
ಬೀದರ್:ಆ.1: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೀದರ್ ಗ್ರಾಮಾಂತರ ಯೋಜನಾ ಕಚೇರಿ, ಅಮಲಾಪುರ ವಲಯದ ಚೀಟ್ಟಾವಾಡಿ ಕಾರ್ಯಕ್ಷೇತ್ರದ ವತಿಯಿಂದ ಜೈ ಭವಾನಿ ದೇವಸ್ಥಾನದಲ್ಲಿ ಶುಕ್ರವಾರ ಸ್ವ ಉದ್ಯೋಗ ಪ್ರೇರಣ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಸುಮಾರು 60ಕ್ಕೂ ಹೆಚ್ಚು ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಸ್ವ ಉದ್ಯೋಗ ಯೋಜನೆಗಳ ಕುರಿತು ಮಾಹಿತಿ ಪಡೆದರು.
ಕಾರ್ಯಕ್ರಮವನ್ನು ಯೋಜನಾಧಿಕಾರಿ ಮಯೂರ್, ಪಿಎಸ್‍ಐ ಶ್ರೀಮತಿ ಮಲಮ್ಮ, ಸ್ವ ಉದ್ಯೋಗ ತರಬೇತುದಾರರಾದ ಪ್ರೇಮಾ ಮೇಡಂ, ದೇವಸ್ಥಾನದ ಅರ್ಚಕರು ಹಾಗೂ ಒಕ್ಕೂಟದ ಅಧ್ಯಕ್ಷ ಶಿವಯ್ಯ ಸ್ವಾಮಿ ಶಿವುಮಂಗಲ ಮತ್ತು ಸಮನ್ವಯಾಧಿಕಾರಿ ಜಯಸುಧಾ ಮೇಡಂ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಯೋಜನಾಧಿಕಾರಿ ಮಯೂರ್ ಅವರು ಗ್ರಾಮಾಭಿವೃದ್ಧಿ ಯೋಜನೆಯಡಿ ಲಭ್ಯವಿರುವ ವಿವಿಧ ಸೌಲಭ್ಯಗಳು, ಪ್ರಗತಿ ನಿಧಿ ಪಡೆಯುವ ಸರಳ ವಿಧಾನ, ಸ್ವ ಉದ್ಯೋಗದ ಅವಕಾಶಗಳು, ಉಚಿತ ಹಾಗೂ ವ್ಯವಸ್ಥಿತ ತರಬೇತಿಗಳ ಕುರಿತು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಗ್ರಾಮ ಮಟ್ಟದಲ್ಲಿಯೇ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿ, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕರೆ ನೀಡಿದರು.
ಪಿಎಸ್‍ಐ ಮಲಮ್ಮ ಅವರು ಮಹಿಳೆಯರ ಶಕ್ತಿ, ಗೃಹಿಣಿಯರ ಜವಾಬ್ದಾರಿ ಹಾಗೂ ಮನೆಯಿಂದಲೇ ಸ್ವ ಉದ್ಯೋಗ ಆರಂಭಿಸುವ ಅವಕಾಶಗಳ ಕುರಿತು ಮಾತನಾಡಿದರು. ಮಹಿಳೆಯರ ಸಬಲೀಕರಣಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಡೆಸುತ್ತಿರುವ ವಿವಿಧ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು. ಇದೇ ವೇಳೆ ಸಂಸ್ಥೆಯ ಸಂಸ್ಥಾಪಕ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಹಾಗೂ ಡಾ. ಶ್ರೀಮತಿ ಹೇಮಾವತಿ ವಿ. ಹೆಗ್ಗಡೆ ಅವರ ಸೇವೆಯನ್ನು ಶ್ಲಾಘಿಸಿದರು.
ಸಮನ್ವಯಾಧಿಕಾರಿ ಜಯಸುಧಾ ಅವರು ಕಾರ್ಯಕ್ರಮ ನಿರೂಪಣೆ ನಡೆಸಿದರು. ಸಂಘದ ಸದಸ್ಯರನ್ನು ಸ್ವಾಗತಿಸಲಾಯಿತು. ಸೇವಾ ಪ್ರತಿನಿಧಿ ಶಶಿಕಲಾ ವಂದಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷರು, ವಲಯದ ಸೇವಾ ಪ್ರತಿನಿಧಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು






























