
ನರೇಗಲ್ಲ,ಅ.೮: ಸ್ಥಳೀಯ ಹಿರೇಮಠದ ಜಾತ್ರಾ ಮಹೋತ್ಸವವು ನವೆಂಬರ್ ೨೯ರಿಂದ ಪ್ರಾರಂಭವಾಗಿ ಡಿಸೆಂಬರ್ ೭ ವರೆಗೆ ಒಂಬತ್ತು ದಿನಗಳ ಕಾಲ ನಡೆಯಲಿದೆ ಎಂದು ಮಠದ ಪೀಠಾಧ್ಯಕ್ಷರಾದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಹಿರೇಮಠದ ಸಭಾಭವನದಲ್ಲಿ ಜರುಗಿದ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಧಾರ್ಮಿಕ ಆಚರಣೆಗಳು ಕೇವಲ ಸಂಪ್ರದಾಯಕ್ಕೆ ಸೀಮಿತವಾಗದೆ, ಸಮಾಜದಲ್ಲಿ ನೈತಿಕತೆ, ಸದಾಚಾರ, ಭಕ್ತಿ ಹಾಗೂ ಮಾನವೀಯ ಮೌಲ್ಯ ಬೆಳೆಸುವಂತಾಗಬೇಕು. ಮುಂದಿನ ವರ್ಷದ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹಿರೇಮಠದ ಪರಂಪರೆ ಹಾಗೂ ಶ್ರೀಗಳ ಸೇವಾ ಕಾರ್ಯ ಸ್ಮರಿಸುವ ಪುಣ್ಯಸ್ಮರಣೋತ್ಸವ ದಶಮಾನೋತ್ಸವ, ತಮ್ಮ ಜನೋತ್ಸವದ ಸುವರ್ಣ ಮಹೋತ್ಸವ ಹಾಗೂ ಪಟ್ಟಾಧಿಕಾರದ ರಜತ ಮಹೋತ್ಸವ ಆಚರಣೆಯೂ ಜರುಗಲಿರುವುದು ವಿಶೇಷ. ಈ ಹಿನ್ನೆಲೆಯಲ್ಲಿ ಭಕ್ತರು, ಸಾರ್ವಜನಿಕರು ಹಾಗೂ ಮಠದ ಅಭಿಮಾನಿಗಳು ಸಹಕರಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದರು. ಡಾ. ರಾಜೇಂದ್ರ ಗಚ್ಚಿನಮಠ, ಎಂ.ಎಸ್ ಧಡೇಸೂರಮಠ, ಹುಚ್ಚೀರಪ್ಪ ಈಟಿ, ಮಹಾದೇವಪ್ಪ ಬೇವಿನಕಟ್ಟಿ,ಮುತ್ತಣ್ಣ ಪಲ್ಲೇದ, ಅರುಣ ಕುಲಕರ್ಣಿ, ಡಿ.ಎ ಅರವಟಗಿಮಠ, ಮೈಲಾರಪ್ಪ ಚಳ್ಳಮರದ, ಕಳಕಪ್ಪ ಕಳಕೊಣ್ಣವರ, ಈಶ್ವರ ಬೆಟಗೇರಿ, ಸೇರಿದಂತೆ ಸುತ್ತಮುತ್ತಲಿನ ಹಾಗೂ ಮಜಿರೆ ಹಳ್ಳಿಗಳ ಭಕ್ತರು ಇದ್ದರು.























