
ಬೆಂಗಳೂರು, ಮೇ ೨೭- ಕಾಂಗ್ರೆಸ್ ಹೈಕಮಾಂಡ್ ಅಣತಿಯಂತೆ ಪದತ್ಯಾಗಕ್ಕೆ ನಿರ್ಧರಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ.
ಕಾಂಗ್ರೆಸ್ ಪಕ್ಷದ ವರಿಷ್ಠ ರಾಹುಲ್‌ಗಾಂಧಿಯವರ ಜತೆ ನಿನ್ನೆ ದೆಹಲಿಯಲ್ಲಿ ಸಭೆ ನಡೆಸಿ ರಾತ್ರಿಯೇ ಬೆಂಗಳೂರಿಗೆ ವಾಪಸ್ಸಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಹುಲ್ ರವರ ಸೂಚನೆಯಂತೆ ನಾಳೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವರು.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ನಾಳೆ ಬೆಳಿಗ್ಗೆ ೯ ಗಂಟೆಗೆ ಎಲ್ಲಾ ಸಚಿವರ ಜತೆ ಉಪಹಾರ ಸಭೆ ನಡೆಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪಹಾರ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಲಿದ್ದು, ಈ ಸುದ್ದಿಗೋಷ್ಠಿಯ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸುವರು.
ನಾಳಿನ ಸಚಿವರ ಉಪಹಾರ ಸಭೆಗೆ ಎಲ್ಲಾ ಸಚಿವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಆಹ್ವಾನ ನೀಡಿದ್ದು, ಅಲ್ಲಿ ಅವರು ರಾಹುಲ್‌ಗಾಂಧಿಯವರ ಜತೆ ನಡೆದ ಚರ್ಚೆಯ ವಿಷಯಗಳನ್ನು ಎಲ್ಲಾ ಸಚಿವರ ಅವಗಾಹನೆಗೆ ತಂದು ರಾಜೀನಾಮೆ ನೀಡುವ ಬಗ್ಗೆಯೂ ಹೇಳುವರು ಎಂದು ಹೇಳಲಾಗಿದೆ.
ಕಳೆದ ೩ ವರ್ಷಗಳಲ್ಲಿ ತಮ್ಮ ಜತೆ ರಾಜ್ಯದ ಅಭಿವೃದ್ಧಿಗೆ ಹೆಗಲು ಕೊಟ್ಟು ಕೆಲಸ ಮಾಡಿದ ಎಲ್ಲಾ ಸಚಿವರಿಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಧನ್ಯವಾದ ಹೇಳಲಿದ್ದು, ನಾಳಿನ ಸಚಿವರ ಉಪಹಾರ ಸಭೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿದಾಯದ ಸಭೆಯಾಗಿದೆ.
ರಾಜೀನಾಮೆ ನಂತರ ಸಿಎಲ್‌ಪಿ ಸಭೆ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಾಳೆ ರಾಜ್ಯಪಾಲರಿಗೆ ರಾಜೀನಾಮೆ ಪತ್ರ ನೀಡಿದ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ನೂತನ ಶಾಸಕಾಂಗ ಪಕ್ಷದ ಆಯ್ಕೆಯಾಗಲಿದೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶಾಸಕಾಂಗ ಪಕ್ಷದ ನೂತನ ನಾಯಕನಾಗಿ ಆಯ್ಕೆಯಾಗಲಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಮತ್ತು ಕೆ.ಸಿ. ವೇಣುಗೋಪಾಲ್ ಅವರು ಇಂದು ಮಧ್ಯಾಹ್ನ ದೆಹಲಿಯಿಂದ ಬೆಂಗಳೂರಿಗೆ ಬರಲಿದ್ದು, ಅವರು ಬಂದ ನಂತರ ಶಾಸಕಾಂಗ ಪಕ್ಷದ ಸಭೆಯ ದಿನಾಂಕ ನಿಗದಿಯಾಗಲಿದ್ದು, ಬಹುತೇಕ ಶುಕ್ರವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯುವುದು ನಿಶ್ಚಿತ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೇ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ರವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಾಗುತ್ತದೆ.
ಹೈಕಮಾಂಡ್‌ನ ಸಂದೇಶ ಹೊತ್ತು ಬರಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ಸುರ್ಜೇವಾಲ ರವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಹೈಕಮಾಂಡ್ ಸಂದೇಶವನ್ನು ಎಲ್ಲಾ ಶಾಸಕರಿಗೆ ವಿವರಿಸಿ, ಹೈಕಮಾಂಡ್ ಅಣತಿಯಂತೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಶಾಸಕಾಂಗ ಪಕ್ಷದ ನಾಯಕನ್ನಾಗಿ ಆಯ್ಕೆ ಮಾಡುವ ಪ್ರಸ್ತಾವವನ್ನು ಶಾಸಕರ ಮುಂದಿಡಲಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಆಯ್ಕೆಗೆ ಎಲ್ಲಾ ಶಾಸಕರ ಒಪ್ಪಿಗೆ ಪಡೆಯುವ ಪ್ರಕ್ರಿಯೆಯನ್ನು ನಡೆಸುವರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ನಂತರ ನೂತನ ಶಾಸಕಾಂಗ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಪ್ರಮಾಣ ವಚನ ಕಾರ್ಯಕ್ರಮವನ್ನು ನಿಗದಿ ಮಾಡುವರು ಎಂದು ಹೇಳಲಾಗಿದೆ.
ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಶುಭ ಮುಹೂರ್ತ ನಿಗದಿಗೆ ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆಪ್ತರು ಹಲವು ಜ್ಯೋತಿಷಿಗಳನ್ನು ಸಂಪರ್ಕಿಸಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಾವು ನಂಬುವ ಹಾಗೂ ನಡೆದುಕೊಳ್ಳುವ ತಿಪಟೂರಿನ ಕಾಡಸಿದ್ದೇಶ್ವರ ಮಠದ ಅಜ್ಜಯ್ಯನವರ ಸೂಚನೆಯಂತೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಶುಭ ಮುಹೂರ್ತಕ್ಕೆ ಸಮಯ ನಿಗದಿ ಮಾಡುವರು ಎಂದು ಹೇಳಲಾಗಿದ್ದು, ಸೋಮವಾರ ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಗಳು ಹೆಚ್ಚಿವೆ.
ದೆಹಲಿಯಲ್ಲೇ ಡಿಕೆಶಿ ಠಿಕಾಣಿ
ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬದಲಿಸಿ ನೂತನ ಮುಖ್ಯಮಂತ್ರಿಯ ನೇಮಕಕ್ಕೆ ನಿರ್ಧಾರ ಕೈಗೊಂಡಿರುವ ಬೆನ್ನಲ್ಲೆ ನೂತನ ಮುಖ್ಯಮಂತ್ರಿಯಾಗಲಿರುವ ಡಿ.ಕೆ. ಶಿವಕುಮಾರ್ ರವರು ದೆಹಲಿಯಲ್ಲೇ ಉಳಿದಿದ್ದು, ನಾಳೆ ಅವರು ದೆಹಲಿಯಿಂದ ಬೆಂಗಳೂರಿಗೆ ಬರಲಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಮಧ್ಯಾಹ್ನ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ಸುರ್ಜೇವಾಲ ರವರ ಜತೆ ಬೆಂಗಳೂರಿಗೆ ಬರಬೇಕಿತ್ತಾದರೂ ವರಿಷ್ಠ ನಾಯಕರನ್ನು ಭೇಟಿ ಮಾಡಲು ಅವರು ಇಂದು ಸಹ ದೆಹಲಿಯಲ್ಲೇ ಉಳಿದಿದ್ದು, ನಾಳೆ ಬೆಳಿಗ್ಗೆ ದೆಹಲಿಯಿಂದ ಬೆಂಗಳೂರಿಗೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಯೋಜಿಸಿರುವ ಸಚಿವರ ಉಪಹಾರ ಸಭೆಯಲ್ಲಿ ಪಾಲ್ಗೊಳ್ಳುವರು ಎಂದು ಹೇಳಲಾಗಿದೆ.


























