Home ಜಿಲ್ಲೆ ತುಮಕೂರು ಜು.೩೦ಕ್ಕೆ ಎಸ್ಸಿ-ಎಸ್ಟಿ ಹಿತರಕ್ಷಣಾ ಸಭೆ

ಜು.೩೦ಕ್ಕೆ ಎಸ್ಸಿ-ಎಸ್ಟಿ ಹಿತರಕ್ಷಣಾ ಸಭೆ

ತುರುವೇಕೆರೆ, ಜು. ೨೭- ತಾಲ್ಲೂಕು ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಭೆಯನ್ನು ಜು. ೩೦ ರಂದು ಬೆಳಗ್ಗೆ ೧೧ ಗಂಟೆಗೆ ಪಟ್ಟಣದ ವಿರಕ್ತ ಮಠ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಮೇಶ್‌ನಾಯಕ್ ತಿಳಿಸಿದರು.


ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಜುಲೈ ೧೭ ರಂದು ಸಭೆ ಏರ್ಪಡಿಸಿದ್ದು ತುಮಕೂರಿನಲ್ಲಿ ಉಪಮುಖ್ಯಮಂತ್ರಿಗಳ ಸಭೆ ಹಿನ್ನೆಲೆ ಜುಲೈ ೨೩ ಕ್ಕೆ ಮುಂದೂಡಲಾಗಿತ್ತು. ಜುಲೈ ೨೩ ರಂದು ತುಮಕೂರಿನಲ್ಲಿ ಪೊಲೀಸ್ ಅಧೀಕ್ಷಕರು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಸಭೆ ಕರೆದಿರುವ ಹಿನ್ನೆಲೆ ಎರಡನೇ ಬಾರಿಗೆ ತಾಲ್ಲೂಕು ಮಟ್ಟದ ಹಿತರಕ್ಷಣಾ ಸಭೆಯನ್ನು ಮುಂದೂಡಲಾಗುತ್ತಿದೆ ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಹಿತರಕ್ಷಣಾ ಸಭೆಯು ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕುಂದು ಕೊರತೆಗಳನ್ನು ಆಲಿಸುವ ಸಮಸ್ಯೆ ಪರಿಹರಿಸುವ ಸಭೆಯಾಗಿರುವುದರಿಂದ ಬಗರ್ ಹುಕುಂ, ಅಟ್ರಾಸಿಟಿ ಪ್ರಕರಣ, ಜಮೀನು ವಿವಾದ, ಅಂತರ್ಜಾತಿ ವಿವಾಹ ಸೇರಿದಂತೆ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಕುಂದುಕೊರತೆ ಅರ್ಜಿ ಸಲ್ಲಿಸುವವರು ಜುಲೈ ೨೪ ರೊಳಗೆ ತಮ್ಮ ಅಹವಾಲನ್ನು ಕಚೇರಿಗೆ ಸಲ್ಲಿಸಬೇಕು ಎಂದರು.


ಜುಲೈ ೩೦ ರಂದು ನಡೆಯುವ ಸಭೆಯಲ್ಲಿ ತಹಶೀಲ್ದಾರ್ ಕುಂಇ ಅಹಮದ್, ಇಒ ಅನಂತರಾಜು, ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಪಂ ಪಿಡಿಒಗಳು ಉಪಸ್ಥಿತರಿರಲಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಬಾಂಧವರು ಸಭೆಯಲ್ಲಿ ಭಾಗವಹಿಸಿ ತಮ್ಮ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.