
ಯಾದಗಿರಿ/ಬೆಂಗಳೂರು: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ನೀಡುವ ವಸತಿ, ಊಟೋಪಚಾರ ಸೇರಿದಂತೆ ಯಾವುದೇ ಭತ್ಯೆ ಅಥವಾ ಸೌಲಭ್ಯವನ್ನು ಸ್ವೀಕರಿಸುವುದಿಲ್ಲ ಎಂದು ಗುರುಮಿಟಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅವರು ನ.18ರಂದು ವಿಧಾನಸಭಾ ಸಭಾಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿ, ಪ್ರಾದೇಶಿಕ ಸಮತೋಲನ ಕಾಪಾಡುವ ಉದ್ದೇಶದಿಂದ ಬೆಳಗಾವಿಯಲ್ಲಿ ಅಧಿವೇಶನ ನಡೆಸುವ ಪರಂಪರೆ ಆರಂಭವಾಯಿತು. ಈ ಉದ್ದೇಶ ಒಳ್ಳೆಯದೇ. ಆದರೆ ಹೆಸರಿಗೆ ಮಾತ್ರ ಅಧಿವೇಶನ ನಡೆದು, ಚರ್ಚಿತ ವಿಷಯಗಳು ಜಾರಿಗೊಳ್ಳದೆ ಈ ಭಾಗದ ಜನತೆಗೆ ಕಣ್ಣೊರೆಸುವ ತಂತ್ರವಾಗಿದೆ ಎಂದು ಅವರು ಪತ್ರದಲ್ಲಿ ಟೀಕಿಸಿದ್ದಾರೆ. ಈ ಬಗ್ಗೆ ಈ ಹಿಂದೆಯೇ ತಾವು ಬಲವಾಗಿ ವಿರೋಧ ವ್ಯಕ್ತಪಡಿಸಿದ್ದಾಗಿ ತಿಳಿಸಿದ್ದಾರೆ.
ಕಳೆದ ಚಳಿಗಾಲದ ಅಧಿವೇಶನದಲ್ಲೂ ಸರ್ಕಾರದಿಂದ ವಸತಿ, ಊಟೋಪಚಾರ ಮತ್ತಿತರ ಯಾವುದೇ ಭತ್ಯೆ ಪಡೆಯದೆ ಪ್ರತಿಭಟಿಸಿದ್ದರು. ಒಂದು ದಿನವೂ ಬಿಡದೆ ಸ್ವಂತ ಖರ್ಚಿನಲ್ಲಿ ಸಂಪೂರ್ಣವಾಗಿ ಪಾಲ್ಗೊಂಡಿದ್ದರು ಎಂದು ಅವರು ನೆನಪಿಸಿದ್ದಾರೆ.
ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕದ ಜನತೆಗೆ ಬರಗಾಲ ಬದುಕಿನ ಭಾಗವಾಗಿಬಿಟ್ಟಿದೆ. ಒಮ್ಮೆ ಅತಿವೃಷ್ಟಿಯಿಂದ ರೈತ ಬಿತ್ತಿದ ಬೆಳೆ ಕೊಚ್ಚಿಹೋದರೆ, ಇನ್ನೊಮ್ಮೆ ಅನಾವೃಷ್ಟಿಯಿಂದ ಬಿತ್ತಿದ ಬೀಜ ಭೂಮಿಯಲ್ಲೇ ಬತ್ತಿಹೋಗುತ್ತದೆ. ಹಸಿವು, ಬಡತನ, ನಿರುದ್ಯೋಗ, ಶಾಲೆ, ಆಸ್ಪತ್ರೆ, ಕುಡಿಯುವ ನೀರು ಮುಂತಾದ ಸಮಸ್ಯೆಗಳ ಸುಳಿಯಲ್ಲಿ ಜನತೆ ಕಂಗಾಲಾಗಿದ್ದಾರೆ. ಹೊಟ್ಟೆಪಾಡಿಗಾಗಿ ಮಕ್ಕಳನ್ನು ಕಟ್ಟಿಕೊಂಡು ಬೆಂಗಳೂರು, ಮುಂಬೈ, ಪುಣೆ, ಹೈದರಾಬಾದ್ ನಗರಗಳಿಗೆ ಗುಳೆ ಹೋಗುತ್ತಿರುವ ದೃಶ್ಯ ಕರುಳು ಹಿಂಡುವಂತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
“ಜನರಿಂದ ಮತ ಪಡೆದು ಜನಪ್ರತಿನಿಧಿಗಳಾಗಿ ಅವರ ಆಶೋತ್ತರಗಳನ್ನು ಈಡೇರಿಸಲಾಗದಿದ್ದರೆ ನಾವು ಶಾಸಕರಾಗಿರುವುದು ಯಾವ ಪುರುಷಾರ್ಥಕ್ಕೆ ಎಂಬ ನಿರಾಶೆ ನನ್ನಲ್ಲಿ ಮೂಡುತ್ತಿದೆ” ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷದ ಅಧಿವೇಶನ ಮುಗಿದು ಮತ್ತೆ ಅಧಿವೇಶನ ಬಂದಿದ್ದರೂ ಈ ಭಾಗಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಡೆಸುವ ಅಧಿವೇಶನದಿಂದ ನಯಾ ಪೈಸೆಯ ಪ್ರಯೋಜನವೂ ಆಗದಿದ್ದರೆ, ಜನತೆಯ ತೆರಿಗೆ ಹಣವನ್ನು ಪೆÇೀಲು ಮಾಡಿದ ಪಾಪ ಸರ್ಕಾರಕ್ಕೆ ಖಂಡಿತವಾಗಿಯೂ ಸುತ್ತಿಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.
ಆದ್ದರಿಂದ ಕಳೆದ ಬಾರಿಯಂತೆ ಈ ಅಧಿವೇಶನದಲ್ಲೂ ಸರ್ಕಾರದಿಂದ ಏನನ್ನೂ ಪಡೆಯದೆ, ಸ್ವಂತ ಖರ್ಚಿನಲ್ಲಿ ವೈಯಕ್ತಿಕ ಸೌಲಭ್ಯಗಳನ್ನು ಕಲ್ಪಿಸಿಕೊಂಡು ಭಾಗವಹಿಸಲು ಅನುಮತಿ ನೀಡಬೇಕು ಎಂದು ಸಭಾಧ್ಯಕ್ಷರಲ್ಲಿ ಅವರು ಕೋರಿದ್ದಾರೆ.




















