
ಕಲಬುರಗಿ,ಮೇ.27-ನಗರದ ಬಸವನಗರ ಧರ್ಮಶಾಲಾ ಎದುರುಗಡೆಯ ರಸ್ತೆಯ ಮೇಲೆ ಆಟೋದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಫುಡ್ ಇನ್ಸಪೆಕ್ಟರ್ ಯಲ್ಲಾಲಿಂಗ ಕಡಕೂಳಕರ್, ಅಶೋಕನಗರ ಪೊಲೀಸ್ ಠಾಣೆ ಇನ್ಸಪೆಕ್ಟರ್ ಸತೀಶ ಎನ್.ಕಣೀಮೇಶ್ವರ ಅವರು ದಾಳಿ ನಡೆಸಿ ಫಿಲ್ಟರ್‍ಬೆಡ್ ರಾಜೀವಗಾಂಧಿ ನಗರದ ರಾಹುಲ್ ತಂದೆ ಶ್ರೀಮಂತ ವಾಲಿಕಾರ (23) ವಶಕ್ಕೆ ಪಡೆದು 1 ಲಕ್ಷ ರೂ.ಮೌಲ್ಯದ ಆಟೋ ಮತ್ತು 45 ರಿಂದ 50 ಕೆ.ಜಿ.ತೂಕದ, 8250 ರೂ.ಮೌಲ್ಯದ 2.5 ಕ್ವಿಂಟಾಲ್ ಅಕ್ಕಿ ಜಪ್ತಿ ಮಾಡಿದ್ದಾರೆ. ಆಟೋ ಚಾಲಕ ರಾಹುಲ್ ವಾಲಿಕಾರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.























