
ನವದೆಹಲಿ, ಆ. ೩- ಅರ್ಹತಾ ಆಧಾರಿತ ಶೈಕ್ಷಣಿಕ ಪ್ರವೇಶ ಪ್ರಕ್ರಿಯೆಯಲ್ಲಿ ಅನ್ಯಾಯಕ್ಕೊಳ ಗಾದ ಅರ್ಹ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಲು ಅಪರೂಪದ ಪ್ರಕರಣಗಳಲ್ಲಿ ಹೆಚ್ಚುವರಿ ಸೀಟು ಸೃಷ್ಟಿಸಲು ಅಥವಾ ಖಾಲಿ ಇರುವ ಸೀಟನ್ನು ಪರಿವರ್ತಿಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಯಾವುದೇ ತಪ್ಪಿಲ್ಲದಿದ್ದರೂ ಆಡಳಿತಾತ್ಮಕ ಗೊಂದಲಗಳಿಂದ ಪ್ರವೇಶಾವಕಾಶ ವಂಚಿತ ರಾಗುವ ಅಭ್ಯರ್ಥಿಗಳಿಗೆ ಪರಿಹಾರ ನೀಡಲು ಸಂವಿಧಾನದ ವಿಧಿ ೧೪೨ ರ ಅಡಿಯಲ್ಲಿ ತನ್ನ ವಿಶೇಷ ಅಧಿಕಾರವನ್ನು ಬಳಸಿಕೊಳ್ಳಬಹುದು ಎಂದು ಅತ್ಯುನ್ನತ ನ್ಯಾಯಾಲಯ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಪ್ರಶಾಂತ್ ಕುಮಾರ್ ಮಿಶ್ರಾ ಹಾಗೂ ಸಂಜೀವ್ ಸಚ್ದೇವ್ ಅವರಿದ್ದ ಪೀಠವು, ಅಂಬಾಲಾದ ಮಹರ್ಷಿ ಮಾರ್ಕಂಡೇಶ್ವರ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸ್ನಾತಕೋತ್ತರ ವೈದ್ಯಕೀಯ ಸೀಟು ಹಂಚಿಕೆ ಪ್ರಕರಣದ ವಿಚಾರಣೆ ವೇಳೆ ಈ ಮಹತ್ವದ ತೀರ್ಪು ನೀಡಿದೆ.
ಅಂಬಾಲಾದ ವೈದ್ಯಕೀಯ ಕಾಲೇಜಿನಲ್ಲಿ ಎನ್‌ಆರ್‌ಐ ಕೋಟಾದಡಿ ಮಲ್ಯವಿ ಗುಪ್ತಾ ಎಂಬ ಅಭ್ಯರ್ಥಿಗೆ ಆರಂಭದಲ್ಲಿ ಸೀಟು ಹಂಚಿಕೆಯಾಗಿತ್ತು. ಆದರೆ, ಶುಲ್ಕವನ್ನು ಮೊದಲು ದೇಶೀಯ ಬ್ಯಾಂಕ್ ಖಾತೆಯಿಂದ ಪಾವತಿಸಲಾಗಿದೆ ಎಂಬ ಕಾರಣಕ್ಕೆ ಅವರ ಹಂಚಿಕೆಯನ್ನು ರದ್ದುಗೊಳಿಸಲಾಗಿತ್ತು (ನಂತರ ಎನ್‌ಆರ್‌ಐ ಖಾತೆಯಿಂದ ಪಾವತಿಸಲಾಗಿತ್ತು). ಇದೇ ವೇಳೆ ಮತ್ತೊಬ್ಬ ಅಭ್ಯರ್ಥಿ ರುಶಾಲಿ ಸಿಂಘಾಲ್ ಅವರಿಗೆ ಈ ಸೀಟು ನೀಡಲಾಗಿತ್ತು.
ಆದರೆ, ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಮಲ್ಯವಿ ಗುಪ್ತಾ ಅವರಿಗೆ ಭಾಗವಹಿಸಲು ಅವಕಾಶ ನೀಡದಿರುವುದು ತಪ್ಪು ಎಂದು ಗಮನಿಸಿದ ಸುಪ್ರೀಂ ಕೋರ್ಟ್, ಇಬ್ಬರೂ ಅಭ್ಯರ್ಥಿಗಳ ಹಿತದೃಷ್ಟಿಯಿಂದ ಖಾಲಿ ಇದ್ದ ಎಂಡಿ ಎನ್‌ಆರ್‌ಐ ಸೀಟನ್ನು ಎಂಎಸ್ ಕೋರ್ಸ್‌ಗೆ ಪರಿವರ್ತಿಸಿ, ಇಬ್ಬರಿಗೂ ಪ್ರವೇಶಾವಕಾಶ ಕಲ್ಪಿಸಿದೆ.
ವಿಶೇಷ ಸೂಚನೆ: ಈ ತೀರ್ಪು ಅತ್ಯಂತ ಅಪರೂಪದ ಸಂದರ್ಭದಲ್ಲಿ ನೀಡಲಾದ ವಿಶೇಷ ಆದೇಶವಾಗಿದ್ದು, ಇದನ್ನು ಭವಿಷ್ಯದ ಪ್ರಕರಣಗಳಿಗೆ ’ನಿದರ್ಶನ’ ಎಂದು ಪರಿಗಣಿಸಬಾರದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
































