
ಭಾಲ್ಕಿ: ನಮ್ಮಲ್ಲಿರುವ ಅಜ್ಞಾನ, ಅಂಧಕಾರದ ಕತ್ತಲೆ ಕಳೆಯಲು ಸದ್ಗುರುವಿನ ಜ್ಞಾನ ಅತ್ಯವಶ್ಯಕವಾಗಿದೆ ಎಂದು ಹಲಬರ್ಗಾ ಮಠದ ಶ್ರೀ ಹಾವಗಿಲಿಂಗೇಶ್ವರ ಶಿವಾಚಾರ್ಯರು ಪ್ರತಿಪಾದಿಸಿದರು.
ತಾಲೂಕಿನ ಹಲಬರ್ಗಾ ಗ್ರಾಮದ ಶ್ರೀ ರಾಚೋಟೇಶ್ವರ ಸಂಸ್ಥಾನ ಮಠದಲ್ಲಿ ಗುರುಪೂರ್ಣಿಮೆಯ ನಿಮಿತ್ಯ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮ ಹಾಗು ನಮ್ಮ ಕರ್ನಾಟಕ ಸೇನೆಯ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯ ಸಾನಿಧ್ಯವಹಿಸಿ ಅವರು ಮಾತನಾಡಿದರು. ನಮ್ಮ ಮನೆಯಲ್ಲಿನ ಕತ್ತಲೆ ಕಳೆಯಲು ದೀಪ ಹಚ್ಚುತ್ತೇವೆ, ಬ್ರಹ್ಮಾಂಡದ ಕತ್ತಲೆ ಅಳಿಸಲು ಸೂರ್ಯೋದಯವಾಗುತ್ತದೆ. ಪಿಂಡಾಂಡ ಅಂದರೆ ನಮ್ಮ ದೇಹದಲ್ಲಿನ ಕತ್ತಲೆ (ಅಜ್ಞಾನ) ಕಳೆಯ ಬೇಕಾದರೆ ಸದ್ಗುರುವಿನ ಜ್ಞಾನ ಪಡೆಯಬೇಕು. ಶ್ರೋತ್ರೀಯ ಸದ್ಗುರುವಿನ ಜ್ಞಾನದ ಹೊರತು ನಮ್ಮ ಅಜ್ಞಾನ ಅಳಿಸಲು ಸಾಧ್ಯವಿಲ್ಲ. ಶ್ರದ್ಧಾ ಭಕ್ತಿ, ಭಾವದಿಂದ ಗುರುವಿನ ಜ್ಞಾನ ಪಡೆದರೆ ಮಾತ್ರ ನಮ್ಮ ದೇಹದಲ್ಲಿನ ಅಂಧಕಾರ ಕಳೆಯಲು ಸಾಧ್ಯ. ಜೀವನದಲ್ಲಿ ಭಕ್ತಿ ಮತ್ತು ಸೇವೆ ಬಹಳ ಮಹತ್ವದ್ದಾಗಿವೆ. ಗುರು ಅಂದರೆ ಅದು ವ್ಯಕ್ತಿಯಲ್ಲ, ಅದೊಂದು ಅದ್ಭುತ ಶಕ್ತಿ ಎಂದು ತಿಳಿದಾಗ ಮಾತ್ರ ಅವರ ಜ್ಞಾನ ಅರಿಲಯ ಸಾಧ್ಯ ಎಂದು ಹೇಳಿದರು.
ಧನ್ನೂರ(ಹೆಚ್) ಪೊಲೀಸ್ ಠಾಣೆಯ ಪಿಎಸ್‍ಐ ರಾಜಕುಮಾರ ಜತಗೊಂಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀಮಠದ ಭಕ್ತರಾದ ಗುಂಡಯ್ಯಾ ಸ್ವಾಮಿ ತರನಳ್ಳಿ ಪಾದಪೂಜೆ ಹಾಗು ಪ್ರಸಾದ ಸೇವೆ ನಡೆಸಿಕೊಟ್ಟರು. ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷ ಗಣೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಸೇನೆಯ ಯುವಘಟಕದ ಅಧ್ಯಕ್ಷ ಸುದೀಪ, ಗಿರೀಶ ಬಿರಾದಾರ, ಬಸವರಾಜ ಕಾರಬಾರಿ, ಅನೀಲ ರಾಜಗೀರ, ಕಾಶಿನಾಥ ಚಳಕಾಪೂರೆ, ಸಂಗಮೇಶ ಮಾರ್ಗೆ, ಸಂಗಮೇಶ ಬಿರಾದಾರ, ಸಂತೋಷ ಪಾಟೀಲ, ಅನೀಲ ರೆಡ್ಡಿ, ರಾಜು ಕುಂಬಾರ, ಮಹಾರುದ್ರ, ವಿಜಯಕುಮಾರ ಪಾಂಚಾಳ, ರಮೇಶ ಸುತಾರ, ಡಾ| ಪ್ರವೀಣ, ಡಾ| ಸುಶೀಲಕುಮಾರ, ಮಹೇಶ ಮಠಪತಿ, ಕಾರ್ಯನಿರತ ಪತ್ರಕರ್ತರ ಸಂಘದ ಅಶೋಕ ರಾಜೋಳೆ, ಸಂತೋಷ ಬಿಜಿಪಾಟೀಲ, ಜಯರಾಜ ದಾಬಶೆಟ್ಟಿ, ಇಂದ್ರಜೀತ ಪಾಂಚಾಳ ಮತ್ತಿತರರು ಉಪಸ್ಥಿತರಿದ್ದರು.






























