
ಸಂಜೆವಾಣಿ ವಾರ್ತೆ,
ವಿಜಯಪುರ, ಜು. ೩೦: ದೇಶದ ಅಭಿವೃದ್ಧಿಯಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಶಿಕ್ಷಣದೊಂದಿಗೆ ವಿವಿಧ ಕೌಶಲ್ಯಗಳನ್ನು ಕರಗತ ಮಾಡಿಕೊಂಡಾಗ ಮಾತ್ರ ಜೀವನದಲ್ಲಿ ಹೆಚ್ಚಿನ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಎಸ್. ಹೊರಟ್ಟಿ ಹೇಳಿದರು.
ನಗರದ ಹೊರವಲಯದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ನೂತನವಾಗಿ ನಿರ್ಮಿಸಲಾದ ದಶಮಾನೋತ್ಸವ ಕಟ್ಟಡವನ್ನು ಉದ್ಘಾಟಿಸಿ ಹಾಗೂ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರು ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದ್ದರಿಂದ ವಿದ್ಯಾರ್ಥಿನಿಯರು ಸಾಂಪ್ರದಾಯಿಕ ಶಿಕ್ಷಣಕ್ಕೆ ಸೀಮಿತರಾಗದೆ ಹೊಸ ಆವಿಷ್ಕಾರ, ಸಂಶೋಧನೆ ಹಾಗೂ ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಬಸವಣ್ಣ ಹಾಗೂ ಅಕ್ಕಮಹಾದೇವಿಯವರ ವಚನಗಳು ಜೀವನಕ್ಕೆ ದಾರಿದೀಪವಾಗಿದ್ದು, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜ್ಞಾನ, ಶಿಕ್ಷಣ ಮತ್ತು ಆತ್ಮವಿಶ್ವಾಸದ ಮೂಲಕ ಉನ್ನತ ಸ್ಥಾನಕ್ಕೇರಬೇಕು ಎಂದು ಹೇಳಿದರು.
ಕರ್ನಾಟಕವು ಶಿಕ್ಷಣ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ದೇಶಕ್ಕೆ ಮಹತ್ತರ ಕೊಡುಗೆ ನೀಡಿದೆ. ಭಾರತದ ಮೊದಲ ವಿಜ್ಞಾನ ಅಕಾಡೆಮಿಯನ್ನು ರಾಜ್ಯದಲ್ಲೇ ಆರಂಭಿಸಲಾಗಿದ್ದು, ಅದನ್ನು ಅಂದಿನ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಉದ್ಘಾಟಿಸಿದ್ದನ್ನು ಅವರು ಸ್ಮರಿಸಿದರು.
ಮಹಿಳೆಯರು ಸಣ್ಣ ಉದ್ಯಮಗಳಿಂದಲೂ ದೊಡ್ಡ ಮಟ್ಟದ ಯಶಸ್ಸು ಸಾಧಿಸಬಹುದು. “ನಮ್ಮಿಂದ ಏನೂ ಸಾಧ್ಯವಿಲ್ಲ” ಎಂಬ ಮನೋಭಾವವನ್ನು ತೊರೆದು ಆತ್ಮವಿಶ್ವಾಸದಿಂದ ಮುಂದುವರಿಯಬೇಕು ಎಂದು ಕರೆ ನೀಡಿದ ಅವರು, ಮಹಿಳೆಯರು ಇಂದು ನ್ಯಾಯಾಂಗ, ಪೊಲೀಸ್, ವೈದ್ಯಕೀಯ, ಶಿಕ್ಷಣ, ಆಡಳಿತ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ದೇಶದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳಿದ್ದು, ಅವುಗಳನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ತಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಶೇ.೧೦೦ರಷ್ಟು ಮಹಿಳಾ ಪ್ರಾಧ್ಯಾಪಕರು ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದ ಅವರು, ರಾಜ್ಯದ ಅನುದಾನರಹಿತ ಶಾಲೆಗಳಿಗೆ ಅನುದಾನ ದೊರಕಿಸುವಲ್ಲಿ ಬಸವರಾಜ ಎಸ್. ಹೊರಟ್ಟಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದರು. ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆದು ಭವಿಷ್ಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಎಸ್.ವಿ. ಹಲಸೆ ಮಾತನಾಡಿ, ಉತ್ತರ ಕರ್ನಾಟಕದ ಮಹಿಳಾ ವಿದ್ಯಾರ್ಥಿನಿಯರಿಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು ಉನ್ನತ ಶಿಕ್ಷಣದ ಪ್ರಮುಖ ಕೇಂದ್ರವಾಗಿ ರೂಪುಗೊಂಡಿದೆ ಎಂದರು.
ಇAದಿನ ಸ್ಪರ್ಧಾತ್ಮಕ ಯುಗದಲ್ಲಿ ಕೌಶಲ್ಯಾಧಾರಿತ ಶಿಕ್ಷಣವೇ ಯಶಸ್ಸಿನ ಮೂಲಮಂತ್ರವಾಗಿದ್ದು, ವಿದ್ಯಾರ್ಥಿನಿಯರು ಶಿಕ್ಷಣದ ಜೊತೆಗೆ ಕೌಶಲ್ಯಾಭಿವೃದ್ಧಿಗೂ ಆದ್ಯತೆ ನೀಡಬೇಕು ಎಂದು ಅಭಿಪ್ರಾಯಪಟ್ಟರು.
ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ವಿಜಯಾ ಬಿ. ಕೋರಿಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಶ್ವವಿದ್ಯಾನಿಲಯದ ಶೈಕ್ಷಣಿಕ ಸಾಧನೆಗಳು, ಮೂಲಸೌಕರ್ಯ ಅಭಿವೃದ್ಧಿ ಹಾಗೂ ವಿದ್ಯಾರ್ಥಿನಿಯರ ಸಬಲೀಕರಣಕ್ಕಾಗಿ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಹನುಮಂತ ನಿರಾಣಿ, ಮೌಲ್ಯಮಾಪನ ಕುಲಸಚಿವ ಪ್ರೊ. ಬಿ.ಎಲ್. ಲಕ್ಕಣ್ಣವರ, ಕುಲಸಚಿವ ಶಂಕರಗೌಡ ಡಿ. ಸೋಮನಾಳ, ಆರ್ಥಿಕ ಅಧಿಕಾರಿ ರಾಮಣ್ಣಗೌಡ ಅಥಣಿ, ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.






























