Home Lead News ಶೂಟೌಟ್ ನ್ಯಾಯಾಂಗ ತನಿಖೆ

ಶೂಟೌಟ್ ನ್ಯಾಯಾಂಗ ತನಿಖೆ

೭ ದಿನದಲ್ಲಿ ತನಿಖೆ ಪೂರ್ಣಗೊಳಿಸಲು ಡಿಸಿ ಸೂಚನೆ: ನಿಲ್ಲದ ಪ್ರತಿಭಟನೆ, ನಡೆಯದ ಶವ ಪರೀಕ್ಷೆ

ಬೆಂಗಳೂರು, ಆ. ೧೬- ಚಾಮರಾಜನಗರದ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಮೂವರು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇವೆ. ಈ ಘಟನೆಯಲ್ಲಿ ಮೃತಪಟ್ಟವರಿಗೆ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.


ಕೊಡಗಿನ ಭಾಗಮಂಡಲಕ್ಕೆ ಇಂದು ಭೇಟಿ ನೀಡಿ ಕಾವೇರಿಯ ಉಗಮಸ್ಥಾನ ಹಾಗೂ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯದಲ್ಲಿ ಶೂಟೌಟ್ ಪ್ರಕರಣದ ಸಂಬಂಧ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದೇನೆ. ಈ ಘಟನೆಯಲ್ಲಿ ಮೃತಪಟ್ಟವರಿಗೆ ಪರಿಹಾರ ನೀಡಬೇಕೆಂಬ ಬೇಡಿಕೆ ಇದೆ. ಯಾವ ರೀತಿಯ ಪರಿಹಾರ ನೀಡಬೇಕು ಎಂಬುದನ್ನು ಪರಿಶೀಲಿಸಿ ತೀರ್ಮಾನ ಮಾಡುತ್ತೇವೆ ಎಂದರು.


ಶೂಟೌಟ್ ನಡೆದ ಸ್ಥಳದಲ್ಲಿ ಕೋವಿಗಳು ಪತ್ತೆಯಾಗಿವೆ. ಮೃತಪಟ್ಟವರು ಬೇಟೆಗಾರರು ಎಂದು ಹೇಳಲಾಗುತ್ತಿದೆ. ಎಲ್ಲದರ ಬಗ್ಗೆಯೂ ತನಿಖೆಗೆ ಆದೇಶಿಸಿದ್ದೇನೆ. ತನಿಖೆಯಲ್ಲಿ ಸತ್ಯಾಂಶ ಹೊರ ಬರಲಿದೆ ಎಂದರು.


ಮ್ಯಾಜಿಸ್ಟ್ರೇಟ್ ತನಿಖೆ: ೭ ದಿನದಲ್ಲಿ ವರದಿಗೆ ಸೂಚನೆ
ಸಾಖ್ಯ ಅರಣ್ಯ ವಲಯದಲ್ಲಿ ಅರಣ್ಯ ಸಿಬ್ಬಂದಿಯ ಗುಂಡಿಗೆ ಮೂವರು ಬಲಿಯಾದ ಘಟನೆಯ ಬಗ್ಗೆ ಚಾಮರಾಜನಗರ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ತನಿಖಾ ವರದಿ ಸಲ್ಲಿಸಲು ೭ ದಿನ ಕಾಲಾವಕಾಶ ನೀಡಿದ್ದಾರೆ.


ಈ ಬಗ್ಗೆ ಮಾಹಿತಿ ನೀಡಿರುವ ಕೊಳ್ಳೆಗಾಲ ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ ಅವರು ನಿಗದಿತ ಅವಧಿಯೊಳಗೆ ತನಿಖೆ ನಡೆಸಿ ವರದಿ ಸಲ್ಲಿಸಲಾಗುತ್ತದೆ. ಈಗಾಗಲೇ ತನಿಖೆ ಆರಂಭವಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಮಹಜರ್ ನಡೆಸಿದ್ದೇವೆ. ಗುಂಡೇಟಿಗೆ ಬಲಿಯಾದವರ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಂಪೂರ್ಣ ತನಿಖಾ ವರದಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.


ಪ್ರತಿಭಟನೆ: ಮರಣೋತ್ತರ ಪರೀಕ್ಷೆ ವಿಳಂಬ
ಅರಣ್ಯಾಧಿಕಾರಿಗಳ ಗುಂಡೇಟಿಗೆ ಬಲಿಯಾದ ಮೂವರ ಮರಣೋತ್ತರ ಪರೀಕ್ಷೆ ೩೦ ಗಂಟೆ ಕಳೆದರೂ ಇನ್ನು ಆಗಿಲ್ಲ. ಮೃತರ ಕುಟುಂಬಗಳಿಗೆ ಪರಿಹಾರ ನೀಡಬೇಕು, ಅವರ ಕುಟುಂಬದ ಒಬ್ಬರಿಗೆ ಸರ್ಕಾರಿ ಉದ್ಯೋಗ ಹಾಗೂ ಅರಣ್ಯಾಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಲಿಖಿತ ಭರವಸೆ ನೀಡುವ ತನಕ ಮರಣೋತ್ತರ ಪರೀಕ್ಷೆಗೆ ಒಪ್ಪಿಗೆ ನೀಡಿ ಸಹಿ ಮಾಡುವುದಿಲ್ಲ ಎಂದು ಕುಟುಂಬಸ್ಥರು ಪಟ್ಟು ಹಿಡಿದಿರುವುದರಿಂದ ಮರಣೋತ್ತರ ಪರೀಕ್ಷೆ ಇನ್ನೂ ನಡೆದಿಲ್ಲ.


ಮೃತಪಟ್ಟ ಕುಟುಂಬದವರು, ಸಂಬಂಧಿಕರು ಹಾಗೂ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ.


ಹನೂರು ಪೊಲೀಸ್ ಠಾಣೆ ಮುಂದೆ ನೂರಾರು ಸಂಖ್ಯೆಯಲ್ಲಿ ಸ್ಥಳೀಯರು ಗುಂಪುಗೂಡಿ ಶೂಟೌಟ್ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸಿ, ಆಕ್ರೋಶ ಹೊರ ಹಾಕಿದ್ದಾರೆ.


ಹನೂರು ಪೊಲೀಸ್ ಠಾಣೆ ಮುಂದೆ ಮಲೈಮಹದೇಶ್ವರ ಬೆಟ್ಟ ರಸ್ತೆ ಹಾದು ಹೋಗಿದ್ದು, ರಸ್ತೆಯ ಒಂದು ಬದಿಯಲ್ಲಿ ಪೊಲೀಸರು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಈ ವೇಳೆ ಕೆಲವರು ರಸ್ತೆ ತಡೆಯಲು ಮುಂದಾದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಜಟಾಪಟಿ, ಮಾತಿನ ಚಕಮಕಿ ನಡೆಯಿತು.


ಈ ಸಂದರ್ಭದಲ್ಲಿ ಪೊಲೀಸರ ಮೇಲೆ ಮುಗಿ ಬಿದ್ದ ಮೂವರನ್ನು ವಶಕ್ಕೆ ಪಡೆಯಲಾಗಿದೆ.


ಹನೂರು ಪಟ್ಟಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ.


ದಕ್ಷಿಣ ವಲಯ ಐಜಿಪಿ ಡಾ. ಬೋರಲಿಂಗಯ್ಯನವರು ಹನೂರಿನಲ್ಲಿ ನಿನ್ನೆಯಿಂದಲೇ ಮೊಕ್ಕಾಂ ಹೂಡಿದ್ದಾರೆ. ಅವರು ಇಂದು ಹನೂರಿನ ಪ್ರವಾಸಿ ಮಂದಿರದಲ್ಲಿ ತನಿಖಾಧಿಕಾರಿಯಾದ ಉಪವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ಚಾಮರಾಜನಗರ ಎಸ್ಪಿ ಮುತ್ತುರಾಜ್, ಮೈಸೂರು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿಯವರೊಂದಿಗೆ ಸಭೆ ನಡೆಸಿ ಘಟನೆಯ ಬಗ್ಗೆ ವಿವರ ಸಂಗ್ರಹಿಸಿದ್ದಾರೆ.