Home ಮುಖಪುಟ ಸುದ್ದಿ ಹೊರ್ಮುಜ್ ಜಲಸಂಧಿ ಅಮೆರಿಕದ ಹೊಸ ಭೂಭಾಗ ನಕ್ಷೆ ಹಂಚಿಕೊಂಡು ಇರಾನ್‌ಗೆ ಟ್ರಂಪ್ ಸವಾಲು

ಹೊರ್ಮುಜ್ ಜಲಸಂಧಿ ಅಮೆರಿಕದ ಹೊಸ ಭೂಭಾಗ ನಕ್ಷೆ ಹಂಚಿಕೊಂಡು ಇರಾನ್‌ಗೆ ಟ್ರಂಪ್ ಸವಾಲು

ವಾಷಿಂಗ್ಟನ್ / ಟೆಹ್ರಾನ್.ಆ. ೨೩- ಇರಾನ್ ಹಾಗೂ ಅಮೆರಿಕ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ, ಜಾಗತಿಕ ಇಂಧನ ಪೂರೈಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ’ಹೊರ್ಮುಜ್ ಜಲಸಂಧಿ’ಯನ್ನು ಅಮೆರಿಕದ ನಿಯಂತ್ರಣಕ್ಕೆ ತೆಗೆದುಕೊಳ್ಳುವುದಾಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮರಳಿ ಪ್ರತಿಪಾದಿಸಿದ್ದಾರೆ.

ಟ್ರಂಪ್ ಅವರು ತಮ್ಮ ಸಾಮಾಜಿಕ ಜಾಲತಾಣ ’ಟ್ರೂತ್ ಸೋಶಿಯಲ್’ನಲ್ಲಿ ಹೊರ್ಮುಜ್ ಜಲಸಂಧಿಯ ನಕ್ಷೆಯೊಂದನ್ನು ಹಂಚಿಕೊಂಡಿದ್ದು, ಅದನ್ನು “ಅಮೆರಿಕದ ಹೊಸ ಭೂಭಾಗ” ಎಂದು ಕರೆದಿದ್ದಾರೆ. ಜಾಗತಿಕ ಕಚ್ಚಾತೈಲ ಪೂರೈಕೆಯ ಶೇಕಡಾ ಐದನೇ ಒಂದು ಭಾಗ ಹಾದುಹೋಗುವ ಈ ಜಲಮಾರ್ಗದ ಮೇಲಿನ ಇರಾನ್ ದಿಗ್ಬಂಧನದಿಂದಾಗಿ ವಿಶ್ವದ ಸರಬರಾಜು ಸರಣಿ ಸಂಪೂರ್ಣವಾಗಿ ಏರುಪೇರಾಗಿದೆ. ಹೀಗಾಗಿ ಇದನ್ನು ಅಮೆರಿಕದ ಸುಪರ್ದಿಗೆ ಪಡೆಯುವುದು ಅಗತ್ಯ ಎಂದು ಟ್ರಂಪ್ ವಾದಿಸಿದ್ದಾರೆ.

ಇರಾನ್‌ನ ಉನ್ನತ ರಾಷ್ಟ್ರೀಯ ಭದ್ರತಾ ಮಂಡಳಿ ಕಾರ್ಯದರ್ಶಿ ಮೊಹ್ಸೇನ್ ರೇಝಾಯಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, “ಹಾರ್ಮುಜ್ ಜಲಸಂಧಿಯನ್ನು ಮರುಪ್ರಾರಂಭಿಸಲು ಅಮೆರಿಕಕ್ಕಿರುವ ಅಸಾಮರ್ಥ್ಯ ಮತ್ತು ಅದರ ಒಡೆತನದ ಪ್ರತಿಪಾದನೆಯ ನಡುವಿನ ಅಂತರವು ವಾಷಿಂಗ್ಟನ್ ಮತ್ತು ಜಲಸಂಧಿಯ ನಡುವಿನ ೭,೦೦೦ ಮೈಲಿಗಳಿಗಿಂತ ದೊಡ್ಡದಾಗಿದೆ. ಪರ್ಷಿಯನ್ ಕೊಲ್ಲಿಯಲ್ಲಿ ’ಅಮೆರಿಕ ನಂತರದ ಯುಗ’ಕ್ಕೆ ಸ್ವಾಗತ” ಎಂದು ತಿರುಗೇಟು ನೀಡಿದ್ದಾರೆ.

ಇನ್ನೊಂದೆಡೆ, ಸರಕು ಹಡಗುಗಳ ಸುರಕ್ಷಿತ ಸಂಚಾರಕ್ಕಾಗಿ ಇರಾನ್ ಮತ್ತು ಓಮನ್ ದೇಶಗಳು ಒಪ್ಪಂದ ಮಾಡಿಕೊಳ್ಳಲು ಮುಂದಾಗಿವೆ. ಆದರೆ, ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧ ಮತ್ತು ನೌಕಾ ದಿಗ್ಬಂಧನ ಹಿಂಪಡೆಯುವವರೆಗೆ ಜಲಸಂಧಿಯಲ್ಲಿ ಸಂಪೂರ್ಣ ಸುರಕ್ಷತೆ ಸಾಧ್ಯವಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಇರಾನ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳದಂತೆ ಓಮನ್‌ಗೆ ಬೆದರಿಕೆ ಹಾಕಿರುವ ಟ್ರಂಪ್, “ಓಮನ್ ಇದಕ್ಕೆ ಅಡ್ಡಿಪಡಿಸಿದರೆ, ಅವರ ವಿರುದ್ಧ ತೀವ್ರ ಮಿಲಿಟರಿ ದಾಳಿ ನಡೆಸಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ. ಈ ಮಧ್ಯೆ, ಮಿಲಿಟರಿ ಸಂಘರ್ಷದಲ್ಲಿ ಇದುವರೆಗೆ ೭೭೦ಕ್ಕೂ ಹೆಚ್ಚು ಅಮೆರಿಕನ್ನರು ಪ್ರಾಣ ಕಳೆದುಕೊಂಡಿದ್ದು, ಯುನೈಟೆಡ್ ಸ್ಟೇಟ್ಸ್‌ಗೆ ಈ ಯುದ್ಧವು ಭಾರೀ ದುಬಾರಿಯಾಗಿ ಪರಿಣಮಿಸುತ್ತಿದೆ.