
ಜಮಖಂಡಿ, ಜೂ 28:ತಾಲೂಕಿನ ಹುನ್ನೂರ ಗ್ರಾಮದ ಸಮೀಪ ರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮಳ್ಳಿ ತುಂಬಿದ್ದ ಟ್ಯಾಂಕರ್ ತೆರೆದ ಬಾವಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ.
ಮೃತ ಚಾಲಕನನ್ನು ಅಥಣಿ ತಾಲೂಕಿನ ಬಳವಾಡ ಗ್ರಾಮದ 35 ವರ್ಷದ ಮಂಜುನಾಥ ಅಪ್ಪಾಸಾಹೇಬ ಅಟವಾಳಕರ ಎಂದು ಗುರುತಿಸಲಾಗಿದೆ.
ಚಾಲಕ ಮಂಜುನಾಥ ಅವರು ಹಿಪ್ಪರಗಿ ಕಡೆಯಿಂದ ಕಾರ್ಖಾನೆಯ ಮಳ್ಳಿಯನ್ನು ಟ್ಯಾಂಕರ್‍ನಲ್ಲಿ ತುಂಬಿಕೊಂಡು ಜಮಖಂಡಿ ಕಡೆಗೆ ಬರುತ್ತಿದ್ದ ವೇಳೆ, ಹುನ್ನೂರ ಗ್ರಾಮದ ಬಿಳ್ಳೂರ ತೋಟದ ಸಮೀಪ ವಾಹನದ ಮೇಲಿನ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಟ್ಯಾಂಕರ್ ರಸ್ತೆ ಬದಿಯಿಂದ ನೇರವಾಗಿ ಬಿಳ್ಳೂರ ಅವರ ತೋಟದಲ್ಲಿದ್ದ ಸುಮಾರು 150 ಅಡಿ ಆಳದ ತೆರೆದ ಬಾವಿಗೆ ಉರುಳಿ ಬಿದ್ದಿದೆ ಎಂದು ತಿಳಿದು ಬಂದಿದೆ.
ಅಪಘಾತದ ತೀವ್ರತೆ ಹಾಗೂ ಬಾವಿಯ ಆಳ ಹೆಚ್ಚಾಗಿದ್ದರಿಂದ ಚಾಲಕ ಮಂಜುನಾಥ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಜಮಖಂಡಿ ಗ್ರಾಮೀಣ ಪೆÇಲೀಸ್ ಠಾಣೆಯ ಎಎಸ್‍ಐ ಮಾಚಕನೂರ ಹಾಗೂ ಸಿಬ್ಬಂದಿ ಮಹೆಬೂಬ ಕೆರೂರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ಇಲಾಖೆಯ ಅಧಿಕಾರಿ ಎಂ.ಎಸ್. ಹುಗಾರ, ಟಿ.ವೈ. ಭಂಡಾರಿ, ಎ.ವೈ. ಹಣಮರಟ್ಟಿ, ವಿ.ಎಚ್. ಇಮ್ಮನ್ನವರ, ಕೆ.ಬಿ. ದೋಡಮನಿ, ಡಿ.ವೈ. ಗಣಾಚಾರಿ, ಬಿ.ವೈ. ಬಿರಾದಾರ ಹಾಗೂ ಬಿ.ವೈ. ಮೆಳ್ಳಿಗೆರಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಬಾವಿಯಿಂದ ಹೊರತೆಗೆದಿದ್ದಾರೆ.
ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಮಖಂಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ದುರಂತದ ಹಿನ್ನೆಲೆಯಲ್ಲಿ ತೆರೆದ ಬಾವಿಗಳಿಗೆ ಸುರಕ್ಷತಾ ತಡೆಗೋಡೆ ಅಥವಾ ತಂತಿ ಬೇಲಿ ಅಳವಡಿಸುವಂತೆ ಸರ್ಕಾರದ ಆದೇಶವಿದ್ದರೂ, ಹಲವೆಡೆ ಅದನ್ನು ಪಾಲಿಸದಿರುವುದೇ ಇಂತಹ ಅವಘಡಗಳಿಗೆ ಕಾರಣವಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.






















