನು ನಾವು ತೊಳೆಯುತ್ತಿದ್ದೇವೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಕಿಡಿಕಾರಿದ ಅವರು, ಕೊಳೆ ನಾ? ಎಲ್ಲಿದೆ ಕೊಳೆ? ನಾವು ರಾಮನಗರಕ್ಕೆ ಬಂದಾಗ ಕನಕಪುರ ಹೇಗಿತ್ತು? ಕನಕಪುರದಲ್ಲಿ ಬೀದಿ ಲೈಟ್ ಕಂಬ ಕೂಡ ಇರಲಿಲ್ಲ. ಕನಕಪುರಕ್ಕೆ ದೇವೇಗೌಡರು ವಿದ್ಯುತ್ ಕನೆಕ್ಷನ್ ಕೊಡಿಸುವಾಗ ಇವರು ಎಲ್ಲಿದ್ದರು? ಕೊತವಾಲನಿಗೆ ಎಂಡ ಕೊಡಲು ಬಾರ್‌ನಲ್ಲಿ ಕೂತಿದ್ದರು ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಇದು ಕೇವಲ ಜೆಡಿಎಸ್ ಕಾರ್ಯಕರ್ತರನ್ನ ಎತ್ತಿಕಟ್ಟುವ ವಿಚಾರವಲ್ಲ, ಇಡೀ ರಾಜ್ಯದ ಜನರೇ ಎದ್ದು ನಿಲ್ಲಬೇಕಾಗಿದೆ. ಅಂತಹ ದೊಡ್ಡ ಹಗರಣವಾಗಿದೆ. ರೈತರ ಭೂಮಿ ಲಪಟಾಯಿಸುವ ಕೆಲಸದ ವಿರುದ್ಧ ಧ್ವನಿ ಎತ್ತಲು ಜನ ನಮಗೆ ಶಕ್ತಿ ಕೊಟ್ಟಿದ್ದಾರೆ ಎಂದು ಹೇಳಿದರು.
ಪಾಪ ಈಗಿನ ಇಲ್ಲಿಯ ಶಾಸಕ ಒಂದು ಬಾರಿ ನನ್ನ ಜೊತೆಯಲ್ಲೇ ಇದ್ದ. ಆ ಟೈಮಲ್ಲಿ ಕಾಂಟ್ರಾಕ್ಟರ್ ೬೦೦ ಕೋಟಿ ಕೆಲಸ ಮಾಡಿದ್ದು ದುಡ್ಡು ಹೊಡೆದಾಗ, ಅಯ್ಯಯ್ಯೋ ಅಣ್ಣ ಆ ವಿಷಯ ಎತ್ತಬೇಡಣ್ಣ ಅಂತ ಕಾಲು ಹಿಡಿದುಕೊಳ್ಳಲು ಬಂದಿದ್ದ. ಅದನ್ನು ಅವರು ನೆನಸಿಕೊಳ್ಳಬೇಕು. ಇವನಿಂದ ನಾನು ಕಲಿಯಬೇಕಾ ಎಂದು ಸಚಿವ ಹೆಚ್.ಸಿ.ಬಾಲಕೃಷ್ಣ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

































