
ಯಾದಗಿರಿ: ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದ ಹಾಗೂ ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸುವುದು ಅತ್ಯಂತ ಶ್ರೇಷ್ಠ ಸೇವೆಯಾಗಿದ್ದು, ಉಚಿತ ಆರೋಗ್ಯ ಶಿಬಿರಗಳು ಮತ್ತು ವೈದ್ಯಕೀಯ ನೆರವಿನಂತಹ ಸಾಮಾಜಿಕ ಕಾರ್ಯಗಳಿಂದ ಆತ್ಮತೃಪ್ತಿ ದೊರೆಯುತ್ತದೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ ರಾಜಮಲ್ ಖೇಮರಾಜ್ ಭಂಡಾರಿ ಫೌಂಡೇಷನ್ (ರಾಯಚೂರು), ಡಿಡಿಆರ್ಪಿ ಕೇಂದ್ರ ಹಾಗೂ ವಿಶ್ವಜ್ಯೋತಿ ವಿದ್ಯಾಸಂಸ್ಥೆ (ಕಲಬುರಗಿ) ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಕೃತಕ ಕಾಲು ವಿತರಣಾ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶವು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸುತ್ತಿದ್ದರೂ, ಇನ್ನೂ ಸಾವಿರಾರು ಬಡ ಕುಟುಂಬಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಇಂತಹ ಸಂದರ್ಭದಲ್ಲಿ ಖಾಸಗಿ ಸಂಘ-ಸAಸ್ಥೆಗಳು ಹಾಗೂ ವೈದ್ಯರು ಉಚಿತ ಆರೋಗ್ಯ ಸೇವೆಗಳನ್ನು ಒದಗಿಸುವ ಮೂಲಕ ಸಮಾಜದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ರಾಜ್ಯ ಸರ್ಕಾರ ಯಾದಗಿರಿ ಜಿಲ್ಲೆಗೆ ?೧೦೦ ಕೋಟಿ ವೆಚ್ಚದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಮಂಜೂರು ಮಾಡಿದೆ. ಈ ಆಸ್ಪತ್ರೆ ಕಾರ್ಯಾರಂಭಗೊAಡ ಬಳಿಕ ಜಿಲ್ಲೆಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಸ್ಥಳೀಯವಾಗಿಯೇ ದೊರೆಯಲಿದ್ದು, ಆರೋಗ್ಯ ಸೇವೆಯಲ್ಲಿ ಮಹತ್ತರ ಬದಲಾವಣೆ ಉಂಟಾಗಲಿದೆ ಎಂದು ಹೇಳಿದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೊಳಿಸಿರುವ ಜನಪರ ಯೋಜನೆಗಳನ್ನು ಪ್ರತಿಯೊಬ್ಬ ಫಲಾನುಭವಿಗೂ ತಲುಪಿಸುವಲ್ಲಿ ಖಾಸಗಿ ಸಂಘ-ಸAಸ್ಥೆಗಳ ಪಾತ್ರ ಮಹತ್ವದ್ದಾಗಿದೆ. ಇಂತಹ ಆರೋಗ್ಯ ಶಿಬಿರಗಳು ಬದುಕಿನ ಬಗ್ಗೆ ನಿರಾಸೆಗೊಂಡಿರುವ ರೋಗಿಗಳಿಗೆ ಹೊಸ ಭರವಸೆ ಮತ್ತು ಆತ್ಮವಿಶ್ವಾಸ ತುಂಬುವ ಕಾರ್ಯ ಮಾಡುತ್ತಿವೆ ಎಂದು ತಿಳಿಸಿದರು.
ಶಿಬಿರದಲ್ಲಿ ರಸ್ತೆ ಅಪಘಾತಗಳು ಸೇರಿದಂತೆ ವಿವಿಧ ಕಾರಣಗಳಿಂದ ಕೈ ಅಥವಾ ಕಾಲು ಕಳೆದುಕೊಂಡಿದ್ದ ಹಲವರಿಗೆ ಕೃತಕ ಕೈ-ಕಾಲುಗಳನ್ನು ಅಳವಡಿಸಲಾಯಿತು. ಜೊತೆಗೆ ನೂರಾರು ಮಂದಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆ ಕುರಿತು ಮಾರ್ಗದರ್ಶನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ, ಸರ್ಕಾರಿ ಪದವಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸುಭಾಷಚಂದ್ರ ಕೌಲಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ತಿಪ್ಪಣ್ಣ ಸಿರಸಗಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ, ವಿಶ್ವಜ್ಯೋತಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಜಿತ್ ಕುಮಾರ ಜೈನ್, ಧನರಾಜ್ ದೋಖಾ, ಬಾಬು ದೋಖಾ, ಆರ್ಕೆ ಭಂಡಾರಿ ಫೌಂಡೇಷನ್ ಟ್ರಸ್ಟಿಗಳಾದ ವಿಜಯರಾಜ್ ಭಂಡಾರಿ ಹಾಗೂ ಮೋಹನ್ ಕುಮಾರ ಭಂಡಾರಿ, ಡಾ. ಎಂ.ಡಿ. ರಿಯಾಜುದ್ದೀನ್, ಅಜಯಕುಮಾರ ಭಂಡಾರಿ ಸೇರಿದಂತೆ ವೈದ್ಯರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.































