
ಜಮಖಂಡಿ:ಜೂ.2: ತಾಲೂಕಿನ ನಾಗನೂರು ಗ್ರಾಮದ ತೋಟದ ಮನೆಯಲ್ಲಿ ವಾಸವಾಗಿದ್ದ ಬಾಲಕನೊಬ್ಬ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶವವನ್ನು ಹೊರತೆಗೆದು (ಎಕ್ಸ್‍ಹ್ಯೂಮೇಷನ್) ಮರಣೋತ್ತರ ಪರೀಕ್ಷೆ ನಡೆಸುವ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ಜಮಖಂಡಿ ಉಪವಿಭಾಗ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಮುದೇಗೌಡ ತಿಳಿಸಿದ್ದಾರೆ.
ಫೆಬ್ರವರಿ 12, 2026ರಂದು ಜಂಬಗಿ-ಕೇಡಿ ಒಳರಸ್ತೆಯಲ್ಲಿ ಸಂಜೆ ಸುಮಾರು 5 ಗಂಟೆ ಸುಮಾರಿಗೆ ಬಾಲಕ ಅಪಘಾತಕ್ಕೊಳಗಾಗಿದ್ದನು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದರೂ, ಏಪ್ರಿಲ್ 16ರಂದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಆದರೆ ಮೃತ್ಯುವಿನ ಬಳಿಕ ಕಾನೂನು ಪ್ರಕಾರ ಪೆÇಲೀಸರಿಗೆ ಮಾಹಿತಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಬೇಕಿದ್ದರೂ, ಅದು ನಡೆಯದೆ ಮೃತದೇಹವನ್ನು ಸಮಾಧಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ನಂತರ ಪ್ರಕರಣದ ಕುರಿತು ಪೆÇಲೀಸ್ ಇಲಾಖೆ ಮರುಪರಿಶೀಲನೆ ನಡೆಸಿ, ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಅವರ ಆದೇಶದ ಮೇರೆಗೆ ಎಕ್ಸ್‍ಹ್ಯೂಮೇಷನ್ ಪ್ರಕ್ರಿಯೆ ಆರಂಭಿಸುವ ಕುರಿತು ಚರ್ಚೆ ನಡೆಸಲಾಯಿತು.
ಸ್ಥಳಕ್ಕೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್, ತಹಶೀಲ್ದಾರ್ ಅನೀಲ ಬಡಗೇರ, ಪಿಎಸ್‍ಐ ಅಪ್ಪಣ್ಣ ಐಗಾಳಿ ನೇತೃತ್ವದ ಪೆÇಲೀಸ್ ಅಧಿಕಾರಿಗಳು, ಪಿಡಿಒ ಸಂಜು ಮಲಕಣ್ಣವರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಕರಣದ ಸಂಕೀರ್ಣತೆಯನ್ನು ಪರಿಗಣಿಸಿ ಸಾಮಾನ್ಯ ವೈದ್ಯರ ಬದಲಿಗೆ ಫಾರೆನ್ಸಿಕ್ ಮೆಡಿಸಿನ್ ತಜ್ಞರ ಸಮ್ಮುಖದಲ್ಲೇ ಮರಣೋತ್ತರ ಪರೀಕ್ಷೆ ನಡೆಸಬೇಕು ಎಂಬ ಅಭಿಪ್ರಾಯ ಹಿರಿಯ ಅಧಿಕಾರಿಗಳಿಂದ ವ್ಯಕ್ತವಾಗಿದೆ.
ಯಾವುದೇ ಸಾಕ್ಷ್ಯ ನಾಶವಾಗದಂತೆ ಹಾಗೂ ಯಾರಿಗೂ ಅನ್ಯಾಯವಾಗದ ಉದ್ದೇಶದಿಂದ ಫಾರೆನ್ಸಿಕ್ ತಜ್ಞರ ಉಪಸ್ಥಿತಿಯಲ್ಲಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಈ ಕಾರಣದಿಂದ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ ಒಂದು ವಾರದೊಳಗೆ ಸೂಕ್ತ ದಿನಾಂಕ ನಿಗದಿಪಡಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.






























