
ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೩೦: ಮೊಬೈಲ್ ಗೀಳಿನಿಂದ ದೂರವಿದ್ದು ವಿದ್ಯಾಭ್ಯಾಸದತ್ತ ಸಂಪೂರ್ಣ ಗಮನ ಹರಿಸಿದರೆ ಮಾತ್ರ ವಿದ್ಯಾರ್ಥಿಗಳು ತಮ್ಮ ಗುರಿ ಸಾಧಿಸಬಹುದು ಎಂದು ಭಾರತೀಯ ಸುರಾಜ್ಯ ಸಂಸ್ಥೆಯ ಉಪಾಧ್ಯಕ್ಷ ಶ್ರೀ ಪ್ರಕಾಶ ಮಹಾರಾಜ್ ಕರೆ ನೀಡಿದರು.
ಭಾರತೀಯ ಸುರಾಜ್ಯ ಸಂಸ್ಥೆಯ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಅಂಗವಾಗಿ ವಿಜಯಪುರ ತಾಲೂಕಿನ ತಿಡಗುಂದಿಯಲ್ಲಿ ಆಯೋಜಿಸಿದ್ದ ಪ್ರಬಂಧ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿಜಯಪುರ, ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ, ಯಾದಗಿರಿ, ಕಲಬುರಗಿ, ಸೊಲ್ಲಾಪುರ ಸೇರಿದಂತೆ ಹಲವು ಜಿಲ್ಲೆಗಳ ಸುಮಾರು ೧೦೦ಕ್ಕೂ ಹೆಚ್ಚು ಶಾಲಾ-ಕಾಲೇಜುಗಳ ೩೦ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ರಾಷ್ಟ್ರಭಕ್ತಿ, ಮೌಲ್ಯ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಉಪನ್ಯಾಸ ನೀಡಿರುವುದಾಗಿ ತಿಳಿಸಿದರು.
ಸಮರ್ಥ ಸದ್ಗುರು ಶ್ರೀ ಗಣಪತಿ ರಾವ್ ಮಹಾರಾಜ್ ಅವರ ತತ್ವಗಳು ಹಾಗೂ ಧ್ಯಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ. ಮೊಬೈಲ್ ಅತಿಯಾದ ಬಳಕೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲಾಗಿದ್ದು, ಪೋಷಕರು, ಶಿಕ್ಷಕರು ಹಾಗೂ ಹಿರಿಯರೊಂದಿಗೆ ಗೌರವಯುತವಾಗಿ ನಡೆದುಕೊಳ್ಳುವ ಮೌಲ್ಯಗಳನ್ನು ತಿಳಿಸಲಾಯಿತು.
ವಿದ್ಯಾರ್ಥಿಗಳು ಪರಿಣಾಮಕಾರಿಯಾಗಿ ಅಧ್ಯಯನ ಮಾಡುವ ವಿಧಾನಗಳು, ಸಮಯ ನಿರ್ವಹಣೆ ಹಾಗೂ ಏಕಾಗ್ರತೆ ಹೆಚ್ಚಿಸಿಕೊಳ್ಳುವ ಕುರಿತು ಉಪಯುಕ್ತ ಸಲಹೆಗಳನ್ನು ನೀಡಲಾಯಿತು.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ೧೦೦ ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಗುರಿ ಹೊಂದಿರುವುದಾಗಿ ಶ್ರೀ ಪ್ರಕಾಶ ಮಹಾರಾಜ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






























