
ಲಿಂಗಸುಗೂರು : ಸೃಷ್ಟಿ – ಸ್ಥಿತಿ ಲಯ ಈ ಮೂರು ಕಾರ್ಯಗಳನ್ನು ಬ್ರಹ್ಮ, ವಿಷ್ಣು, ಮಹೇಶ್ವರರು ನಿಭಾಯಿಸಿದರೆ, ಈ ತ್ರಿಮೂರ್ತಿಗಳ ಏಕ ಪ್ರತಿನಿಧಿಯಾಗಿ ಗುರು ಒಬ್ಬನೇ ಅವರ ಮೂರೂ ಕರ್ತವ್ಯಗಳನ್ನು ನಿರ್ವಹಿಸುತ್ತಾನೆ. ಹೀಗಾಗಿ ಬ್ರಹ್ಮ ವಿಷ್ಣು ಮಹೇಶ್ವರರಿಗಿಂತಲೂ ಗುರು ಶ್ರೇಷ್ಠವೆಂದು ಪರಿಗಣಿಸಲಾಗಿದೆ ಎಂದು ಜೇವರ್ಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸ ಪ್ರಾಧ್ಯಾಪಕ, ಗುವಿವಿ ಪದವಿ ಕಾಲೇಜುಗಳ ಕನ್ನಡ ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ. ಖಾಜಾವಲಿ ಈಚನಾಳ ಹೇಳಿದರು
ಅವರು ಲಿಂಗಸ್ಗೂರಿನ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘದ ಉದ್ಘಾಟನೆ ಮತ್ತು
ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯಲ್ಲಿ ಒಳ್ಳೆಯ ಆಲೋಚನೆ, ಗುಣ, ಸ್ವಭಾವಗಳನ್ನು ಸೃಷ್ಟಿಸುವ, ಸೃಷ್ಟಿಸಿದ ಸಕಾರಾತ್ಮಕ ಭಾವಗಳನ್ನು ಕಾಪಾಡುವ ಮತ್ತು ಮನುಷ್ಯನಲ್ಲಿರುವ ಕೆಟ್ಟ ಗುಣಗಳನ್ನು ಸುಟ್ಟು ಹಾಕುವ ಕಾರ್ಯವನ್ನು ಶಿಕ್ಷಕರರು ಮಾಡುತ್ತಾರೆ. ಅದಕ್ಕಾಗಿಯೇ ಸಾಕ್ಷಾತ್ ಪರಬ್ರಹ್ಮ ನೆಂದು ಹೇಳಲಾತ್ತದೆ.ಹರ ಮುನಿದರೆ ಗುರು ಕಾಯುವನು ಎಂಬ ಮಾತು ಜನಜನಿತ ವಾಗಿದೆ ಎಂದು ಅವರು ಹೇಳಿದರು.
ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಈ ದೆಶೆಯಲ್ಲಿ ಡಾ. ರಾಧಾಕೃಷ್ಣನ್ ಅವರ ಜೊತೆಗೆ ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್ ಮತ್ತು ಎಪಿಜೆ ಅಬ್ದುಲ್ ಕಲಾಂ ಅವರ ಸೇವೆಯನ್ನು ನಾವೆಂದೂ ಮರೆಯುವಂತಿಲ್ಲ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಲಿಂಗಸ್ಗೂರಿನ ತಹಶೀಲ್ದಾರ್ ಸತ್ಯಮ್ಮ ಅವರು ಮಾತನಾಡಿ, ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು. ನೀವು ಶಿಕ್ಷಕರ ಮಾರ್ಗದರ್ಶನದಲ್ಲಿ ಚೆನ್ನಾಗಿ ಅಧ್ಯಯನ ಮಾಡಿ ಭವಿಷ್ಯ ರೂಪಿಸಿಕೊಂಡು, ಕಲಿಸಿದ ಶಿಕ್ಷಕರಿಗೆ ಕೀರ್ತಿ ತರಬೇಕೆಂದು ವಿಧ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರು ಕೆ. ಸಿದ್ಧಲಿಂಗಪ್ಪ ಮಾತನಾಡಿ ಶಿಕ್ಷಕರ ವೃತ್ತಿ ಪವಿತ್ರವಾಗಿದೆ. ಎಲ್ಲಾ ವೃತ್ತಿಗಳಿಗಿಂತ ಶ್ರೇಷ್ಠವಾಗಿದೆ. ನೀವು ಉತ್ತಮ ಫಲಿತಾಂಶ ಪಡೆಯುವ ಮೂಲಕ ಅವರಿಗೆ ಗುರುಕಾಣಿಕೆ ಸಲ್ಲಿಸಬೇಕೆಂದು ತಿಳಿಸಿದರು.
ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಬಸಲಿಂಗಪ್ಪ ಐದನಾಳ ಪ್ರಾಸ್ತಾವಿಕ ಮಾತನಾಡಿದರು. ಮಂಜುಳಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು ದೇವಕ್ಕ ಅತಿಥಿಗಳ ಪರಿಚಯ ಮಾಡಿದರು. ಪದ್ಮಾವತಿ ಹೆರೂರ್ ಸ್ವಾಗತಿಸಿದರು. ಕ್ರೀಡಾ ಸಲಹೆಗಾರ ನಾಗರಾಜ್, ಹಿರಿಯ ಉಪನ್ಯಾಸಕರಾದ ಶರಣಬಸವರಾಜ್ ಕಾಚಾಪೂರ, ರುದ್ರಪ್ಪ ಅಂಗಡಿ ಸೇರಿದಂತೆ ಎಲ್ಲಾ ವಿಭಾಗಗಳ ಉಪನ್ಯಾಸಕರು ವಿದ್ಯಾರ್ಥಿ ಹಾಗೂ ಕ್ರೀಡಾ ಸಂಘದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.




















