Home ಜಿಲ್ಲೆ ಬಿ.ಎಲ್.ಡಿ.ಇ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪರಿಸರ ಸ್ನೇಹಿ ಕಾಗದದ ಚೀಲ ತಯಾರಿಕೆ ತರಬೇತಿ

ಬಿ.ಎಲ್.ಡಿ.ಇ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪರಿಸರ ಸ್ನೇಹಿ ಕಾಗದದ ಚೀಲ ತಯಾರಿಕೆ ತರಬೇತಿ

ಸಂಜೆವಾಣಿ ವಾರ್ತೆ,
ವಿಜಯಪುರ, ಆ.೧: ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಜೊತೆಗೆ ಪರಿಸರ ಸಂರಕ್ಷಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್ ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರ ಮತ್ತು ಸಬಲಾ-ಮಹಿಳಾ ಸಬಲೀಕರಣ ಘಟಕದ ವತಿಯಿಂದ ಬೋಧಕರ ಹೊರತಾದ ಮಹಿಳಾ ಸಿಬ್ಬಂದಿಗಾಗಿ ‘ಸ್ವಾವಲಂಬಿ ಸಬಲಾ’ ಶೀರ್ಷಿಕೆಯಡಿ ಉಪಯುಕ್ತ ಕಾಗದದ ಚೀಲ ಹಾಗೂ ಪ್ಯಾಕೆಟ್ ತಯಾರಿಕಾ ಕಾರ್ಯಾಗಾರ ಶುಕ್ರವಾರ ನಡೆಯಿತು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಎಸ್. ಪ್ರೌಢಶಾಲೆ ‘ಎ’ ವಿಭಾಗದ ನಿವೃತ್ತ ಕರಕುಶಲ ಶಿಕ್ಷಕಿ ಸಂಗೀತಾ ನಿಂಬಾಳ ಅವರು ವಿವಿಧ ಗಾತ್ರ ಮತ್ತು ಗುಣಮಟ್ಟದ ಕಾಗದದ ಚೀಲಗಳು ಹಾಗೂ ಪ್ಯಾಕೆಟ್‌ಗಳನ್ನು ತಯಾರಿಸುವ ವಿಧಾನವನ್ನು ಪ್ರಾಯೋಗಿಕವಾಗಿ ಪ್ರದರ್ಶಿಸಿದರು.
ಆಸ್ಪತ್ರೆ ಮತ್ತು ಮಹಾವಿದ್ಯಾಲಯದಲ್ಲಿ ಔಷಧ ವಿತರಣೆ ಸೇರಿದಂತೆ ದೈನಂದಿನ ಬಳಕೆಯಲ್ಲಿ ಇಂತಹ ಕಾಗದದ ಚೀಲಗಳ ಉಪಯುಕ್ತತೆಯನ್ನು ವಿವರಿಸಿದ ಅವರು, ಪ್ಲಾಸ್ಟಿಕ್‌ಗೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳ ಬಳಕೆ ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಮಾತನಾಡಿ, ಮಹಿಳಾ ಸಬಲೀಕರಣ ಘಟಕವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಬಲಪಡಿಸುವ ಸಂಕಲ್ಪವನ್ನು ವ್ಯಕ್ತಪಡಿಸಿದರು. ಈ ತರಬೇತಿಯಿಂದ ಮಹಿಳಾ ಸಿಬ್ಬಂದಿಗೆ ಹೆಚ್ಚುವರಿ ಆದಾಯ ಗಳಿಸುವ ಅವಕಾಶ ಸಿಗಲಿದ್ದು, ಆರ್ಥಿಕ ಸ್ವಾವಲಂಬನೆಗೆ ನೆರವಾಗುವುದರ ಜೊತೆಗೆ ಮಹಾವಿದ್ಯಾಲಯವನ್ನು ಪ್ಲಾಸ್ಟಿಕ್ ಮುಕ್ತ ಆವರಣವನ್ನಾಗಿಸುವ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಬಲಾ ಮಹಿಳಾ ಸಬಲೀಕರಣ ಘಟಕದ ಅಧ್ಯಕ್ಷೆ ಡಾ. ಅಶ್ವಿನಿ ಎ. ನಿಂಬಾಳ, ಸದಸ್ಯ ಕಾರ್ಯದರ್ಶಿ ವಿದ್ಯಾಲಕ್ಷ್ಮಿ ಪೂಜಾರಿ, ಡಾ. ಮಲ್ಲಮ್ಮಾ ಬಿರಾದಾರ, ಡಾ. ಕಸ್ತೂರಿ ಪಾಟೀಲ ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಾಗಾರದಲ್ಲಿ ಬೋಧಕರ ಹೊರತಾದ ಮಹಿಳಾ ಸಿಬ್ಬಂದಿ ಉತ್ಸಾಹದಿಂದ ಪಾಲ್ಗೊಂಡು ಕಾಗದದ ಚೀಲ ತಯಾರಿಕೆಯ ಕೌಶಲ್ಯವನ್ನು ಅಳವಡಿಸಿಕೊಳ್ಳುವ ಮೂಲಕ ಮಹಿಳಾ ಸಬಲೀಕರಣ ಮತ್ತು ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತುಕೊಂಡರು.