Home ಜಿಲ್ಲೆ ತುಮಕೂರು ಶಾಲಾ ಸಂಸತ್ ಪದಗ್ರಹಣ, ಕಾರ್ಗಿಲ್ ವಿಜಯ ದಿವಸ್ ಆಚರಣೆ

ಶಾಲಾ ಸಂಸತ್ ಪದಗ್ರಹಣ, ಕಾರ್ಗಿಲ್ ವಿಜಯ ದಿವಸ್ ಆಚರಣೆ

ಹುಳಿಯಾರು, ಜು. ೨೭- ಪಟ್ಟಣದ ವಿದ್ಯಾವಾರಿಧಿ ಶಾಲೆಯಲ್ಲಿ ಶಾಲಾ ಸಂಸತ್ತಿಗೆ ಆಯ್ಕೆಯಾದ ನಾಯಕ-ನಾಯಕಿಯರ ಪದಗ್ರಹಣ ಸಮಾರಂಭ ಹಾಗೂ ಕಾರ್ಗಿಲ್ ವಿಜಯ ದಿವನ್‌ನ್ನು ಅತ್ಯಂತ ಸಂಭ್ರಮ ಹಾಗೂ ದೇಶ ಭಕ್ತಿಯೊಂದಿಗೆ ಆಚರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಲೆಯ ಅಧ್ಯಕ್ಷ ಕೆ.ಎಸ್.ಕಿರಣ್ ಕುಮಾರ್, ಕಾರ್ಗಿಲ್ ಯುದ್ಧದಲ್ಲಿ ವೀರ ಮರಣ ಹೊಂದಿದ ಯೋಧರ ತ್ಯಾಗ, ಶೌರ್ಯ ಮತ್ತು ರಾಷ್ಟ್ರಪ್ರೇಮವನ್ನು ಸ್ಮರಿಸಿ ಗೌರವ ಸಲ್ಲಿಸಿದರು. ದೇಶದ ರಕ್ಷಣೆಗೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟ ಯೋಧರ ಸೇವೆ ಪ್ರತಿಯೊಬ್ಬ ಭಾರತೀಯನಿಗೂ ಸದಾ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.ಶಾಲಾ ಸಂಸತ್ತಿಗೆ ಆಯ್ಕೆಯಾದ ನಾಯಕ-ನಾಯಕಿಯರಿಗೆ ಪದಗ್ರಹಣ ಬೋಧಿಸಿ, ಶಾಲಾ ಹಂತದಲ್ಲಿಯೇ ನಾಯಕತ್ವ, ಶಿಸ್ತು, ಜವಾಬ್ದಾರಿ ಮತ್ತು ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಇಂದಿನ ವಿದ್ಯಾರ್ಥಿಗಳೇ ನಾಳಿನ ಶ್ರೇಷ್ಠ ನಾಯಕರು ಎಂಬ ವಿಶ್ವಾಸ ವ್ಯಕ್ತಪಡಿಸಿದರು.


ಶಾಲೆಯ ಕಾರ್ಯದರ್ಶಿ ಕವಿತಾಕಿರಣ್ ಮಾತನಾಡಿ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು ಮತ್ತು ಪ್ರಭುಗಳು ಎಂಬ ಮಾತಿನಂತೆ ವಿದ್ಯಾರ್ಥಿಗಳು ಉತ್ತಮ ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಂಡು ಶಾಲೆ, ಪೋಷಕರು ಹಾಗೂ ಸಮಾಜಕ್ಕೆ ಕೀರ್ತಿ ತರಬೇಕು ಎಂದು ಹಾರೈಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಲೆಯ ಆಡಳಿತಾಧಿಕಾರಿ ಕೆ.ಅಮಿತ್, ದೇಶದ ಏಳ್ಗೆ ಮತ್ತು ಅಭಿವೃದ್ಧಿ ಇಂದಿನ ಮಕ್ಕಳ ನಾಯಕತ್ವದ ಮೇಲೆ ಅವಲಂಬಿತವಾಗಿದೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಉತ್ತಮ ನಾಯಕನಾಗಿ ರೂಪುಗೊಳ್ಳಬೇಕೆಂದು ಆಶಿಸಿದರು.ಶಾಲೆಯ ಪ್ರಾಂಶುಪಾಲರಾದ ಸ್ವಾಮಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಸಾಧಕರಾಗುವ ಸಾಮರ್ಥ್ಯ ಅಡಗಿದ್ದು, ದೊರೆಯುವ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಶ್ರಮ, ಶಿಸ್ತು ಮತ್ತು ಸಂಕಲ್ಪದಿಂದ ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ತಿಳಿಸಿದರು.


ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ನಾಯಕತ್ವ ಮತ್ತು ಜವಾಬ್ದಾರಿಯ ಮನೋಭಾವವನ್ನು ಬೆಳೆಸುವ ಉದ್ದೇಶದೊಂದಿಗೆ ಅತ್ಯಂತ ಅರ್ಥಪೂರ್ಣವಾಗಿ ಹಾಗೂ ವೈಭವದಿಂದ ನೆರವೇರಿತು.