Home ಜಿಲ್ಲೆ ಮಳೆನೀರು ಉಳಿಸಿ, ಭವಿಷ್ಯಕ್ಕೆ ನೀರು ಸಂಗ್ರಹಿಸಿ: ಜಮಖಂಡಿ ನಗರಸಭೆಯಿಂದ ‘ಕ್ಯಾಚ್ ದಿ ರೈನ್’ ಅಭಿಯಾನ

ಮಳೆನೀರು ಉಳಿಸಿ, ಭವಿಷ್ಯಕ್ಕೆ ನೀರು ಸಂಗ್ರಹಿಸಿ: ಜಮಖಂಡಿ ನಗರಸಭೆಯಿಂದ ‘ಕ್ಯಾಚ್ ದಿ ರೈನ್’ ಅಭಿಯಾನ

ಜಮಖಂಡಿ | ಆ. 2:
ಜಮಖಂಡಿ ನಗರಸಭೆ ವತಿಯಿಂದ ಜಲ ಸಂಚಯ ಜನ ಭಾಗೀದಾರಿ (ಎSಎಃ) ಯೋಜನೆಯಡಿ ‘ಮಳೆನೀರನ್ನು ಉಳಿಸೋಣ – ಅಚಿಣಛಿh ಣhe ಖಚಿiಟಿ’ ಅಭಿಯಾನದ ಮೂಲಕ ಮಳೆನೀರು ಸಂರಕ್ಷಣೆ ಹಾಗೂ ಅಂತರ್ಜಲ ವೃದ್ಧಿ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಮಳೆ ಬಂದಾಗ ಹರಿದು ವ್ಯರ್ಥವಾಗುವ ನೀರನ್ನು ಸಾಧ್ಯವಾದಷ್ಟು ಸಂಗ್ರಹಿಸಿ ಸದ್ಬಳಕೆ ಮಾಡಿಕೊಳ್ಳಬೇಕು. ಮನೆಗಳ ಮೇಲ್ಛಾವಣಿಯಿಂದ ಹರಿಯುವ ಮಳೆನೀರನ್ನು ಪೈಪ್‍ಗಳ ಮೂಲಕ ಸಂಗ್ರಹಿಸಿ, ಫಿಲ್ಟರ್ ವ್ಯವಸ್ಥೆಯೊಂದಿಗೆ ಟ್ಯಾಂಕ್ ಅಥವಾ ರೀಚಾರ್ಜ್ ಪಿಟ್‍ಗಳಿಗೆ ಹರಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಬಹುದಾಗಿದೆ ಎಂದು ನಗರಸಭೆ ತಿಳಿಸಿದೆ.
‘ಮಳೆ ಬಿದ್ದಲ್ಲೇ ನೀರನ್ನು ಹಿಡಿಯೋಣ, ಮಳೆ ಬಿದ್ದಾಗಲೇ ನೀರನ್ನು ಸಂಗ್ರಹಿಸೋಣ’ ಎಂಬ ಸಂದೇಶದೊಂದಿಗೆ ಸಾರ್ವಜನಿಕರು ಮಳೆನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಅಭಿಯಾನದ ಮೂಲಕ ಪ್ರೇರೇಪಿಸಲಾಗುತ್ತಿದೆ.
ಮನೆ ಹಾಗೂ ಸಾರ್ವಜನಿಕ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹ ವ್ಯವಸ್ಥೆ ಅಳವಡಿಸುವುದು, ಬೋರ್‍ವೆಲ್‍ಗಳನ್ನು ರೀಚಾರ್ಜ್ ಮಾಡುವುದು, ಮಳೆನೀರು ಹರಿಯುವ ಪ್ರದೇಶಗಳನ್ನು ಸ್ವಚ್ಛವಾಗಿಡುವುದು, ಮರಗಳನ್ನು ನೆಟ್ಟು ಪರಿಸರವನ್ನು ಸಂರಕ್ಷಿಸುವುದು ಹಾಗೂ ಕೆರೆ-ಕೊಳಗಳನ್ನು ಸ್ವಚ್ಛವಾಗಿಟ್ಟು ಮಳೆನೀರು ಸಂಗ್ರಹವಾಗುವಂತೆ ನೋಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಲಾಯಿತು.
ನೀರಿನ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಲ್ಲದೆ ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಿದೆ. ಮಳೆನೀರನ್ನು ಸಮರ್ಪಕವಾಗಿ ಸಂಗ್ರಹಿಸಿದರೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ನೀರಿನ ಕೊರತೆಯನ್ನು ತಗ್ಗಿಸುವುದರ ಜೊತೆಗೆ ಅಂತರ್ಜಲ ಮಟ್ಟವನ್ನು ವೃದ್ಧಿಸಲು ಸಹಕಾರಿಯಾಗಲಿದೆ ಎಂಬ ಸಂದೇಶವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕುಸುಮಾ ಸೊಪ್ಪಡ್ಲ, ಎಸ್.ಐ. ಚೌಗಲಾ, ಕಿರಿಯ ಅಭಿಯಂತರರಾದ ವೈಶಾಲಿ ಹಿಪ್ಪರಗಿ, ರಘು ಕಡಕೋಳ ಹಾಗೂ ಶ್ರೀಕಾಂತ್ ಘಾಟಗೆ ಸೇರಿದಂತೆ ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.