
ಬೆಂಗಳೂರು, ನ. ೧೬- ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಿ ಮಹಿಳಾ ಶಾಸಕಿಯೊಬ್ಬರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡಗಳು ಹೆಚ್ಚಿರುವಾಗಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರುಗಳು ಇಂದು ದೆಹಲಿಗೆ ತೆರಳಿದ್ದು, ವರಿಷ್ಠರೊಡನೆ ಚರ್ಚಿಸಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವ ಸಾಧ್ಯತೆಗಳಿವೆ.
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ೩ ತಿಂಗಳು ಪೂರೈಸಿದ್ದು, ೪ ತಿಂಗಳಿನಿಂದಲೂ ಸಂಪುಟ ವಿಸ್ತರಣೆ ವಿಚಾರ ನೆನೆಗುದಿಗೆ ಬಿದ್ದಿದೆ. ಇಂದು ರಾಜ್ಯದ ಪ್ರಮುಖ ನಾಯಕರುಗಳು ದೆಹಲಿಗೆ ತೆರಳಿರುವುದರಿಂದ ಸಂಪುಟ ವಿಸ್ತರಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದ್ದು, ಹೈಕಮಾಂಡ್ ಒಪ್ಪಿಗೆ ಪಡೆದು ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಿಸಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಾಗಿದ್ದು, ಸಂಪುಟ ವಿಸ್ತರಣೆಗೆ ವರಿಷ್ಠರು ಒಪ್ಪಿಗೆ ನೀಡುವರೇ ಎಂಬುದು ಕುತೂಹಲ ಮೂಡಿಸಿದೆ.
ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿಯವರ ಆತ್ಮಚರಿತ್ರೆ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವು ಪ್ರಮುಖ ನಾಯಕರುಗಳು ಇಂದು ದೆಹಲಿಗೆ ತೆರಳಿದ್ದಾರೆ. ಸಂಜೆ ನಡೆಯುವ ಪುಸ್ತಕ ಬಿಡುಗಡೆ ಸಮಾರಂಭದ ನಂತರ ಇವರುಗಳು ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಲಿದ್ದು, ಈ ಭೇಟಿ ಸಂದರ್ಭದಲ್ಲಿ ಸಂಪುಟ ವಿಸ್ತರಣೆಗೆ ಒಪ್ಪಿಗೆ ಪಡೆಯುವರು ಎಂದು ಹೇಳಲಾಗಿದೆ.
ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರು ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡಿದರೆ ಬೆಳಗಾವಿ ಅಧಿವೇಶನದ ಒಳಗೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಗಳಿವೆ.
ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಇರುವ ೨ ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಮಹಿಳಾ ಶಾಸಕಿಯೊಬ್ಬರಿಗೆ ನೀಡಿ, ಮತ್ತೊಂದು ಸ್ಥಾನವನ್ನು ಹಾವೇರಿಯ ಶಾಸಕ ಬಸವರಾಜ ನೀಲಣ್ಣ ಶಿವಣ್ಣನವರ್ ಅವರಿಗೆ ನೀಡಬೇಕು ಎಂಬ ಒತ್ತಡಗಳಿದ್ದು, ಸಂಪುಟ ವಿಸ್ತರಣೆಗೆ ಮುಹೂರ್ತ ಯಾವಾಗ ನಿಗದಿಯಾಗಲಿದೆ ಎಂಬುದು ಈಗ ಚರ್ಚೆಗೆ ಗ್ರಾಸವಾಗಿದೆ.
ಸಂಪುಟ ವಿಸ್ತರಣೆಗೆ ಒತ್ತಡಗಳು ಹೆಚ್ಚಿದ್ದು, ಮಹಿಳಾ ಕೋಟಾದಿಂದ ಮಾಜಿ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್, ಬಳ್ಳಾರಿಯ ಕಾಂಗ್ರೆಸ್ ಸಂಸದ ತುಕರಾಂ ರವರ ಪತ್ನಿ ಅನ್ನಪೂರ್ಣ ತುಕರಾಂ ರವರು ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದು, ಇವರ ಜತೆಗೆ ಕಲ್ಬುರ್ಗಿಯ ಶಾಸಕಿ ಫಾತಿಮಾ ರವರ ಹೆಸರು ಕೇಳಿ ಬರುತ್ತಿದ್ದು, ಯಾರಿಗೆ ಮಹಿಳಾ ಕೋಟಾದಡಿ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಲಿದೆ ಎಂಬುಗು ಕುತೂಹಲ ಕೆರಳಿಸಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಲಕ್ಷ್ಮೀಹೆಬ್ಬಾಳ್ಕರ್ ರವರನ್ನು ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಲು ಪ್ರಯತ್ನ ನಡೆಸಿರುವರಾದರೂ ಪರಿಶಿಷ್ಟ ಪಂಗಡದ ಅನ್ನಪೂರ್ಣ ತುಕರಾಂರವರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಒತ್ತಡವನ್ನು ಪ್ರಮುಖ ನಾಯಕರುಗಳು ವರಿಷ್ಠರ ಮೇಲೆ ಹೇರಿದ್ದಾರೆ. ಹಾಗಾಗಿ ಮಹಿಳಾ ಕೋಟಾದಡಿ ಯಾರಿಗೆ ಸಚಿವ ಸ್ಥಾನದ ಲಕ್ ಒಲಿಯಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನ ಮಹಿಳೆಯರಿಗೆ ನೀಡಿದರೆ, ಮತ್ತೊಂದು ಸ್ಥಾನವನ್ನು ಕುರುಬ ಸಮುದಾಯದ ಬಸವರಾಜ ನೀಲಣ್ಣ ಶಿವಣ್ಣನವರ್ ರವರಿಗೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಮಾಂಡ್‌ಗೆ ಈಗಾಗಲೇ ತಿಳಿಸಿದ್ದಾರೆ. ಆದರೆ ಸಚಿವ ಸ್ಥಾನದ ವಂಚಿತರಾಗಿರುವ ವಿಜಯನಗರ ಶಾಸಕ ಎಂ. ಕೃಷ್ಣಪ್ಪ ಸಚಿವ ಸ್ಥಾನಕ್ಕೆ ಪ್ರಯತ್ನ ನಡೆಸಿದ್ದು, ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಕ್ಕೆ ಬಿಡಲಾಗಿದೆ.
ಹಾಗಾಗಿ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಯಾವ ತೀರ್ಮಾನ ಕೈಗೊಳ್ಳುತ್ತದೆ, ಬೆಳಗಾವಿ ಅಧಿವೇಶನಕ್ಕೂ ಮುನ್ನವೇ ಸಂಪುಟ ವಿಸ್ತರಣೆಗೆ ಒಪ್ಪಿಗೆ ನೀಡುತ್ತದೆಯೇ ಎಂಬುದು ಈಗ ಚರ್ಚೆಗೆ ಕಾರಣವಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನಿನ್ನೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸ್ಥಾನ ನೀಡಲೇಬೇಕು ಎಂದು ಹೈಕಮಾಂಡ್‌ಗೆ ನಾನು ಈಗಾಗಲೇ ಹೇಳಿದ್ದೇನೆ. ಹೈಕಮಾಂಡ್ ತೀರ್ಮಾನದಂತೆ ಎಲ್ಲವೂ ಆಗಲಿದೆ. ಸಂಪುಟ ವಿಸ್ತರಣೆಗೆ ಹೈಕಮಾಂಡೇ ಮುಹೂರ್ತ ನಿಗದಿ ಮಾಡಲಿದೆ ಎಂಬ ಅರ್ಥದಲ್ಲಿ ಮಾತನಾಡಿದ್ದರು.
ಸೋನಿಯಾಗಾಂಧಿಯವರ ಆತ್ಮಚರಿತ್ರೆಯ ಪುಸ್ತಕ ಬಿಡುಗಡೆಗೆ ರಾಜ್ಯ ಕಾಂಗ್ರೆಸ್‌ನ ಎಲ್ಲಾ ಪ್ರಮುಖ ನಾಯಕರುಗಳು ದೆಹಲಿಗೆ ತೆರಳಿರುವುದರಿಂದ ಇಂದೇ ಸಂಪುಟ ವಿಸ್ತರಣೆಗೂ ಮುಹೂರ್ತ ನಿಗದಿಯಾಗುವ ಸಾಧ್ಯತೆಗಳು ಹೆಚ್ಚಿವೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ.
ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರುಗಳು ವರಿಷ್ಠರುಗಳು ಭೇಟಿಯಾಗಿ ಚರ್ಚಿಸಿದ ಬಳಿಕವೇ ಸಂಪುಟ ವಿಸ್ತರಣೆಯ ವಿಚಾರ ಸ್ಪಷ್ಟವಾಗಲಿದೆ.





















