
ಸಂಜೆ ವಾಣಿ ವಾರ್ತೆ |
ಜಮಖಂಡಿ | ಆ. ೨: ಡಾ. ವಿಜಯ ಮಹಾಂತೇಶ ಮಹಾಸ್ವಾಮಿಗಳು ನೇರನಿಷ್ಠುರ ಸ್ವಭಾವದವರಾಗಿದ್ದು, ಯಾವುದೇ ಬೆದರಿಕೆಗಳಿಗೆ ಹೆದರದೆ ಸಮಾಜ ಸೇವೆಯನ್ನೇ ಗುರಿಯಾಗಿಸಿಕೊಂಡು ಹಗಲಿರುಳು ಶ್ರಮಿಸಿದ್ದರು. ದುಶ್ಚಟಗಳ ವಿರುದ್ಧ ಸಮರ ಸಾರಿ, ಮೂಢನಂಬಿಕೆಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ‘ಬಸವ ಪಂಚಮಿ’ ಆಚರಣೆಗೆ ಮಹತ್ವ ನೀಡಿದ್ದರು ಎಂದು ಸಂಪನ್ಮೂಲ ಶಿಕ್ಷಕ ಸಂಗನಬಸವ ಉಟಗಿ ಹೇಳಿದರು.
ತಾಲೂಕಿನ ಕುಂಬಾರಹಳ್ಳ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಜನರು ದುಶ್ಚಟಗಳಿಂದ ದೂರವಿದ್ದು ಜ್ಞಾನವಂತರಾಗಿ ಉತ್ತಮ ಜೀವನ ರೂಪಿಸಿಕೊಳ್ಳಬೇಕು. ಜಾತಿ-ಮತಗಳ ಭೇದವನ್ನು ಮೀರಿ ಸೌಹಾರ್ದದಿಂದ ಬದುಕಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯ ನಾರಾಯಣ ಶಾಸ್ತ್ರಿ ಮಾತನಾಡಿ, ವಿಜಯ ಮಹಾಂತೇಶ ಮಹಾಸ್ವಾಮಿಗಳು ಜೋಳಿಗೆಯ ಮೂಲಕ ಸಮಾಜದ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಕಾಪಾಡಲು ಶ್ರಮಿಸಿದ ಯೋಗಿಯಾಗಿದ್ದರು. ಅವರ ಸಾಮಾಜಿಕ ಕಳಕಳಿ ವರ್ಣನಾತೀತವಾಗಿದೆ ಎಂದರು.
“ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ದುಶ್ಚಟಗಳನ್ನು ತ್ಯಜಿಸುವ ಪ್ರತಿಜ್ಞೆ ಕೈಗೊಂಡು ಮಹಾಂತ ಶ್ರೀಗಳ ಆಶಯಗಳನ್ನು ಸಾಕಾರಗೊಳಿಸಬೇಕು. ಇಂದು ಹಳ್ಳಿಗಳಿಂದ ಹಾಲು, ತರಕಾರಿ ಪೇಟೆಗೆ ಬರುತ್ತಿದ್ದರೆ, ಪೇಟೆಯಿಂದ ಮದ್ಯ, ಗುಟ್ಕಾ ಹಾಗೂ ತಂಬಾಕು ಹಳ್ಳಿಗಳಿಗೆ ಹೋಗುತ್ತಿದೆ. ಈ ಪರಿಸ್ಥಿತಿ ಬದಲಾಗಬೇಕು,” ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಶಿಕ್ಷಕಿ ಶಾರದಾ ಮಠ ಅವರು ವಿಜಯ ಮಹಾಂತೇಶ ಮಹಾಸ್ವಾಮಿಗಳ ಜೀವನಗಾಥೆ ಹಾಗೂ ವ್ಯಸನಮುಕ್ತ ದಿನಾಚರಣೆಯ ಮಹತ್ವವನ್ನು ವಿವರಿಸಿದರು. ಭಾರತ ವಿಶ್ವಗುರುವಾಗಬೇಕಾದರೆ ಪ್ರತಿಯೊಬ್ಬರೂ ನಿಸ್ವಾರ್ಥ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಬಾಹುಬಲಿ ಮುತ್ತೂರ ಪ್ರತಿಜ್ಞಾವಿಧಿ ಬೋಧಿಸಿದರು. ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿರುವ ಪ್ರತಿಜ್ಞೆ ಸ್ವೀಕರಿಸಿದರು.
ಶಿಕ್ಷಕರಾದ ಮಂಜುಳಾ ಕಡಕೋಳ, ಆಸೀಭಾಭಾನು ಮೋಮಿನ್, ಅಶೋಕ ಬಿರಾದಾರ ಪಾಟೀಲ, ಶಕುಂತಲಾ ಬಿರಾದಾರ, ಬಸವರಾಜ ಆದೆಪ್ಪನವರ, ಸೌಜನ್ಯಾ ಬಾಳಿಗಿಡದ ಹಾಗೂ ಕರೆಪ್ಪ ವಾಜಂತ್ರಿ ಉಪಸ್ಥಿತರಿದ್ದರು.
ಶಾರದಾ ಮಠ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.






























