Home ಕ್ರೈಂ ಸುದ್ದಿಗಳು ಗುಂಡಿಕ್ಕಿ ರೌಡಿ ಶೀಟರ್ ಬಂಧನ

ಗುಂಡಿಕ್ಕಿ ರೌಡಿ ಶೀಟರ್ ಬಂಧನ

ಬೆಂಗಳೂರು,ಜೂ.೧೧-ದರೋಡೆ,ಕೊಲೆಯತ್ನ,ಬೆದರಿಕೆ,ಸುಲಿಗೆ ಸೇರಿ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿ ಜೀವನಿಗೆ ಹೆಬ್ಬಗೋಡಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.


ಕಾಲಿಗೆ ಪೊಲೀಸರ ಗುಂಡೇಟು ತಗುಲಿ ಗಾಯಗೊಂಡಿರುವ ರೌಡಿ ಜೀವ (೧೯)ನನ್ನು ಬಂಧಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಳೆದ ವಾರ ಹೆಬ್ಬಗೋಡಿ ಹಾಗೂ ಎಲೆಕ್ಟ್ರಾನಿಕ್ ಸಿಟಿ ಭಾಗದಲ್ಲಿ ದರೋಡೆ ಮಾಡಿದ್ದ ಪರಾರಿಯಾಗಿದ್ದ ರೌಡಿ ಜೀವನ ಪತ್ತೆಗೆ ಹೆಬ್ಬಗೋಡಿ ಪೊಲೀಸರು ವಿಶೇಷ ತಂಡ ರಚಿಸಿಕೊಂಡು ಶೋಧ ನಡೆಸಿದ್ದರು.


ರೌಡಿ ಜೀವ ಇಂದು ನಸುಕಿನಲ್ಲಿ ಸಿಂಗೇನಾ ಅಗ್ರಹಾರದ ತೋಪಿನಲ್ಲಿ ಅಡಗಿರುವ ಖಚಿತವಾದ ಮಾಹಿತಿ ಕಲೆಹಾಕಿ ಕಾರ್ಯಾಚರಣೆಯನ್ನು ಹೆಬ್ಬಗೋಡಿ ಪೊಲೀಸರು ಕೈಗೊಂಡಿದ್ದಾರೆ.


ಪೊಲೀಸ್ ವಾಹನವನ್ನು ಕಂಡ ರೌಡಿ ಜೀವ ಓಡಿ ಹೋದಾಗ ಬೆನ್ನಟ್ಟಿ ಪೊಲೀಸ್ ಸಿಬ್ಬಂದಿ ನಾಗೇಶ್ ಹೋದಾಗ ಅವರ ಮೇಲೆ ಮಾರಕಾಸ್ತ್ರಗಳಿಂದ ದಾಳಿಗೆ ಮುಂದಾಗಿದ್ದಾನೆ.
ಮಾರಕಾಸ್ತ್ರ ಬಿಟ್ಟು ಶರಣಾಗುವಂತೆ ಸೂಚನೆ ನೀಡಿದರೂ ಮತ್ತೆ ಹಲ್ಲೆಗೆ ಮುಂದಾಗಿ ಪರಾರಿಯಾಗಲು ಯತ್ನಿಸಿದಾಗ ಸಬ್ ಇನ್‌ಸ್ಪೆಕ್ಟರ್ ಅಯ್ಯಪ್ಪ ಅವರು ಆತ್ಮರಕ್ಷಣೆಗೆ ಹಾರಿಸಿದ ಗುಂಡು ಕಾಲಿಗೆ ತಗುಲಿ ಜೀವ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾನೆ.


ಕೂಡಲೇ ಆತನನ್ನು ಬಂಧಿಸಿರುವ ಹೆಬ್ಬಗೋಡಿ ಪೊಲೀಸರು ಆತನನ್ನು ಹಾಗೂ ಪೊಲೀಸ್ ಸಿಬ್ಬಂದಿ ನಾಗೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಬ್ಬಗೋಡಿ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ರೌಡಿ ಜೀವ ತಿರುಪಾಳ್ಯದಲ್ಲಿ ವಾಸವಾಗಿದ್ದು,ಕೊಲೆ, ಸುಲಿಗೆ, ದರೋಡೆ ಸೇರಿ ಹಲವು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದ್ದನು. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.