Home Lead News ಕುರ್ಚಿ ಬಿಕ್ಕಟ್ಟು ಹೈ ಸಭೆ

ಕುರ್ಚಿ ಬಿಕ್ಕಟ್ಟು ಹೈ ಸಭೆ

ಬೆಂಗಳೂರು, ಮೇ ೨೬- ರಾಜ್ಯ ಕಾಂಗ್ರೆಸ್‌ನಲ್ಲಿನ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ಗಾಂಧಿಯವರು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಜತೆ ಸಭೆ ನಡೆಸಿದ್ದು, ಈ ಸಭೆಯ ತೀರ್ಮಾನಗಳತ್ತ ಎಲ್ಲರ ಚಿತ್ತ ನೆಟ್ಟಿದೆ.


ನವದೆಹಲಿಯ ಎಐಸಿಸಿ ಪ್ರಧಾನ ಕಾರ್ಯಾಲಯ ಇಂದಿರಾ ಭವನದಲ್ಲಿಂದು ರಾಹುಲ್‌ಗಾಂಧಿಯವರು ಮೊದಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆ, ನಂತರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಜತೆ ಪ್ರತ್ಯೇಕವಾಗಿ ಸಭೆ ನಡೆಸಿದರು.


ಇದಾದ ಬಳಿಕ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ಸುರ್ಜೇವಾಲ ರವರ ಜತೆಯೂ ಚರ್ಚೆ ನಡೆಸಿದ ರಾಹುಲ್‌ಗಾಂಧಿ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆ ಒಟ್ಟಿಗೆ ಸಭೆ ನಡೆಸಿ ಚರ್ಚಿಸಿದ್ದು, ಹೈಕಮಾಂಡ್‌ನ ತೀರ್ಮಾನ ಏನಿರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.


ರಾಜ್ಯ ಕಾಂಗ್ರೆಸ್‌ನ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಕಾಂಗ್ರೆಸ್ ವರಿಷ್ಠರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ದೆಹಲಿಗೆ ಕರೆಸಿಕೊಂಡು ಇಂದು ಕಾಂಗ್ರೆಸ್ ಪ್ರಧಾನ ಕಾರ್ಯಾಲಯ ಇಂದಿರಾ ಭವನದಲ್ಲೇ ಸಭೆ ನಡೆಸಿ ಚರ್ಚಿಸಿರುವುದು ಕಾಂಗ್ರೆಸ್‌ನ ಗೊಂದಲಗಳಿಗೆ ಸದ್ಯದಲ್ಲೇ ತೆರೆ ಬೀಳುವ ಸುಳಿವು ಸಿಕ್ಕಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಜತೆ ಸಭೆ ನಡೆಸಿ ಅವರ ಮಾತುಗಳನ್ನು ಆಲಿಸಿದ ರಾಹುಲ್‌ಗಾಂಧಿಯವರು ತಮ್ಮ ನಿರ್ಧಾರ ಏನು ಎಂಬುದರ ಗುಟ್ಟನ್ನು ಬಿಟ್ಟು ಕೊಟ್ಟಿಲ್ಲ.


ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿಯವರ ಜತೆ ಚರ್ಚಿಸಿ ಅಂತಿಮವಾಗಿ ರಾಹುಲ್‌ಗಾಂಧಿಯವರು ರಾಜ್ಯ ಕಾಂಗ್ರೆಸ್‌ನ ಗೊಂದಲಗಳ ಬಗ್ಗೆ ತಮ್ಮ ತೀರ್ಮಾನ ಏನು ಎಂಬುದನ್ನು ಪ್ರಕಟಿಸುವರು ಎಂದು ಹೇಳಲಾಗಿದೆ.


ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರ ಭೇಟಿಗೂ ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಐಸಿಸಿ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಜತೆ ಪ್ರತ್ಯೇಕವಾಗಿ ಮಾತನಾಡಿದ್ದರು.


ಇವರಿಬ್ಬರ ಭೇಟಿ ಬಳಿಕವೇ ಸಿದ್ದರಾಮಯ್ಯನವರು ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿ ರಾಜ್ಯ ರಾಜಕೀಯ ವಿದ್ಯಮಾನಗಳನ್ನು ಅವರ ಗಮನಕ್ಕೆ ತಂದಿದ್ದಾರೆ ಎಂದು ಹೇಳಲಾಗಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜತೆಗಿನ ಸಭೆಯ ನಂತರ ರಾಹುಲ್‌ಗಾಂಧಿಯವರು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಿ ಅವರ ನಿಲುವು ಏನು ಎಂಬುದನ್ನು ತಿಳಿದುಕೊಂಡಿದ್ದಾರೆ.


ಇದಾದ ಬಳಿಕ ಇಬ್ಬರು ನಾಯಕರ ಜತೆಯೂ ಒಟ್ಟಾಗಿಯೇ ರಾಹುಲ್‌ಗಾಂಧಿ ಎಲ್ಲಾ ವಿಚಾರಗಳನ್ನು ಚರ್ಚಿಸಿದ್ದು, ಹೈಕಮಾಂಡ್ ಏನೇ ತೀರ್ಮಾನ ಕೈಗೊಂಡರೂ ಅದಕ್ಕೆ ಇಬ್ಬರು ನಾಯಕರು ಬದ್ಧರಾಗಿರಬೇಕು. ಯಾವುದೇ ಕಾರಣಕ್ಕೂ ಹೈಕಮಾಂಡ್ ತೀರ್ಮಾನಕ್ಕೆ ಅಪಸ್ವರ ಬೇಡ ಎಂದು ರಾಹುಲ್‌ಗಾಂಧಿ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಜತೆಗಿನ ಈ ಸಭೆಯ ನಂತರ ಕಾಂಗ್ರೆಸ್‌ನ ಗೊಂದಲಗಳು ಇತ್ಯರ್ಥವಾಗುತ್ತವೆಯೇ, ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆಗಳಿಗೆ ಹೈಕಮಾಂಡ್ ತೆರೆ ಎಳೆಯುತ್ತದೆಯೇ ಎಂಬ ಚರ್ಚೆಗಳು ಬಿರುಸಾಗಿದ್ದು, ಹೈಕಮಾಂಡ್ ತೀರ್ಮಾನದ ಮೇಲೆ ರಾಜ್ಯ ಕಾಂಗ್ರೆಸ್‌ನ ಮುಂದಿನ ಆಗು-ಹೋಗುಗಳು ನಿರ್ಧಾರವಾಗಲಿವೆ.


ರಾಹುಲ್‌ಗಾಂಧಿಯವರ ಭೇಟಿ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ಹಂಚಿಕೆಯ ಒಪ್ಪಂದ ಜಾರಿಗೆ ಪಟ್ಟು ಹಾಕಿದ್ದು, ಕಾಂಗ್ರೆಸ್ ಪಕ್ಷಕ್ಕೆ ತಮ್ಮ ಸೇವೆಯನ್ನು ಎಳೆಎಳೆಯಾಗಿ ಬಿಡಿಸಿಟ್ಟರು ಎನ್ನಲಾಗಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ರಾಜ್ಯ ಕಾಂಗ್ರೆಸ್‌ನ ಎಲ್ಲಾ ವಿದ್ಯಮಾನಗಳನ್ನು ರಾಹುಲ್‌ಗಾಂಧಿಯವರ ಗಮನಕ್ಕೆ ತಂದು ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಸಚಿವರು ಹಾಗೂ ಶಾಸಕರ ಅಭಿಪ್ರಾಯ ಏನಿದೆ ಎಂಬುದು ಮುಖ್ಯ. ತಮಗೆ ಹೆಚ್ಚಿನ ಸಚಿವರು ಹಾಗೂ ಶಾಸಕರ ಬೆಂಬಲ ಇದೆ ಎಂಬುದನ್ನು ರಾಹುಲ್‌ಗಾಂಧಿಯವರ ಮುಂದೆ ಪ್ರತಿಪಾದಿಸಿದ್ದಾರೆ ಎಂದು ಹೇಳಲಾಗಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪಟ್ಟು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಪ್ರತಿಪಟ್ಟಿನ ನಡುವೆ ಇಕ್ಕಟ್ಟಿಗೆ ಸಿಲುಕಿರುವ ಕಾಂಗ್ರೆಸ್ ಹೈಕಮಾಂಡ್ ಇಬ್ಬನ್ನು ಓಲೈಸಿ ಯಾವ ರೀತಿ ಸಂಧಾನ ಸೂತ್ರ ಹೆಣೆಯಲಿದೆ ಎಂಬುದು ಈಗ ಕುತೂಹಲದ ಕೇಂದ್ರವಾಗಿದೆ.


ರಾಜ್ಯ ಕಾಂಗ್ರೆಸ್‌ನ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಹೈಕಮಾಂಡ್ ಬುಲಾವ್ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಿನ್ನೆ ರಾತ್ರಿಯೇ ದೆಹಲಿಗೆ ಆಗಮಿಸಿದ್ದರು. ಇಂದು ಬೆಳಿಗ್ಗೆ ಈ ಇಬ್ಬರು ನಾಯಕರನ್ನು ರಾಹುಲ್‌ಗಾಂಧಿ ಭೇಟಿಯಾದರು.


ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವರಾದ ಡಾ. ಜಿ. ಪರಮೇಶ್ವರ್, ಕೆ.ಜೆ. ಜಾರ್ಜ್, ಡಾ. ಹೆಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ್, ಬೈರತಿ ಸುರೇಶ್ ಇವರುಗಳು ನಿನ್ನೆ ರಾತ್ರಿಯೇ ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿದ್ದಾರೆ. ಇವರ್ಯಾರೂ ವರಿಷ್ಠರನ್ನು ಇದುವರೆಗೂ ಭೇಟಿಯಾಗಿಲ್ಲ.


ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಮ್ಮ ಸಹೋದರ, ಮಾಜಿ ಸಂಸದ ಡಿ.ಕೆ. ಸುರೇಶ್ ಜತೆ ದೆಹಲಿಗೆ ಬಂದಿದ್ದು, ಶಿವಕುಮಾರ್ ರವರ ಜತೆ ೧೨ಕ್ಕೂ ಹೆಚ್ಚು ಶಾಸಕರು ದೆಹಲಿಗೆ ಆಗಮಿಸಿದ್ದರು.

ದೆಹಲಿಯ ಕರ್ನಾಟಕ ಭವನದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿ ಹೊಳಿ, ಡಾ. ಹೆಚ್.ಸಿ. ಮಹದೇವಪ್ಪ, ಭೈರತಿ ಸುರೇಶ್, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಕಾನೂನು ಸಲಹೆಗಾರ ಪೊನ್ನಣ್ಣ ಸೇರಿ ಹಲವಾರು ಮುಖಂಡರು ಉಪಹಾರ ಸವಿದರು.

ಸಚಿವರ ಜತೆ ಉಪಹಾರ ಸಭೆ; ಕಾರ್ಯತಂತ್ರ ಚರ್ಚೆ


ಕಾಂಗ್ರೆಸ್ ವರಿಷ್ಠ ರಾಹುಲ್‌ಗಾಂಧಿಯವರ ಜತೆ ರಾಜ್ಯ ಕಾಂಗ್ರೆಸ್‌ನ ಬಿಕ್ಕಟ್ಟಿನ ಸಂಬಂಧ ಚರ್ಚಿಸಲು ಸಚಿವರ ದಂಡಿನೊಡನೆ ದೆಹಲಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬೆಳಿಗ್ಗೆ ಕರ್ನಾಟಕ ಭವನದಲ್ಲಿ ಸಚಿವರುಗಳ ಜತೆ ಉಪಹಾರ ಸಭೆ ನಡೆಸಿ ಹೈಕಮಾಂಡ್ ಮನವೊಲಿಸಲು ಏನೆಲ್ಲಾ ಕಾರ್ಯತಂತ್ರಗಳನ್ನು ರೂಪಿಸಬೇಕು ಎಂಬ ಬಗ್ಗೆ ಅನೌಪಚಾರಿಕವಾಗಿ ಚರ್ಚೆ ನಡೆಸಿದರು.


ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉಪಹಾರ ಸಭೆಯಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಡಾ. ಹೆಚ್.ಸಿ. ಮಹದೇವಪ್ಪ, ಕೆ.ಜಿ. ಜಾರ್ಜ್, ಎಂ.ಬಿ. ಪಾಟೀಲ್, ಬೈರತಿ ಸುರೇಶ್, ರಾಜ್ಯ ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಸೀತರಾಮ್ ಸೇರಿದಂತೆ ಹಲವರು ಭಾಗಿಯಾಗಿದ್ದರು.


ಈ ಸಭೆಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಐಸಿಸಿ ಕಚೇರಿಗೆ ತೆರಳಿದ್ದು, ಅಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಭೇಟಿ ಮಾಡಿ ಚರ್ಚಿಸಿದರು.


ನಂತರ ಸಿದ್ದರಾಮಯ್ಯನವರು ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.