
ಬೀದರ್:ಜು.29: ತಾಲ್ಲೂಕಿನ ಕಮಠಾಣ ಗ್ರಾಮವನ್ನು ವ್ಯಸನ ಮುಕ್ತಗೊಳಿಸಲು ಬೀದರ್ ನಾಗರಿಕ
ಸನ್ಮಾರ್ಗ ಸಮಿತಿಯ ಸದಸ್ಯರು ಗ್ರಾಮದಲ್ಲಿ ಸೋಮವಾರ ಮಾದಕ ವಸ್ತುಗಳ ದುಷ್ಪರಿಣಾಮಗಳ
ಕುರಿತು ಜಾಗೃತಿ ಜಾಥಾ ನಡೆಸಿದರು.
ಘೋಷಣೆ ಕೂಗುತ್ತಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿ ಗಮನ ಸೆಳೆದರು.
ಜಾಥಾದ ಮಾರ್ಗದಲ್ಲಿ ಕಿರಾಣಿ ಅಂಗಡಿ ಮಾಲೀಕರನ್ನು ಭೇಟಿ ಮಾಡಿ ವ್ಯಕ್ತಿ ಹಾಗೂ ಸಮಾಜದ
ಸ್ವಾಸ್ಥ್ಯಕ್ಕೆ ಮಾರಕವಾದ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದು ಎಂದು ಮನವಿ
ಮಾಡಿದರು.
ತಂಬಾಕು ಉತ್ಪನ್ನ ಬಿಟ್ಟು ಅಂಗಡಿಗಳಲ್ಲಿ ಬೇರೆ ಸಾವಿರಾರು ಉತ್ಪನ್ನಗಳನ್ನು ಮಾರಾಟ
ಮಾಡಬಹುದು. ಅದರ ಮೂಲಕ ವ್ಯಾಪಾರದಲ್ಲಿ ಸಮೃದ್ಧಿ ಕಾಣಬಹುದು. ತಂಬಾಕು ಉತ್ಪನ್ನಗಳು
ವಿಷಕ್ಕೆ ಸಮಾನವಾಗಿರುವುದರಿಂದ ಅವುಗಳ ವ್ಯಾಪಾರದಿಂದ ದೂರ ಉಳಿಯಬೇಕು ಎಂದು
ಮನವೊಲಿಸಿದರು.
ಈ ವೇಳೆ ಕಿರಾಣಿ ಅಂಗಡಿಗಳ ಮಾಲೀಕರಾದ ರಾಜಕುಮಾರ ವಿಠ್ಠಲರಾವ್ ಬಾವಗೆ, ರಜನಿಕಾಂತ
ಸಿದ್ದಪ್ಪ ಹಾಗೂ ಗೋಪಾಲ್ ಹನುಮಂತಪ್ಪ ತಮ್ಮ ಅಂಗಡಿಗಳಲ್ಲಿನ ಗುಟ್ಕಾ ಪಾಕೇ???ಗಳನ್ನು
ಹೊರ ತಂದು ಸುಟ್ಟು ಹಾಕಿದರು. ಇನ್ನು ಮುಂದೆ ತಂಬಾಕು ಉತ್ಪನ್ನಗಳನ್ನು ಮಾರಾಟ
ಮಾಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು.
ಮಾದಕ ವಸ್ತುಗಳ ಸೇವನೆ ಚಟದಿಂದಾಗಿ ಬಹಳಷ್ಟು ಯುವಕರು, ಮಧ್ಯ ವಯಸ್ಕರು ಹಾಗೂ ಹಿರಿಯರು
ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ದೇಶ ಹಾಗೂ ಸಮಾಜದ ಮೇಲೆ
ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ಯುವ ಶಕ್ತಿ ಬಲಹೀನವಾಗುತ್ತಿದೆ. ತಂದೆ-ತಾಯಿಗೆ
ಆಸರೆಯಾಗಬೇಕಿದ್ದ ಅನೇಕ ಯುವಕರು ಕುಟುಂಬಕ್ಕೆ ಭಾರವಾಗುತ್ತಿದ್ದಾರೆ ಎಂದು ಜಾಥಾದ
ನೇತೃತ್ವ ವಹಿಸಿದ್ದ ಬೀದರ್ ನಾಗರಿಕ ಸನ್ಮಾರ್ಗ ಸಮಿತಿಯ ಅಧ್ಯಕ್ಷ ಡಾ. ಅಬ್ದುಲ್
ಖದೀರ್ ಹೇಳಿದರು.
ತಂಬಾಕು ಉತ್ಪನ್ನ, ಸಾರಾಯಿ ಸೇವನೆಯು ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ
ಕಾರಣವಾಗುತ್ತದೆ. ಹೀಗಾಗಿ ಎಲ್ಲರೂ ಮಾದಕ ವಸ್ತುಗಳ ಸೇವನೆಯಿಂದ ದೂರ ಇರಬೇಕು. ಈ ಮೂಲಕ
ಆರೋಗ್ಯಪೂರ್ಣ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಬೀದರ್ ಜಿಲ್ಲೆಯನ್ನು ವ್ಯಸನಮುಕ್ತಗೊಳಿಸಲು ಸಮಿತಿಯಿಂದ ಅಭಿಯಾನ ನಡೆಸಲಾಗುತ್ತಿದೆ.
ನಗರ ಹಾಗೂ ಗ್ರಾಮಗಳಲ್ಲಿ ತಂಬಾಕು ಉತ್ಪನ್ನ ಹಾಗೂ ಸಾರಾಯಿ ಸೇವನೆಯ ದುಷ್ಪರಿಣಾಮಗಳ
ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಕರ್ನಾಟಕವನ್ನು ವಸನ ಮುಕ್ತಗೊಳಿಸಲು ಈಗಾಗಲೇ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೂ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಸಮಿತಿಯ ಕಾರ್ಯದರ್ಶಿ ಅಶೋಕ್ ವಡಗಾವೆ, ಪ್ರಮುಖರಾದ ಡಾ. ರಾಜಶೇಖರ ಸೇಡಂಕರ್,
ಶಂಭುಲಿಂಗ ವಾಲ್ದೊಡ್ಡಿ, ಮಕ್ಸೂದ್ ಖಾನ್, ಅಬ್ದುಲ್ ರೆಹಮಾನ್ ಆಜ್ಮಿ, ರಾಮಕೃಷ್ಣ
ರೆಡ್ಡಿ ಮೊದಲಾದವರು ಪಾಲ್ಗೊಂಡಿದ್ದರು.






























