
ಚಿಂಚೋಳಿ,ಆ.7-ಬಹುಜನ ಸಮಾಜ ಪಕ್ಷದ ರಾಯಚೂರ ಉಸ್ತುವಾರಿ ಭೂಮನಂದ ರವರನ್ನು ಕೊಲೆ ಮಾಡಿರುವ ವ್ಯಕ್ತಿಗಳನ್ನು ಬಂಧಿಸುವಂತೆ ಮತ್ತು ಅವರ ಕುಟುಂಬಕ್ಕೆ ಭದ್ರತೆ ಹಾಗೂ ಪರಿಹಾರ ನೀಡುವಂತೆ ಆಗ್ರಹಿಸಿ ಬಿಎಸ್‍ಪಿ ವತಿಯಿಂದ ತಾಲ್ಲೂಕ ಆಡಳಿತ ಸೌಧದ ಆವರಣದಲ್ಲಿ ಪ್ರತಿಭಟನೆ ಮಾಡಲಾಯಿತು.
ಪ್ರತಿಭಟನೆಯನ್ನುದ್ದೇಶಿಸಿ ಚಿಂಚೋಳಿ ಬಹುಜನ ಸಮಾಜ ಪಕ್ಷದ ಉಸ್ತುವಾರಿ ಗೌತಮ್ ಬೋಮ್ನಳ್ಳಿ ಅವರು ಮಾತನಾಡಿ, ರಾಯಚೂರ ಜಿಲ್ಲಾ ದೇವದುರ್ಗಾ ತಾಲೂಕಿನ ಬಿ.ಎಸ್.ಪಿ ಪಕ್ಷದ ಜಿಲ್ಲಾ ಉಸ್ತವಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಭೂಮಾನಂದ್ ರವರನ್ನು 04-08-2026 ರಂದು ಸಂಜೆ ಕಿಡಿಗೇಡಿಗಳು ಕೊಲೆ ಮಾಡಿರುವುದ ತುಂಬ ಖಂಡನೀಯವಾಗಿರುತ್ತದೆ. ಈ ಸಂಬಂಧ ಘಟನೆಗೆ ಸಂಬಂಧಿಸದ ಯಾರೇ ಆಗಿರಲಿ ಅವರನ್ನು ಕೂಡಲೇ ಬಂಧಿಸಿ ಅವರ ಮೇಲೆ ಸುಕ್ತ ಕಾನೂನು ಕ್ರಮ ಕೈಗೊಂಡು ಅವರ ಆಸ್ತಿ ಮುಟ್ಟುಗೋಲು ಹಾಕಿ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಭೂಮಾನಂದ್ ರವರ ಹತ್ಯೆಯ ಕುರಿತು ಉನ್ನತ ಮಟ್ಟದ ನಿಷ್ಪಕ್ಷಪಾತ ತನಿಖೆಯನ್ನು ನಡೆಸಬೇಕು ಮತ್ತು ಮೃತರ ಕುಟುಂಬಕ್ಕೆ ಸಂಪೂರ್ಣ ಭದ್ರತೆ ಒದಗಿಸಬೇಕು, ಕುಟುಂಬಕ್ಕೆ ಸೂಕ್ತ ಪರಿಹಾರ ಹಾಗೂ ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ಉದ್ಯೋಗವನ್ನು ನೀಡಬೇಕು ಹಾಗೂ ಎಲ್ಲಾ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನಿನ ಅಡಿಯಲ್ಲಿ ಶಿಕ್ಷೆಗೆ ಒಳಪಡಿಸಬೇಕು ಪ್ರಕರಣದ ತನಿಖೆಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬಹುಜನ ಸಮಾಜ ಪಕ್ಷದ ತಾಲೂಕ್ ಅಧ್ಯಕ್ಷರಾದ ವೈಜನಾಥ ಬಿ ಮಿತ್ರಾ, ಪಕ್ಷದ ಮುಖಂಡರಾದ ರಮೇಶ್ ದೊಟಿಕೋಳ, ರಾಜೇಂದ್ರ ಹೊಸಮನಿ, ಲಕ್ಷ್ಮಿಕಾಂತ ಐನಾಪುರ,ದೀಲೀಪಕುಮಾರ ಬೋಮ್ನಳ್ಳಿ, ಅಕ್ಷಯಕುಮಾರ ಬೋಮ್ನಳ್ಳಿ, ರಾಹುಲ ಯಾಕಾಪುರ ಸುಲೇಪೇಟ, ಚಂದ್ರಶೇಖರ್ ಖೈತಾಪುರ, ರಘುವೀರ ಚಿಮ್ಮನಚೋಡ್, ರಾಮು ಭೋವಿ, ಅಂಬಣ್ಣ ಭೋವಿ, ಉಮೇಶ್ ಪೂಜಾರಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.































