
ಮೆಕ್ಸಿಕೊ- ದ. ಆಫ್ರಿಕಾ ಸೆಣಸಾಟ
ವಾಷಿಂಗ್ಟನ್, ಜೂ.೧೧-ಫುಟ್ಬಾಲ್ ಪ್ರೇಮಿಗಳು ಕಾತುರದಿಂದ ಕಾಯುತ್ತಿರುವ ಫಿಫಾ ವಿಶ್ವಕಪ್ ಫುಟ್‌ಬಾಲ್ ಭಾರತೀಯ ಕಾಲಮಾನ ರಾತ್ರಿ ೧೨.೩೦ಕ್ಕೆ ಆರಂಭವಾಗುತ್ತಿದೆ. ಇದೇ ಮೊದಲ ಬಾರಿಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳು ಜಂಟಿಯಾಗಿ ಈ ಮಹಾಸಮರವನ್ನು ಆಯೋಜಿಸುತ್ತಿದ್ದು, ಒಟ್ಟು ೪೮ ತಂಡಗಳು ಕಣಕ್ಕಿಳಿಯುತ್ತಿವೆ. ೩೯ ದಿನಗಳ ಕಾಲ ನಡೆಯಲಿರುವ ಜಾಗತಿಕ ಕಾಲ್ಚೆಂಡಿನ ಮೇಳ ಯುರೋಪಿಯನ್ ದೇಶಗಳು ಮಾತ್ರವಲದ್ದೆ, ಜಗತ್ತಿನ ಬಹುತೇಕ ರಾಷ್ಟ್ರಗಳ ಗಮನ ಸೆಳೆಯುತ್ತಿದೆ.
ಉದ್ಘಾಟನಾ ಪಂದ್ಯದಲ್ಲಿ ಮೆಕ್ಸಿಕೊ -ದಕ್ಷಿಣ ಆಫ್ರಿಕಾ ಸೆಣಸು
ಸಹ ಆತಿಥೇಯ ತಂಡ ಮೆಕ್ಸಿಕೊ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಎದುರಾಗುತ್ತಿವೆ. ಇದರೊಂದಿಗೆ ಬಹು ನಿರೀಕ್ಷಿತ ೨೦೨೬ರ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ಗುರುವಾರ ಮಧ್ಯರಾತ್ರಿ ಚಾಲನೆ ದೊರೆಯಲಿದೆ.
ಸುಮಾರು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುವ ಜಾಗತಿಕ ಕಾಲ್ಚೆಂಡಿನ ಆಟದ ಜ್ವರ ಜಗತ್ತಿನಾದ್ಯಂತ ವ್ಯಾಪಿಸಿದೆ. ಅದರಲ್ಲೂ ಯುರೋಪಿಯನ್ ದೇಶಗಳಲ್ಲಿ ತುಸು ಹೆಚ್ಚಾಗಿದೆ. ಭಾರತ ಹಿರಿಯರ ತಂಡ ಇದುವರೆಗೂ ಫಿಫಾ ವಿಶ್ವಕಪ್‌ಗೆ ಅರ್ಹತೆ ಹೊಂದಿಲ್ಲ. ಆದರೂ ಭಾರತದ ಬಹುತೇಕ ರಾಜ್ಯಗಳಲ್ಲಿ ಫುಟ್ಬಾಲ್ ಹಬ್ಬ ಆಚರಿಸಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
ಮೆಕ್ಸಿಕೊ ಮತ್ತು ದಕ್ಷಿಣ ಆಫ್ರಿಕಾ ಪಂದ್ಯ ಭಾರತೀಯ ಕಾಲಮಾನ ಮಧ್ಯರಾತ್ರಿ ನಡೆದರೆ, ಶುಕ್ರವಾರ ಬೆಳಗ್ಗಿನ ಜಾವ ನಡೆಯಲಿರುವ ‘ಎ’ ಗುಂಪಿನ ಮತ್ತೊಂದು ಪಂದ್ಯದಲ್ಲಿ ಕೊರಿಯಾ ರಿಪಬ್ಲಿಕ್ ಮತ್ತು ಜೆಕ್ ಗಣರಾಜ್ಯ ತಂಡಗಳು ಸೆಣಸಲಿವೆ. ದಕ್ಷಿಣ ಆಫ್ರಿಕಾ ಮತ್ತು ಮೆಕ್ಸಿಕೊ ನಡುವಿನ ಪಂದ್ಯವು ೨೦೧೦ರ ವಿಶ್ವಕಪ್‌ನ ಆರಂಭಿಕ ಪಂದ್ಯದ ಪುನರಾವರ್ತನೆಯಾಗಿದೆ. ೨೦೧೦ರ ವಿಶ್ವಕಪ್ ನಂತರ ದಕ್ಷಿಣ ಆಫ್ರಿಕಾ ಇದೇ ಮೊದಲ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿದೆ. ಈ ಮಧ್ಯೆ, ಮೆಕ್ಸಿಕೊ ೨೦೧೪ ಮತ್ತು ೨೦೧೮ ರಲ್ಲಿ ಕೊನೆಯದಾಗಿ ಅಂತಿಮ ೧೬ರ ಘಟ್ಟ ತಲುಪಿದ ಸಾಧನೆ ಮಾಡಿದೆ. ಆದರೆ ೨೦೨೨ರಲ್ಲಿಮೆಕ್ಸಿಕೊ ಗುಂಪು ಹಂತದಲ್ಲೇ ನಿರ್ಗಮಿಸಿತ್ತು.
ಎರಡೂ ತಂಡಗಳಿಗೆ ಖಾತೆ ತೆರೆಯುವ ವಿಶ್ವಾಸ
ದಿನದ ಎರಡನೇ ಪಂದ್ಯದಲ್ಲಿ ಎದುರಾಗುತ್ತಿರುವ ದಕ್ಷಿಣ ಕೊರಿಯಾ ಮತ್ತು ಜೆಕ್ ಗಣರಾಜ್ಯ ತಂಡಗಳು ಖಾತೆ ತೆರೆಯುವ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿವೆ. ದಕ್ಷಿಣ ಕೊರಿಯಾ ೧೨ನೇ ಸಲ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುತ್ತಿದೆ. ಇದು ಏಷ್ಯಾ ರಾಷ್ಟ್ರಗಳ ಪೈಕಿ ಅತ್ಯಧಿಕ. ಜತೆಗೆ ಸತತ ೧೧ನೇ ವರ್ಷ ಟೂರ್ನಿಯಲ್ಲಿಭಾಗವಹಿಸುತ್ತಿದೆ.ಆದಾಗ್ಯೂ ನಿರೀಕ್ಷಿತ ಪ್ರದರ್ಶನ ನೀಡಿಲ್ಲ. ಆಡಿದ ೩೮ ಪಂದ್ಯಗಳ ಪೈಕಿ ಕೇವಲ ೭ ರಲ್ಲಿ ಜಯ ಗಳಿಸಿದೆ. ೨೦೦೨ ರಲ್ಲಿ ಸಹ ಆತಿಥ್ಯವಹಿಸಿದ್ದಾಗ ಹೆಚ್ಚಿನ ಪಂದ್ಯಗಳನ್ನು ಗೆದ್ದಿದೆ. ಹಾಂಗ್ ಮ್ಯುಂಗ್ ಎರಡನೇ ಬಾರಿ ದಕ್ಷಿಣ ಕೊರಿಯಾ ತಂಡವನ್ನು ಮುನ್ನಡೆಸುತ್ತಿದ್ದಾರೆ. ೨೦೧೪ರಲ್ಲಿಬ್ರೆಜಿಲ್‌ನಲ್ಲಿ ನಡೆದ ಟೂರ್ನಿಯಲ್ಲಿ ಗುಂಪು ಹಂತದಲ್ಲೇ ಹೊರಬಿದ್ದಿದ್ದ ಕೊರಿಯಾ, ಈ ಬಾರಿ ಹಿಂದಿನ ಸಾಧನೆಯನ್ನು ಮೀರುವ ನಿರೀಕ್ಷೆಯಲ್ಲಿದೆ. ಹಾಂಗ್ ಸಾರಥ್ಯದ ತಂಡ ಎಎಫ್‌ಸಿ ಕ್ವಾಲಿಫೈಯರ್ಸ್‌ನಲ್ಲಿ ಅಜೇಯ ದಾಖಲೆ ಕಾಯ್ದುಕೊಂಡಿದೆ. ೧೧ ರಲ್ಲಿ ಗೆಲುವು ಮತ್ತು ೫ ರಲ್ಲಿ ಡ್ರಾ ಸಾಧಿಸಿರುವ ಕೊರಿಯಾ, ೪೦ ಗೋಲ್ ಗಳಿಸಿದೆ.
ಜೆಕ್ ಗಣರಾಜ್ಯ ಸಹ ಟೂರ್ನಿಯ ಫೇವರಿಟ್ ತಂಡಗಳಲ್ಲಿ ಒಂದಾಗಿದೆ. ಕಳೆದ ವರ್ಷ ಎಲ್ ಗುಂಪಿನಲ್ಲಿ ಕ್ರೊಯೇಷ್ಯಾ ತಂಡವನ್ನು ಹತ್ತಿಕ್ಕಿದ ಜೆಕ್ ಗಣರಾಜ್ಯ, ಅಚ್ಚರಿ ಫಲಿತಾಂಶ ನೀಡಬಲ್ಲ ಸಾಮರ್ಥ್ಯವನ್ನು ಹೊಂದಿದೆ. ೧೯೩೪ ಮತ್ತು ೧೯೬೨ರ ರನ್ನರ್ ಅಪ್ ಜೆಕ್ ಗಣರಾಜ್ಯ ಕೊರಿಯಾ ತಂಡಕ್ಕೆ ದೊಡ್ಡ ಸವಾಲೊಡ್ಡುವ ನಿರೀಕ್ಷೆಯಿದೆ.
ಮೆಸ್ಸಿ, ರೊನಾಲ್ಡೊ ಆಕರ್ಷಣೆ
ವಿಶ್ವದ ಅಗ್ರಮಾನ್ಯ ಫುಟ್ಬಾಲ್ ಆಟಗಾರರಾದ ಲಯೊನೆಲ್ ಮೆಸ್ಸಿ ಮತ್ತು ಕ್ರಿಸ್ಟಿಯಾನೊ ರೊನಾಲ್ಡೊ ಈ ಬಾರಿಯ ವಿಶ್ವಕಪ್ ನಲ್ಲೂ ಅತ್ಯಾಕರ್ಷಣೆಯಾಗಿದ್ದಾರೆ. ಕಳೆದ ವರ್ಷ ಕತಾರ್ ನಲ್ಲಿ ಅರ್ಜೆಂಟೀನಾ ತಂಡ ೩ನೇ ಬಾರಿ ಟ್ರೋಫಿ ಗೆಲ್ಲಲು ನೆರವಾದ ೩೮ ವರ್ಷದ ಮೆಸ್ಸಿ ಈ ಬಾರಿಯೂ ಅರ್ಜೆಂಟಿನಾಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡುವರೇ ಎಂಬ ಕುತೂಹಲ ಮನೆಮಾಡಿದೆ. ದಂತಕತೆ ಡಿಯಾಗೊ ಮರಡೋನಾ ನಂತರ ಈ ದೇಶಕ್ಕೆ ಸಿಕ್ಕಿರುವ ಅಪ್ರತಿಮ ತಾರೆ ಮೆಸ್ಸಿ ಅಂತಹ ಸಾಧನೆ ಮಾಡಬಲ್ಲ ಸಮರ್ಥರು. ಹೋದ ಸಲ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಫ್ರಾನ್ಸ್ ತಂಡದ ಕಠಿಣ ಸವಾಲನ್ನು ಮೀರಿ ನಿಲ್ಲುವಲ್ಲಿ ಮೆಸ್ಸಿ ಆಟವೇ ಪ್ರಮುಖವಾಗಿತ್ತು. ಆ ಪಂದ್ಯದ ನಂತರ ಅವರು ನಿವೃತ್ತಿಯಾಗಬಹುದೆಂಬ ಮಾತುಗಳೂ ಕೇಳಿಬಂದಿದ್ದವು. ಆದರೆ ತಮ್ಮ ಫಿಟ್‌ನೆಸ್ ಮತ್ತು ಕೌಶಲಗಳಿಗೆ ಮತ್ತಷ್ಟು ಸಾಣೆ ಹಿಡಿದಿರುವ ಅವರು ಹೊಸ ಕನಸಿನೊಂದಿಗೆ ಕಣಕ್ಕಿಳಿಯುತ್ತಿದ್ದಾರೆ.
ಮೆಸ್ಸಿಯಂತೆಯೇ ದಾಖಲೆಯ ಆರನೇ ಬಾರಿಗೆ ವಿಶ್ವಕಪ್ ನಲ್ಲಿ ಪಾಲ್ಗೊಲ್ಳುತ್ತಿದ್ದರೂ ಕ್ರಿಸ್ಟಿಯಾನೊ ರೊನಾಲ್ಡೊಗೆ ವಿಶ್ವಕಪ್ ಕಿರೀಟ ಮರಿಚಿಕೆಯಾಗಿದೆ. ರೊನಾಲ್ಡೊಗೆ ಇದು ಕೊನೆಯ ವಿಶ್ವಕಪ್ ಎಂದು ಹೇಳಲಾಗುತ್ತಿದೆ. ಹೀಗಾಗಿ ಈ ಬಾರಿಯಾದರೂ ಪ್ರಶಸ್ತಿ ನೀಗಿಸಬಲ್ಲರೇ ಎಂಬುದು ಕುತೂಹಲದ ಸಂಗತಿಯಾಗಿದೆ.
- ಫಿಫಾ ವಿಶ್ವಕಪ್ ನಲ್ಲಿ ಇದುವರೆಗೆ ಪ್ರಶಸ್ತಿ ಗೆದ್ದ ತಂಡಗಳು
ಬ್ರೆಜಿಲ್ (೧೯೫೮, ೧೯೬೨, ೧೯೭೦, ೧೯೯೪, ೨೦೦೨)
ಜರ್ಮನಿ (೧೯೫೪, ೧೯೭೪, ೧೯೯೦, ೨೦೧೪)
ಇಟಲಿ (೧೯೩೪, ೧೯೩೮, ೧೯೮೨, ೨೦೦೬)
ಅರ್ಜೆಟೀನಾ (೧೯೭೮, ೧೯೮೬, ೨೦೨೨)
ಫ್ರಾನ್ಸ್ (೧೯೯೮, ೨೦೧೮)
ಉರುಗ್ವೆ (೧೯೩೦, ೧೯೫೦)
ಇಂಗ್ಲೆಂಡ್ (೧೯೬೬)
ಸ್ಪೇನ್ (೨೦೧೦) - ಪ್ರಶಸ್ತಿ ಮೊತ್ತ
೪೧೬ ಕೋಟಿ ರೂ., ಚಾಂಪಿಯನ್ ಆಗುವ ತಂಡಕ್ಕೆ ಸಿಗುವ ಬಹುಮಾನ ಮೊತ್ತ
೨೭೫, ಕೋಟಿರೂ. ರನ್ನರ್ ಅಪ್ ಆಗುವ ತಂಡಕ್ಕೆ ದೊರೆಯುವ ಬಹುಮಾನ ಮೊತ್ತ
೧೬, ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ೨೩ನೇ ಆವೃತ್ತಿಗೆ ಒಟ್ಟು ೧೬ ತಾಣಗಳು ಆತಿಥ್ಯವಹಿಸಿವೆ.ಅಮೆರಿಕದ ೧೧ ಕ್ರೀಡಾಂಗಣಗಳು, ಮೆಕ್ಸಿಕೊದ ಮೂರು ಹಾಗೂ ಕೆನಡಾ ಎರಡು ತಾಣಗಳು ಪಂದ್ಯಗಳಿಗೆ ವೇದಿಕೆ ಕಲ್ಪಿಸಲಿವೆ.
- ವಿಶ್ವಕಪ್‌ನ ಪಂದ್ಯಗಳ ಸಮಯ ಮತ್ತು ನೇರಪ್ರಸಾರ
೨೦೨೬ರ ಫಿಫಾ ಪುರುಷರ ವಿಶ್ವಕಪ್ ಆವೃತ್ತಿಯು ಜೂನ್ ೧೧ರಿಂದ ಜುಲೈ ೧೯ರವರೆಗೆ (ಭಾರತೀಯ ಕಾಲಮಾನದಲ್ಲಿ ಜೂನ್ ೧೨ರಿಂದ ಜುಲೈ ೨೦) ಅಮೆರಿಕ, ಮೆಕ್ಸಿಕೊ ಮತ್ತು ಕೆನಾಡದ ೧೬ ಬೇರೆ ಬೇರೆ ಸ್ಥಳಗಳಲ್ಲಿ ನಡೆಯಲಿದೆ.
ಒಟ್ಟು ೪೮ ತಂಡಗಳು ಈ ವರ್ಷದ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದು. ಫೈನಲ್ ಸೇರಿ ಒಟ್ಟು ೧೦೪ ಪಂದ್ಯಗಳು ನಡೆಯಲಿವೆ. ಈ ಬಾರಿಯ ವಿಶ್ವಕಪ್, ಫಿಫಾ ಇತಿಹಾಸದಲ್ಲಿಯೇ ಅತೀ ದೊಡ್ಡ ಟೂರ್ನಿಯಾಗಿದೆ. ಈ ಬೃಹತ್ ಟೂರ್ನಮೆಂಟ್‌ನಲ್ಲಿ ೧,೦೦೦ಕ್ಕೂ ಅಧಿಕ ಆಟಗಾರರು ಭಾಗವಹಿಸಲಿದ್ದಾರೆ. ೨೦೨೬ರ ಫಿಫಾ ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಜೀ ಎಂಟರ್‌ಟೈನ್‌ಮೆಂಟ್‌ನ ಭಾಗವಾಗಿರುವ ಯುನೈಟ್ ೮ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರ ಪ್ರಸಾರದ ಮೂಲಕ ನೋಡಬಹುದು. - ಟೂರ್ನಿಯ ಪ್ರಮುಖ ಹಂತಗಳು
ಗುಂಪು ಹಂತ: ಜೂನ್ ೧೨ರಿಂದ ಜೂನ್ ೨೮ರವರೆಗೆ ನಡೆಯಲಿವೆ.
೩೨ರ ಸುತ್ತು: ಜೂನ್ ೨೯ ರಿಂದ ಜುಲೈ ೪ರವರೆಗೆ ನಡೆಯಲಿವೆ.
೧೬ರ ಸುತ್ತು: ಜುಲೈ ೫ ರಿಂದ ಜುಲೈ ೮ರವರೆಗೆ ನಡೆಯಲಿವೆ.
ಕ್ವಾರ್ಟರ್ ಫೈನಲ್ ಪಂದ್ಯಗಳು: ಜುಲೈ ೧೦ರಿಂದ ಜುಲೈ ೧೨ರವರೆಗೆ
ಸೆಮಿಫೈನಲ್ ಪಂದ್ಯಗಳು: ಜುಲೈ ೧೫ರಿಂದ ಜುಲೈ ೧೬ರವರೆಗೆ
ಮೂರನೇ ಸ್ಥಾನದ ಪಂದ್ಯ: ಜುಲೈ ೧೯ರಂದು ನಡೆಯಲಿದೆ.
ಫೈನಲ್ ಪಂದ್ಯ: ಜುಲೈ ೨೦ರಂದು ನಡೆಯಲಿದೆ.
ಫಿಫಾ ವಿಶ್ವಕಪ್ ೨೦೨೬ರಲ್ಲಿ ಒಟ್ಟು ೪೮ ತಂಡಗಳಿದ್ದು, ಒಟ್ಟು ೧೨ ಗುಂಪು
























