Home Lead News ಅಭಿವೃದ್ಧಿ ನೀಲ ನಕ್ಷೆ ಬಿಡುಗಡೆ

ಅಭಿವೃದ್ಧಿ ನೀಲ ನಕ್ಷೆ ಬಿಡುಗಡೆ

೮೦ನೇ ಸ್ವಾತಂತ್ರ್ಯೋತ್ಸವ
ಬೆಂಗಳೂರು, ಆ. ೧೫-
ರಾಜ್ಯದ ಮುಖ್ಯಮಂತ್ರಿಯಾಗಿ ಸಾಕ್ಷಿಗುಡ್ಡೆಯನ್ನು ಬಿಟ್ಟು ಹೋಗುತ್ತೇನೆ ಎಂದು ಹೇಳಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ದೂರದೃಷ್ಠಿಯ ನೀಲನಕ್ಷೆಯನ್ನು ಬಿಡುಗಡೆ ಮಾಡಿ ನಾಡಿನ ಪ್ರಗತಿಗಾಗಿ ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.


ನಾಡಿನ ಸಮಗ್ರ ಅಭಿವೃದ್ಧಿಗಾಗಿ ಎ.ಐ. ಅಕ್ಷರ ಅಭಿಯಾನ ಮತ್ತು ಕೋಡಿಂಗ್ ಗುರುಕುಲ, ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ ಯೋಜನೆ, ಯುವ ಉದ್ಯೋಗ ಸೇತು ಯೋಜನೆ, ಉದ್ಯೋಗ ನಿಧಿ ಯೋಜನೆ, ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ, ರೈತ ಮಿತ್ರ, ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಸಹಾಯಹಸ್ತ ಯೋಜನೆ ಹೀಗೆ ಹಲವು ಹೊಸ ಯೋಜನೆಗಳನ್ನು ಜಾರಿ ಮಾಡುವುದಾಗಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ.


ಬೆಂಗಳೂರಿನ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಪೆರೇಡ್ ಮೈದಾನದಲ್ಲಿಂದು ೮೦ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಶುಭಾಶಯ ಕೋರಿ ಮಾತನಾಡಿದ ಅವರು ಜ್ಞಾನ, ವಿಜ್ಞಾನ, ತಂತ್ರಜ್ಞಾನ ಮತ್ತು ಕೃಷಿ ಕ್ಷೇತ್ರದಲ್ಲಿ ರಾಜ್ಯವನ್ನು ಮಾದರಿಯಾಗಿಸುವ ದೃಷ್ಠಿಯಿಂದ ಹಲವು ಕ್ರಾಂತಿಕಾರಿ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.


ಹೊಸ ಯೋಜನೆಗಳ ಘೋಷಣೆಯ ಜತೆಗೆ ೫ ಗ್ಯಾರಂಟಿ ಯೋಜನೆಗಳ ಪ್ರಗತಿ ಹಾಗೂ ಮುಂದಿನ ದೂರದೃಷ್ಠಿಯ ನೀಲನಕ್ಷೆಯನ್ನು ಬಿಡುಗಡೆ ಮಾಡಿದರು.
ಹೊಸ ಯೋಜನೆಗಳ ವಿವರ


ಎ.ಐ. ಅಕ್ಷರ ಅಭಿಯಾನ
ರಾಜ್ಯದ ಎಲ್ಲಾ ಶಾಲೆಗಳಲ್ಲಿ ೬ನೇ ತರಗತಿಯಿಂದಲೇ ಎ.ಐ. ಶಿಕ್ಷಣ ಪರಿಚಯಿಸುವ ಎ.ಐ. ಅಕ್ಷರ ಅಭಿಯಾನ ಮತ್ತು ಕೋಡಿಂಗ್ ಗುರುಕುಲ ಯೋಜನೆಯನ್ನು ಪ್ರಕಟಿಸಿ, ಉಚಿತ ಕೋಡಿಂಗ್ ಗುರುಕುಲ ವಿಶೇಷ ತರಗತಿಗಳನ್ನು ಆರಂಭಿಸಲಾಗುವುದು. ಪ್ರತಿ ವಿದ್ಯಾರ್ಥಿಗೂ ಎ.ಐ. ಕೋಡಿಂಗ್ ಕೌಶಲ್ಯ ಕಲಿಸಲು ಅವಕಾಶ ನೀಡಲಾಗುವುದು. ದೇಶದ ಪ್ರಪ್ರಥಮ ಸರ್ಕಾರಿ ಸ್ವಾಮ್ಯದ ಎ.ಐ. ವಿಶ್ವವಿದ್ಯಾನಿಲಯವನ್ನು ಬೆಂಗಳೂರಿನಲ್ಲಿ ಸ್ಥಾಪಿಸಲಾಗುವುದು. ಜನವರಿ ೨೦೨೭ರ ವರೆಗೆ ಎ.ಐ. ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಪ್ರಾರಂಭಿಸಲಾಗುವುದು. ಇದರ ಜತೆಗೆ ರಾಜ್ಯದ ವಿವಿಧೆಡೆ ಎಐ ಹಬ್‌ಗಳನ್ನು ಸ್ಥಾಪಿಸಲಾಗುವುದು ಎಂದು ಹೇಳಿದರು.


ಉದ್ಯೋಗ ಸಂಕಲ್ಪ


ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ ಯೋಜನೆಯನ್ನು ಆರಂಭಿಸುವುದಾಗಿ ಘೋಷಿಸಿದ ಅವರು, ಉದ್ಯೋಗ ಆಕಾಂಕ್ಷಿ ಯುವ ಸಮೂಹದ ನೆಮ್ಮದಿಯ ನಾಳಿಗಳಿಗಾಗಿ ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ ಯೋಜನೆ ಆರಂಭಿಸುತ್ತಿದ್ದೇನೆ. ಈ ಯೋಜನೆಯಡಿ ಸರ್ಕಾರಿ ವಲಯದ ಖಾಲಿ ಹುದ್ದೆಗಳನ್ನು ತುಂಬುವುದು ನಮ್ಮ ಮೊದಲ ಆದ್ಯತೆ. ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಪೈಕಿ ಪ್ರಮುಖ ೭೨ ಸಾವಿರ ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ೬ ತಿಂಗಳಲ್ಲಿ ಎಲ್ಲಾ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಗಳನ್ನು ಹೊರಡಿಸುತ್ತೇವೆ ಎಂದರು.


ಯುವ ಉದ್ಯೋಗ ಸೇತು


ಯುವ ಜನರಿಗಾಗಿ “ಯುವ ಉದ್ಯೋಗ ಸೇತು” ಎಂಬ ಹೊಸ ಯೋಜನೆಯನ್ನು ಆರಂಭಿಸಲಾಗುತ್ತಿದ್ದು, ಈ ಯೋಜನೆಯಡಿ ಖಾಸಗಿ ವಲಯದಲ್ಲಿರುವ ಉದ್ಯೋಗದ ಅವಕಾಶಗಳನ್ನು ಯುವ ಜನರಿಗೆ ತಲುಪಿಸಲು ಸಮಗ್ರ ತಂತ್ರಾಂಶ ರೂಪಿಸಲಾಗುವುದು. ಈ ತಂತ್ರಾಂಶ ಉದ್ಯೋಗ ಹುಡುಕುವವರು, ಉದ್ಯೋಗ ನೀಡುವವರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರಲಿದೆ ಎಂದರು.


೧೦೦ ಸರ್ಕಾರಿ ಐಟಿಐಗಳನ್ನು ಉದ್ಯೋಗಾಧಾರಿತ ಕ್ಯಾಂಪಸ್‌ಗಳಾಗಿ ಬದಲಿಸಲಾಗುವುದು. ಖಾಸಗಿ ಕೈಗಾರಿಕೆಗಳ ಸಹಯೋಗದಲ್ಲಿ ೧೦ ಸಾವಿರ ಯುವಕರಿಗೆ ಉದ್ಯೋಗದ ಅವಕಾಶ ಕಲ್ಪಿಸಲಾಗುವುದು ಎಂದರು.


ಉದ್ಯೋಗ ನಿಧಿ


ರಾಜ್ಯದ ಅತ್ಯಂತ ಹಿಂದುಳಿದ ೧೦ ಜಿಲ್ಲೆಗಳಲ್ಲಿ ಹೊಸ ಉದ್ಯೋಗ ಸೃಷ್ಠಿಸುವ ಉದ್ಯಮಿಗಳಿಗೆ ಸರ್ಕಾರ ಪ್ರೋತ್ಸಾಹ ಧನ ನೀಡುವ ಉದ್ಯೋಗ ನಿಧಿ ಯೋಜನೆಯನ್ನು ಆರಂಭಿಸಲಾಗುವುದು. ಪ್ರತಿ ಹೊಸ ಉದ್ಯೋಗಕ್ಕೆ ಪ್ರತಿ ತಿಂಗಳು ಸರ್ಕಾರವೇ ತಲಾ ೨೫೦೦ ರೂಪಾಯಿ ಪ್ರೋತ್ಸಾಹ ಧನ ನೀಡಲಿದೆ. ಈ ಸೌಲಭ್ಯ ಮುಂದಿನ ೨ ವರ್ಷಗಳ ಕಾಲ ಜಾರಿಯಲ್ಲಿರುತ್ತದೆ. ಇದರಿಂದ ೧ ಲಕ್ಷ ಹೊಸ ಉದ್ಯೋಗಗಳು ಸೃಷ್ಠಿಯಾಗಲಿವೆ ಎಂದರು.


ಮುಖ್ಯಮಂತ್ರಿ ರೈತ ಚೈತನ್ಯ ಯೋಜನೆ


ರೈತರ ಕೃಷಿಗೆ ತಂತ್ರಜ್ಞಾನದ ನೆರವು ಒದಗಿಸುವ ಮುಖ್ಯಮಂತ್ರಿ “ರೈತ ಚೈತನ್ಯ” ಯೋಜನೆಯನ್ನು ಘೋಷಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ರೈತರ ಅನುಭವಕ್ಕೆ ಆಧುನಿಕ ತಂತ್ರಜ್ಞಾನದ ಶಕ್ತಿಯನ್ನು ಬೆರೆಸಲು ಈ ಯೋಜನೆ ನೆರವಾಗಲಿದೆ. ಡ್ರೋಣ್ ಮತ್ತು ಉಪಗ್ರಹ ಚಿತ್ರಗಳ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗುವುದು ಎಂದರು.


ನೈಜ ಸಮಯದ ಮಾಹಿತಿ ಆಧಾರದ ಮೇಲೆ ರೈತರಿಗೆ ಬೆಳೆ ಕೀಟ ಮತ್ತು ರೋಗಬಾಧೆ ಹಾಗೂ ಮಾರುಕಟ್ಟೆಯ ನಿಖರ ಮಾಹಿತಿಯನ್ನು ಈ ಯೋಜನೆಯಡಿ ನೀಡಲಾಗುವುದು. ಜತೆಗೆ ಈ ಮಾಹಿತಿಯನ್ನು ಕೃಷಿ ಮಾರುಕಟ್ಟೆಯ ಡಿಜಿಟಲ್ ವ್ಯವಸ್ಥೆಯೊಂದಿಗೆ ಜೋಡಿಸಲಾಗುವುದು ಎಂದು ಹೇಳಿದರು.


ರೈತ ಮಿತ್ರ


ರೈತರಿಗೆ ಕೃಷಿ ಯಂತ್ರಗಳನ್ನು ಬಾಡಿಗೆ ಪಡೆಯುವ ಅವಕಾಶ ನೀಡುವ ರೈತ ಮಿತ್ರ ಯೋಜನೆ ಜಾರಿ ಘೋಷಣೆ ಮಾಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಈ ಯೋಜನೆಯಡಿ ಟ್ರ್ಯಾಕ್ಟರ್, ರೋಟವೇಟರ್, ಟಿಲ್ಲರ್ ಮತ್ತು ಸೀಡ್ ಡ್ರಿಲ್ ಬಾಡಿಗೆಗೆ ಪಡೆಯಬಹುದು. ಮೂರು ಎಕರೆ ಅಥವಾ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ರೈತರಿಗೆ ಬಾಡಿಗೆ ಶುಲ್ಕದ ಮೇಲೆ ಶೇ. ೫೦ ರಷ್ಟು ಸಬ್ಸಿಡಿ ನೀಡಲಾಗುವುದು ಎಂದರು.
ಈ ಯೋಜನೆಯ ಮೂಲಕ ಕೃಷಿ ಯಂತ್ರಗಳು ಸಣ್ಣ ರೈತರಿಗೂ ಕೈಗೆಟಕುವಂತೆ ಮಾಡುವುದಾಗಿ ಹೇಳಿದರು.


ವಿದ್ಯಾರ್ಥಿ ಸಹಾಯಾಸ್ತ


೧ ರಿಂದ ೧೦ನೇ ತರಗತಿವರೆಗೆ ಗ್ರಾಮೀಣ ಸರ್ಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಈಗಿರುವ ಶೇ. ೧೫ ಗ್ರಾಮೀಣ ಮೀಸಲಾತಿಯೊಳಗೆ ಶೇ. ೭.೫ ಮೀಸಲಾತಿಯನ್ನು ನೀಡಲಾಗುವುದು ಎಂದರು.

ಮೇಕೆದಾಟು ಯೋಜನೆ ಘೋಷಣೆ


ನಾಡಿನ ಪ್ರಗತಿ ಹಲವು ಹೊಸ ಯೋಜನೆಗಳನ್ನು ಘೋಷಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮೇಕೆದಾಟು ಯೋಜನೆ ಆರಂಭಿಸುವ ಘೋಷಣೆ ಮಾಡಿದ್ದು, ರಾಜ್ಯದ ೧೧೨ ಪ್ರಮುಖ ನೀರಾವರಿ ಯೋಜನೆಗಳಿಗೆ ೧೬ ಸಾವಿರ ಕೋಟಿ ರೂಪಾಯಿ ಒದಗಿಸುವುದಾಗಿ ಪ್ರಕಟಿಸಿದ್ದಾರೆ.


ಬೆಂಗಳೂರಿನಲ್ಲಿ ರೌಡಿ ನಿಗ್ರಹ ಪಡೆ ರಚನೆ ಜತೆಗೆ ೫ ಹೊಸ ಪೊಲೀಸ್ ಆಯುಕ್ತಾಲಯಗಳ ರಚನೆಯ ಘೋಷಣೆಯನ್ನು ಮಾಡಿದ್ದಾರೆ.


ರಾಜ್ಯದ ಪ್ರತಿಯೊಂದು ಪಟ್ಟಣ ಮತ್ತು ನಗರದಲ್ಲಿ ರಿಂಗ್ ರಸ್ತೆ ಹಾಗೂ ಮೊಬಿಲಿಟಿ ಗ್ರಿಡ್ ಅಭಿವೃದ್ಧಿ, ಬೆಂಗಳೂರು ಬಿಸಿನೆಸ್ ಕಾರಿಡಾರ್ ರಿಂಗ್ ರಸ್ತೆ ಚಾಲನೆ ನೀಡುವ ಜತೆಗೆ ಬಿಹ್ಯಾಂಡ್ ಬೆಂಗಳೂರು ಅಡಿಯಲ್ಲಿ ೫ ಜಾಗತಿಕ ತಂತ್ರಜ್ಞಾನಗಳ ಸ್ಥಾಪನೆ ಘೋಷಣೆ ಮಾಡಿದ್ದು, ದೊಡ್ಡಬಳ್ಳಾಪುರದಲ್ಲಿ ಅಡ್ವಾನ್ಸ್ಡ್ ಫ್ಯಾನಿಫ್ಯಾಕ್ಚರ್ ಕ್ಲಸ್ಟರ್ ಸ್ಥಾಪನೆ, ೨೦ ಸಾವಿರ ಕೋಟಿ ಹೂಡಿಕೆ ಹಾಗೂ ಸುಮಾರು ೧ ಲಕ್ಷ ಉದ್ಯೋಗ ಸೃಷ್ಠಿ ಗುರಿಯನ್ನು ಮುಖ್ಯಮಂತ್ರಿಗಳು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.


ಸಾರ್ವಜನಿಕರಿಗೆ ಕೈಗೆಟಕುವ ದರದಲ್ಲಿ ವಾಹನ ವಿಮೆ ಒದಗಿಸಲು ಕರ್ನಾಟಕ ರಾಜ್ಯ ಮೋಟಾರು ವಾಹನ ವಿಮಾ ಸಂಸ್ಥೆ ಸ್ಥಾಪಿಸುವುದಾಗಿಯೂ ಅವರು ಹೇಳಿದರು.