
ಔರಾದ್ : ಜೂ.1:ಸಮಾಜದ ಅಭಿವೃದ್ಧಿಗೆ ಶಿಕ್ಷಣವೇ ಮೂಲ ಆಧಾರವಾಗಿದ್ದು, ಉತ್ತಮ ಶಿಕ್ಷಣದ ಮೂಲಕವೇ ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಸಾಧ್ಯ ಎಂದು ಮೆಹಕರ್ ತಡೋಳಾ ಮಠದ ಪೂಜ್ಯರಾದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ತಾಲೂಕಿನ ಸಂತಪುರ ಭಾರತ ಕಲ್ಯಾಣ ಮಂಟಪದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಶಿಕ್ಷಣ ಪ್ರೇಮಿ ಗುರುನಾಥ ದೇಶಮುಖ ಅವರ ಅಭಿನಂದನಾ ಸಮಾರಂಭ ಹಾಗೂ ನಡೆದ ಅತ್ಯುತ್ತಮ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು “ಉತ್ತಮ ಶಿಕ್ಷಣ ಕ್ರಾಂತಿಗೆ ಮುನ್ನುಡಿ ಬರೆಯುತ್ತದೆ ಅದರಂತೆ ಶಿಕ್ಷಕರು ಮಕ್ಕಳಿಗೆ ಉತ್ತಮ ಸಂಸ್ಕಾರಿಯುತ ಶಿಕ್ಷಣ ನೀಡುತ್ತಾ ವಿದ್ಯಾರ್ಥಿಗಳ ಮನೋಬಲ ಹೆಚ್ಚಿಸುವ ಕಾರ್ಯ ಮಾಡುತ್ತಾ ಬರುತ್ತಿರುವುದು ಶ್ಲಾಘನೀಯ “ಶಿಕ್ಷಕ ವೃತ್ತಿಗೆ ನಿವೃತ್ತಿ ಇಲ್ಲ ಅದು ಸದಾ ಕಾಲ ಬೆಳಗುವ ಜ್ಯೋತಿ” ಅದರಂತೆ ನಾವುಗಳು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ನೈತಿಕ ಮೌಲ್ಯಗಳು ಒದಗಿಸುವುದು ಇಂದಿನ ಅಗತ್ಯವಾಗಿದೆ ಎಂದು ತಿಳಿಸಿದರು.
ಶಿಕ್ಷಣ ಪ್ರೇಮಿ ಬಸವರಾಜ ಪಾಟೀಲ ಸೇಡಂ ಅವರು ಮಾತನಾಡಿ ನಾವು ನಮ್ಮ ಮಕ್ಕಳನ್ನು ಅಂಕಗಳ ಗಳಿಕೆಗೆ ಸೀಮಿತವಾಗಿರಿಸದೆ, ವ್ಯಕ್ತಿತ್ವ ವಿಕಸನ, ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಹಕಾರಿಯಾಗುವಂತಹ ನಿರ್ಮಾಣ ಮಾಡಬೇಕು, ನಮ್ಮ ಮಕ್ಕಳ ಕೈಗಳು ಬೇಡುವ ಕೈಗಳಾಗದೆ ಕೊಡುವ ಕೈಗಳಾಗಬೇಕು ಎಂದು ತಿಳಿಸಿದರು.
ಈ ವೇಳೆ ತಾಲೂಕಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದೇವರು, ವಿಧಾನ ಪರಿಷತ್ ಸದಸ್ಯ ಶಶೀಲ ನಮೋಶಿ, ಮಾಜಿ ಶಾಸಕ ಗುಂಡಪ್ಪ ವಕೀಲ, ರೇವಣಸಿದ್ದಪ್ಪ ಜಲಾದೆ, ವಿಜಯಕುಮಾರ ಬಾಬಣೆ, ಗುರುನಾಥ ದೇಶಮುಖ, ಪ್ರವೀಣ ದೇಶಮುಖ, ಬಾಲಾಜಿ ಅಮರವಾಡಿ, ಗುರುನಾಥ ರೆಡ್ಡಿ, ಅಶೋಕ ಶೆಂಬೆಳ್ಳಿ, ಆನಂದ ದ್ಯಾಡೆ, ಅಮರಸ್ವಾಮಿ ಸ್ಥಾವರಮಠ, ಅಂಬಾದಾಸ ನಳಗೆ ಸೇರಿದಂತೆ ಅನೇಕರಿದ್ದರು.






























