
ಕಲಬುರಗಿ,ಆ.18-ಮಹಾನಗರ ಪಾಲಿಕೆಯ 15ನೇ ಹಣಕಾಸು ಯೋಜನೆಯಡಿ ಪೂರ್ಣಗೊಂಡ ಕಾಮಗಾರಿಗಳ ಬಾಕಿ ಬಿಲ್ಗಳನ್ನು ಪಾವತಿಸುವಂತೆ ಒತ್ತಾಯಿಸಿ ಮಹಾನಗರ ಪಾಲಿಕೆ ಗುತ್ತಿಗೆದಾರರ ಅಭಿವೃದ್ಧಿ ಪರ ಕಲ್ಯಾಣ ಸಂಘದ ಮುಖಂಡರು ಸೋಮವಾರ ಮಹಾನಗರ ಪಾಲಿಕೆ ಕಚೇರಿ ಮುಂದೆ ಧರಣಿ ನಡೆಸಿದರು.
15ನೇ ಹಣಕಾಸು ಯೋಜನೆಯಡಿ 2024-25ರ 2ನೇ ಕಂತಿನ ಮತ್ತು 2025-26ರ ಮೊದಲ ಕಂತಿನ ಪೂರ್ಣಗೊಂಡ ಕಾಮಗಾರಿಗಳ ಬಿಲ್ಗಳನ್ನು ಒಂದು ವರ್ಷ ಕಳೆದರೂ ಪಾವತಿಸಲಾಗಿಲ್ಲ. ಸಣ್ಣ ಗುತ್ತಿಗೆದಾರರು ಸಾಲ ಪಡೆದು ಕೆಲಸ ಮಾಡಿದ್ದಾರೆ. ಸಾಲಗಾರರ ಕಿರುಕುಳ ಹೆಚ್ಚಿರುವುದರಿಂದ ಬಾಕಿ ಬಿಲ್ಗಳನ್ನು ಬೇಗ ಪಾವತಿಸಬೇಕೆಂದು ಒತ್ತಾಯಿಸಿದರು.
15ನೇ ಹಣಕಾಸು ಅನುದಾನದಲ್ಲಿ ಹಣವಿಲ್ಲದಿದ್ದರೆ, ಬೇರೆ ಯಾವುದಾದರೂ ಅನುದಾನದಲ್ಲಿ ಲಭ್ಯವಿರುವ ಹಣವನ್ನು ಸರಿಹೊಂದಿಸಿ ಬಿಲ್ಗಳನ್ನು ಪಾವತಿಸಬೇಕು. ನಮ್ಮ ಬಿಲ್ಗಳನ್ನು ಪಾವತಿಸದಿದ್ದರೆ, ಉಳಿದಿರುವ ಏಕೈಕ ಆಯ್ಕೆ ಆತ್ಮಹತ್ಯೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.
ಹಣ ವಿಳಂಬವಾದರೆ, ಕಾಮಗಾರಿಗಳಿಗೆ ಟೆಂಡರ್ಗಳನ್ನು ಏಕೆ ಕರೆಯಬೇಕು ?. ಹಣ ಬಂದ ನಂತರ ಟೆಂಡರ್ಗಳನ್ನು ಕರೆಯಬೇಕು ಮತ್ತು ಕೆಲಸವನ್ನು ಪ್ರಾರಂಭಿಸಬೇಕು. ಕೇವಲ ಟೆಂಡರ್ಗಳನ್ನು ಕರೆದು ಎಫ್ಎಸ್ಡಿ ಮತ್ತು ಕಡಿಮೆ ಡಿ.ಡಿ. ಮಾಡುವ ಮೂಲಕ ಗುತ್ತಿಗೆದಾರರನ್ನು ಏಕೆ ತೊಂದರೆಗೊಳಿಸಬೇಕು ? ಒಂದು ವಾರದೊಳಗೆ ಗುತ್ತಿಗೆದಾರರ ಬಾಕಿ ಬಿಲ್ ಪಾವತಿ ಮಾಡದಿದ್ದರೆ ಮತ್ತೆ ಪಾಲಿಕೆ ಎದುರು ಧರಣಿ ನಡೆಸಿ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಬೀಗ ಜಡಿಯುವುದಾಗಿ ಎಚ್ಚರಿಸಿದರು.
ಜಗನ್ನಾಥ ಶೇಗಜಿ, ಮೊಹಸಿನ್ ಪಟೇಲ್ ಎಂಎಪಿ ಗಿರೆಪ್ಪ ಕಟ್ಟಿಮನಿ, ಎಂ.ಕೆ. ಪಾಟೀಲ, ದಶರಥ ಚೌಗಲೆ, ಬಸವರಾಜ ಪಾಟೀಲ, ಮನೋಜ ಜಾಧವ, ಸರಮುದ್ದೀನ್ ಕೆ.ಎಸ್. ಮಹಮ್ಮದ್ ಆಸಿಫ್ ಹುಸೇನ್, ರಾಮಸಿಂಗ್ ಠಾಕೂರ್, ನರಸಪ್ಪ ಬಾರಾಳೆ, ಗುರುಪ್ಪ ಸಾಳಂಕೆ, ಸಾಯಿಬಣ್ಣ ಯಾದಗಿರಿ, ಗಣೇಶ ಮಲ್ಲಿಕಾರ್ಜುನ, ಹರಿಲಾಲ ಚವ್ಹಾಣ, ನಿಹಾಲ್, ಮಹಮ್ಮದ್ ಖಾಸಿಂ ಬಾಬಾ, ಅವಿನಾಶ ಭಾಸ್ಕರ್, ಅನಿಲ ಪರ್ಸಾದ್ ಪಾಂಡೆ, ನಿಸಾರ್ ಪಟೇಲ್, ದೇವರಾಜ್ ಪೂಜಾರಿ, ರಫೀಕ್, ಇತರರು ಇದ್ದರು.































