Home ಜಿಲ್ಲೆ ಜಿಲ್ಲೆಯಿಂದ ಯಾರೂ ವಲಸೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಸಚಿವ ಈಶ್ವರ ಖಂಡ್ರೆ

ಜಿಲ್ಲೆಯಿಂದ ಯಾರೂ ವಲಸೆ ಹೋಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ: ಸಚಿವ ಈಶ್ವರ ಖಂಡ್ರೆ

ಬೀದರ್ ಜು.೩೦:: ಜಿಲ್ಲೆಯಲ್ಲಿ ಯಾವೊಬ್ಬ ವ್ಯಕ್ತಿಯೂ ವಲಸೆ (ಗೊಳೆ) ಹೋಗದಂತೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಬೇಕು. ವಲಸೆ ಹೋಗುವುದು ಕಂಡುಬAದಲ್ಲಿ ಸಂಬAಧಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಬೀದರ ಜಿಲ್ಲಾ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಬುಧವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆಗಳು, ವಿಬಿಜಿ ರಾಮ್‌ಜಿ ಹಾಗೂ ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಬಿಜಿ ರಾಮ್‌ಜಿ ಯೋಜನೆಯಡಿಯಲ್ಲಿ ವೈಯಕ್ತಿಕ ಹಾಗೂ ಗುಂಪುಗಳಾಗಿ ಮಾನವ ದಿನಗಳನ್ನು ಸೃಷ್ಟಿಸಲು ಸಾಕಷ್ಟು ಅವಕಾಶಗಳಿದ್ದು, ಇದರಿಂದ ವಲಸೆ ಹೋಗುವುದನ್ನು ತಡೆಗಟ್ಟಬಹುದಾಗಿದೆ. ಯೋಜನೆಯಡಿ ಕೆಲಸ ಬಯಸಿ ಬಂದವರಿಗೆ ತಕ್ಷಣ ಉದ್ಯೋಗ ನೀಡಿ ಜಾಬ್ ಕಾರ್ಡ್ ನೀಡಲು ಕ್ರಮ ವಹಿಸಬೇಕು ಎಂದು ಹೇಳಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಗ್ರಂಥಾಲಯಗಳಿದ್ದು, ಓದಲು ಬರುವವರಿಗೆ ಅಗತ್ಯಕ್ಕೆ ಅನುಗುಣವಾಗಿ ಪುಸ್ತಕಗಳು ದೊರೆಯುವಂತಾಗಬೇಕು. ಅದರೊಂದಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೬೪೪ ಗ್ರಾಮಗಳನ್ನು ‘ಹರ್ ಘರ್ ಜಲ್’ ಗ್ರಾಮಗಳೆಂದು ಘೋಷಿಸಲಾಗಿದೆ. ಆದರೆ ಇದು ಘೋಷಣೆಗೆ ಮಾತ್ರ ಸೀಮಿತವಾಗದೆ, ಪ್ರತಿಯೊಂದು ಮನೆಗೂ ನಿರಂತರವಾಗಿ ಕುಡಿಯುವ ನೀರು ತಲುಪುತ್ತಿರುವುದನ್ನು ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು (ಇಒ) ಹಾಗೂ ತಹಶೀಲ್ದಾರರು ಜಂಟಿಯಾಗಿ ಪರಿಶೀಲಿಸಬೇಕು. ಪ್ರತಿಯೊಂದು ಘೋಷಿತ ಗ್ರಾಮಕ್ಕೆ ಭೇಟಿ ನೀಡಿ, ಮನೆ ಮನೆಗೂ ನೀರು ತಲುಪುತ್ತಿದೆಯೇ ಎಂಬುದನ್ನು ಖಾತರಿಪಡಿಸಿಕೊಂಡು, ಸಮಸ್ಯೆಗಳಿದ್ದಲ್ಲಿ ೧೫ ದಿನಗಳೊಳಗೆ ಅವುಗಳನ್ನು ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ಗಡುವು ನೀಡಿದರು.
ಡಿ.ಎ.ಪಿ ಹಾಗೂ ರಸಗೊಬ್ಬರದ ಅಭಾವ ಹಲವೆಡೆ ಕಂಡುಬAದಿದ್ದು, ರೈತರಿಗೆ ಯಾವುದೇ ರೀತಿಯ ಗೊಬ್ಬರದ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. ರೈತರು ಬೆಳೆ ವಿಮೆ ಮಾಡಿಸಲು ಬಂದಾಗ ಅವರನ್ನು ಮರಳಿ ಕಳುಹಿಸದೇ ಬೆಳೆ ವಿಮೆ ನೋಂದಾಯಿಸಿಕೊಳ್ಳಲು ಅವಕಾಶ ನೀಡಬೇಕು. ಈ ಕುರಿತು ಲೀಡ್ ಬ್ಯಾಂಕ್ ಅಧಿಕಾರಿಗಳೊಂದಿಗೆ ಸಮನ್ವಯ ಸಭೆ ನಡೆಸಿ ರೈತರಿಗೆ ತೊಂದರೆಯಾಗದAತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಜಿಲ್ಲೆಯಲ್ಲಿರುವ ‘ಗ್ರಾಮ ಒನ್’ ಕೇಂದ್ರಗಳಲ್ಲಿ ಸಾರ್ವಜನಿಕರು ವಿವಿಧ ಯೋಜನೆಗಳಡಿ ಅರ್ಜಿ ಸಲ್ಲಿಸಲು ಬಂದಾಗ ನಿಗದಿತ ಶುಲ್ಕಕ್ಕಿಂತ ಹೆಚ್ಚಿನ ಹಣ ಪಡೆಯಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಂತಹ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ವರದಿ ನೀಡುವಂತೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ, ಮಹಾನಗರ ಪಾಲಿಕೆ ಆಯುಕ್ತ ಮುಕುಲ್ ಜೈನ್ ಹಾಗೂ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.