Home ಸುದ್ದಿ ರಾಷ್ಟ್ರೀಯ ಮತದಾರರ ಹೆಸರು ಡಿಲಿಟ್: ಕೇಂದ್ರಕ್ಕೆ ಪಟ್ಟಿಸಲ್ಲಿಸಲು ಆಯೋಗಕ್ಕೆ ಸುಪ್ರೀಂ ಸೂಚನೆ

ಮತದಾರರ ಹೆಸರು ಡಿಲಿಟ್: ಕೇಂದ್ರಕ್ಕೆ ಪಟ್ಟಿಸಲ್ಲಿಸಲು ಆಯೋಗಕ್ಕೆ ಸುಪ್ರೀಂ ಸೂಚನೆ

ನವದೆಹಲಿ,ಮೇ೨೭:ಮತದಾನದ ಹಕ್ಕಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. ‘ಸಂದೇಹಾಸ್ಪದ ಪೌರತ್ವ’ದ ಆಧಾರದ ಮೇಲೆ ೨೦೦೩ರ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ವ್ಯಕ್ತಿಗಳ ಪಟ್ಟಿಯನ್ನು ಮುಂದಿನ ನಾಲ್ಕು ವಾರಗಳ ಒಳಗಾಗಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಈ ವ್ಯಕ್ತಿಗಳ ಪೌರತ್ವದ ಸ್ಥಿತಿಗತಿಯನ್ನು ಅಂತಿಮವಾಗಿ ನಿರ್ಧರಿಸಲು ಕೋರ್ಟ್ ಈ ಆದೇಶ ಮಾಡಿದೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ‘ವಿಶೇಷ ತೀವ್ರ ಪರಿಷ್ಕರಣೆ’ ನಡೆಸಲು ಚುನಾವಣಾ ಆಯೋಗ ಹೊರಡಿಸಿದ್ದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರಿದ್ದ ಪೀಠವು ಈ ಆದೇಶ ಪ್ರಕಟಿಸಿದೆ. ಆಯೋಗದ ವಿಶೇಷ ಪರಿಷ್ಕರಣಾ ಕ್ರಮದ ಕಾನೂನುಬದ್ಧತೆಯನ್ನು ನ್ಯಾಯಾಲಯವು ಎತ್ತಿಹಿಡಿದಿದೆ.

“ಯಾರ ಹೆಸರುಗಳು ಪೌರತ್ವದ ಸಂದೇಹದ ಮೇಲೆ ಕಡಿತಗೊಂಡಿವೆಯೋ, ಅಂತಹ ಪ್ರಕರಣಗಳನ್ನು ಆಯೋಗವು ನಾಲ್ಕು ವಾರಗಳಲ್ಲಿ ೧೯೫೫ರ ಪೌರತ್ವ ಕಾಯ್ದೆಯಡಿ ರಚಿಸಲಾದ ಸಕ್ಷಮ ಪ್ರಾಧಿಕಾರಕ್ಕೆ ಉಲ್ಲೇಖಿಸಬೇಕು” ಎಂದು ಪೀಠವು ತಿಳಿಸಿದೆ.
ಸಂಬಂಧಪಟ್ಟ ವ್ಯಕ್ತಿಗಳಿಗೆ ಕಡ್ಡಾಯವಾಗಿ ನೋಟಿಸ್ ನೀಡಿ, ಅವರ ವಾದ ಆಲಿಸಲು ಸೂಕ್ತ ಅವಕಾಶ ಕಲ್ಪಿಸಬೇಕು. ಮುಂದಿನ ವಿಧಾನಸಭಾ ಚುನಾವಣೆ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆ ಇವೆರಡರಲ್ಲಿ ಯಾವುದು ಮೊದಲು ಬರುತ್ತದೆಯೋ, ಅದಕ್ಕೂ ಮುನ್ನವೇ ಈ ಪೌರತ್ವ ನಿರ್ಧಾರದ ಪ್ರಕ್ರಿಯೆಯನ್ನು ಕಾನೂನುಬದ್ಧವಾಗಿ ಪೂರ್ಣಗೊಳಿಸಬೇಕು ಎಂದು ಸಕ್ಷಮ ಪ್ರಾಧಿಕಾರಕ್ಕೆ ಗಡುವು ವಿಧಿಸಲಾಗಿದೆ. ತನಿಖೆಯ ನಂತರ ಆ ವ್ಯಕ್ತಿಗಳು ಭಾರತೀಯ ನಾಗರಿಕರು ಎಂಬುದು ಸಾಬೀತಾದರೆ, ಅವರ ಹೆಸರುಗಳನ್ನು ತಕ್ಷಣವೇ ಮತದಾರರ ಪಟ್ಟಿಯಲ್ಲಿ ಮರುಸ್ಥಾಪಿಸಬೇಕು ಎಂದೂ ಕೋರ್ಟ್ ಸ್ಪಷ್ಟಪಡಿಸಿದೆ.

ಚುನಾವಣಾ ಆಯೋಗಕ್ಕೆ ಪೌರತ್ವ ಪರಿಶೀಲಿಸುವ ಅಧಿಕಾರವಿದೆಯೇ ಎಂಬ ಕಾನೂನಾತ್ಮಕ ಪ್ರಶ್ನೆಗೆ ಉತ್ತರಿಸಿದ ಸಿಜೆಐ ಸೂರ್ಯ ಕಾಂತ್, “ಮತದಾರರ ಪಟ್ಟಿಗೆ ಹೆಸರು ಸೇರಿಸುವ ಸೀಮಿತ ಉದ್ದೇಶಕ್ಕಾಗಿ ಮಾತ್ರ ವ್ಯಕ್ತಿಯ ಪೌರತ್ವವನ್ನು ಪರಿಶೀಲಿಸುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ ೧೬ರ ಅನ್ವಯ ಆಯೋಗಕ್ಕೆ ಈ ಸಾಂವಿಧಾನಿಕ ಹಕ್ಕಿದೆ” ಎಂದರು.

ಚುನಾವಣಾ ಆಯೋಗದ ಪೌರತ್ವ ನಿರ್ಧಾರವು ಅಂತಿಮವಲ್ಲ. ಆಯೋಗವು ಒಬ್ಬ ವ್ಯಕ್ತಿಯ ಹೆಸರನ್ನು ಪಟ್ಟಿಯಿಂದ ಕೈಬಿಟ್ಟ ತಕ್ಷಣ ಆತನ ಪೌರತ್ವ ರದ್ದಾಗುವುದಿಲ್ಲ. ಪೌರತ್ವ ಕಾಯ್ದೆಯಡಿ ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರ ಮಾತ್ರ ಒಬ್ಬರ ಪೌರತ್ವವನ್ನು ಅಂತಿಮವಾಗಿ ನಿರ್ಧರಿಸಲು ಸಾಧ್ಯ. ಆಯೋಗದ ತೀರ್ಮಾನ ಕೇವಲ ಚುನಾವಣಾ ಪ್ರಕ್ರಿಯೆಗೆ ಮಾತ್ರ ಸೀಮಿತವಾಗಿರುತ್ತದೆ.”

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಇಂತಹ ವಿಶೇಷ ಪರಿಷ್ಕರಣೆಗಳು ಪೂರಕವಾಗಿವೆ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಆಯೋಗದ ನೆಗೆಟಿವ್ ವರದಿಗಳು ಒಬ್ಬ ವ್ಯಕ್ತಿಯ ಪೌರತ್ವದ ಹಕ್ಕನ್ನು ಸಂಪೂರ್ಣವಾಗಿ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಅರ್ಜಿದಾರರಿಗೆ ಆಶ್ವಾಸನೆ ನೀಡಿದೆ.