
ಬೆಂಗಳೂರು. ಮೇ-೨೫.ದೇಶಾದ್ಯಂತ ವಾಹನ ಸವಾರರಿಗೆ ಮತ್ತೆ ಇಂಧನ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಕೇಂದ್ರ ಸರ್ಕಾರ ಮತ್ತೊಮ್ಮೆ ಹೆಚ್ಚಿಸಿದ್ದು, ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬಂದಿವೆ. ಕಳೆದ ೧೧ ದಿನಗಳಲ್ಲಿ ಇದು ನಾಲ್ಕನೇ ಬಾರಿ ದರ ಏರಿಕೆಯಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಂದಿನ ಪರಿಷ್ಕೃತ ದರ ಪ್ರಕಾರ, ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ ೨.೬೧ ರೂಪಾಯಿ ಹಾಗೂ ಡೀಸೆಲ್ ದರದಲ್ಲಿ ೨.೭೧ ರೂಪಾಯಿ ಹೆಚ್ಚಳ ಮಾಡಲಾಗಿದೆ. ಇದರೊಂದಿಗೆ ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ದರ ಮತ್ತಷ್ಟು ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಇಂದು ಲೀಟರ್ ಪೆಟ್ರೋಲ್ ದರ ೧೧೦.೬೧ ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್ ದರ ೯೮.೫೪ ರೂಪಾಯಿಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ೧೦೦ ರೂಪಾಯಿ ಗಡಿ ದಾಟಿದ್ದು, ಲೀಟರ್‌ಗೆ ೧೦೨.೧೨ ರೂಪಾಯಿ ದಾಖಲಾಗಿದೆ. ಡೀಸೆಲ್ ದರ ೯೫.೨೦ ರೂಪಾಯಿಯಾಗಿದೆ.
ಇನ್ನು ಮುಂಬೈನಲ್ಲಿ ಪೆಟ್ರೋಲ್ ದರ ೧೧೧.೨೧ ರೂಪಾಯಿ ಹಾಗೂ ಡೀಸೆಲ್ ದರ ೯೭.೮೩ ರೂಪಾಯಿಯಾಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ದರ ೧೧೩.೪೭ ರೂಪಾಯಿ ಮತ್ತು ಡೀಸೆಲ್ ದರ ೯೯.೮೨ ರೂಪಾಯಿ ದಾಖಲಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ದರ ೧೦೭.೭೭ ರೂಪಾಯಿ ಹಾಗೂ ಡೀಸೆಲ್ ದರ ೯೯.೫೫ ರೂಪಾಯಿಗೆ ಏರಿಕೆಯಾಗಿದೆ.
ಕಳೆದ ಕೆಲವು ದಿನಗಳಿಂದ ಹಂತ ಹಂತವಾಗಿ ಇಂಧನ ದರ ಏರಿಕೆಯಾಗುತ್ತಿದೆ. ಮೇ ೧೫ರಂದು ಪೆಟ್ರೋಲ್ ದರವನ್ನು ೩.೨೫ ರೂಪಾಯಿ ಹಾಗೂ ಡೀಸೆಲ್ ದರವನ್ನು ೩.೧೧ ರೂಪಾಯಿ ಹೆಚ್ಚಿಸಲಾಗಿತ್ತು. ಬಳಿಕ ಮೇ ೧೯ರಂದು ಪೆಟ್ರೋಲ್ ೯೯ ಪೈಸೆ ಮತ್ತು ಡೀಸೆಲ್ ೯೪ ಪೈಸೆ ಏರಿಕೆಯಾಗಿತ್ತು. ಮೇ ೨೩ರಂದು ಮತ್ತೆ ಪೆಟ್ರೋಲ್ ಹಾಗೂ ಡೀಸೆಲ್ ದರ ತಲಾ ೯೫ ಪೈಸೆ ಹೆಚ್ಚಳ ಕಂಡಿತ್ತು. ಇದೀಗ ಇಂದು ಮತ್ತೊಮ್ಮೆ ಭಾರೀ ಏರಿಕೆ ಮಾಡಲಾಗಿದೆ.
ನಿರಂತರ ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ ಹೆಚ್ಚಳವಾಗುವ ಸಾಧ್ಯತೆ ಇದ್ದು, ಅಗತ್ಯ ವಸ್ತುಗಳ ಬೆಲೆಯ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.
ಯಾವ ನಗರದಲ್ಲಿ ಎಷ್ಟು
ದೆಹಲಿ- ೧೦೨.೧೨ ರೂ, _ ೯೫.೨೦ ರೂಪಾಯಿ
ಕೋಲ್ಕತ್ತಾ- ೧೧೩.೫೧ರೂ _ ೯೯.೮೨ ರೂಪಾಯಿ
ಮುಂಬೈ – ೧೧೧.೨೧ರೂ _ ೯೭.೮೩ ರೂಪಾಯಿ
ಚೆನ್ನೈ – ೧೦೭.೭೭ರೂ, _ ೯೯.೫೫ ರೂಪಾಯಿ
ಬೆಂಗಳೂರು- ೧೧೦.೯೩ _ ೯೮.೮೦ ರೂಪಾಯಿ


























