
ಮಧುಗಿರಿ, ಜೂ. ೨- ತಂಬಾಕ ಜೀವ ತಿಂಬಾಕ. ಚಪಲ ತೊರೆಯಿರಿ, ಜೀವ ಉಳಿಸಿರಿ ಎಂದು ಸಾಹಿತಿ ಮ.ಲ.ನ.ಮೂರ್ತಿ ಹೇಳಿದರು.
ಪಟ್ಟಣದ ಟಿ.ವಿ.ವಿ ಬಿ ಎಡ್ ಕಾಲೇಜು ಮತ್ತು ಸಹೃದಯ ಬಳಗದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ “’ತಂಬಾಕು ರಹಿತ ದಿನ ’” ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತಂಬಾಕು ಉತ್ಪಾದನೆಯ ವಿವಿಧ ವಸ್ತುಗಳ (ಬೀಡಿ ಸಿಗರೇಟ್,ನಶ್ಯ,ಗುಟ್ಕಾ ಪಾನ್ ಮಸಾಲ,ಹುಕ್ಕಾ) ಬಳಕೆ ಮಾದಕ ವಸ್ತುಗಳ ಮೊದಲ ಹೆಜ್ಜೆ. ಮೊದಲು ಖುಷಿ ನೀಡಿದಂತೆ ಭ್ರಮೆಗೊಂಡರೂ ಅನಂತರ ಶ್ವಾಸನಾಳದ ತೊಂದರೆ, ಕ್ಯಾನ್ಸರ್, ಹೃದ್ರೋಗ, ಪುರುಷತ್ವ ಕ್ಷೀಣತೆಯಂತ ರೋಗಗಳು ವ್ಯಕ್ತಿಯನ್ನು ಮಾರಣಾಂತಿಕ ಹಂತಕ್ಕೂ ಕರೆದೊಯ್ಯುತ್ತವೆ ಎಂದು ಎಚ್ಚರಿಕೆ ನೀಡಿದರು. ಡಾ.ಜಿ.ಪಿ.ನಾಗರಾಜ್ ಮಾತನಾಡಿ, ಅಧಿಕ ರಕ್ತದೊತ್ತಡ, ಮಧುಮೇಹ, ಇದರ ದುಷ್ಪರಿಣಾಮ ಎಂದರು. ಗ್ರಂಥಪಾಲಕ ಜಿ.ಎಸ್ ನಾಗಭೂಷಣ ಮಾತನಾಡಿ, ಯುವ ಜನಾಂಗ ತಂಬಾಕು ಉತ್ಪನ್ನಗಳ ಬಳಕೆಗೆ ದಾಸರಾಗುತ್ತಿರುವುದು ವಿಷಾದನೀಯ ಎಂದರು.
ಕಾರ್ಯಕ್ರಮದಲ್ಲಿ ರಂಗಮ್ಮ,ರಾಮಣ್ಣ, ರಂಗನಾಥ್, ರಮೇಶ್, ರಂಜಿತಾ ಮತ್ತಿತರರು ಭಾಗವಹಿಸಿದ್ದರು.


































