Home ಮುಖಪುಟ ಸುದ್ದಿ ೩ನೇ ಹಂತದ ಕುಶಾಲತೋಪು ತಾಲೀಮು ಯಶಸ್ವಿ

೩ನೇ ಹಂತದ ಕುಶಾಲತೋಪು ತಾಲೀಮು ಯಶಸ್ವಿ

ಮೈಸೂರು, ಅ. ೧೨- ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ವಸ್ತು ಪ್ರದರ್ಶನ ಆವರಣದಲ್ಲಿ ನಡೆದ ೩ನೇ ಹಂತದ ಮತ್ತು ಅಂತಿಮ ಹಂತದ ಕುಶಾಲತೋಪು ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಗಜಪಡೆಯ ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ ಎಂದು ಹಿರಿಯ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ್ ತಿಳಿಸಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಮಾಹಿತಿ ನೀಡಿದರು.

ಎಲ್ಲಾ ಆನೆಗಳು ಫಿಟ್:೩ನೇ ಹಂತದ ತಾಲೀಮು ಯಶಸ್ವಿಯಾಗಿದ್ದು, ಎಲ್ಲಾ ಆನೆಗಳ ಆರೋಗ್ಯ ಉತ್ತಮವಾಗಿದೆ.
ಶ್ರೀರಂಗಪಟ್ಟಣ ದಸರಾಕ್ಕೆ ೩ ಆನೆಗಳು: ಶ್ರೀರಂಗಪಟ್ಟಣ ದಸರಾದಲ್ಲಿ ಧನಂಜಯ, ಲಕ್ಷ್ಮಿ, ರೂಪ ಆನೆಗಳು ಭಾಗವಹಿಸಲಿವೆ.


ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ:ಅಂಬಾರಿ ಹೊರುವ ಆನೆಯನ್ನು ಜಂಬೂಸವಾರಿಗೆ ಮೂರು ದಿನ ಇರುವಾಗಲೇ ಅಂತಿಮವಾಗಿ ಆಯ್ಕೆ ಮಾಡಲಾಗುವುದು.
ಅಂಬಾರಿ ರೇಸ್ ನಲ್ಲಿ ೪ ಆನೆಗಳು: ಪ್ರಶಾಂತ, ಸುಗ್ರೀವ, ಧನಂಜಯ ಮತ್ತು ಏಕಲವ್ಯ ಈ ನಾಲ್ಕು ಆನೆಗಳ ಪೈಕಿ ಒಂದು ಆನೆ ಅಂಬಾರಿ ಹೊರಲು ಫೈನಲ್ ಆಗಬಹುದು. ಈ ನಾಲ್ಕರ ಪೈಕಿ ಏಕಲವ್ಯ ಅತ್ಯಂತ ಕಿರಿಯ ಆನೆಯಾಗಿದ್ದು, ಸಮರ್ಥನಿದ್ದಾನೆ.


ಆಯ್ಕೆಯ ಮಾನದಂಡ: ಆನೆಗಳ ನಡಿಗೆ, ತಾಲೀಮಿನ ಸಮಯದಲ್ಲಿ ಮಾವುತನ ಕಮಾಂಡ್ ಅನ್ನು ಆನೆ ಹೇಗೆ ಸ್ವೀಕರಿಸುತ್ತದೆ ಎಂಬುದನ್ನು ಗಮನಿಸಿ ಅಂಬಾರಿ ಆನೆಯನ್ನು ಆಯ್ಕೆ ಮಾಡಲಾಗುತ್ತದೆ.

ಯಶಸ್ವಿ ಜಂಬೂಸವಾರಿಗೆ ನಮ್ಮ ಇಲಾಖೆ ಹಾಗೂ ಗಜಪಡೆ ಸಂಪೂರ್ಣ ಸನ್ನದ್ಧವಾಗಿದೆ ಎಂದು ಅವರು ತಿಳಿಸಿದರು.