
ಹುಬ್ಬಳ್ಳಿ, ಜೂ,೧೧: ಕರ್ನಾಟಕದಲ್ಲಿ ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ಕವಿಪ್ರನಿನಿ ಅಧಿಕಾರಿಗಳ ಮತ್ತು ನೌಕರರ ಒಕ್ಕೂಟ (ಫೆಡರೇಶನ್) ವತಿಯಿಂದ ಬುಧವಾರ ವಿದ್ಯುತ್ ನಗರ ಶಾಖೆ ಹಾಗೂ ಗೋಪನಕೊಪ್ಪದಲ್ಲಿರುವ ಹೆಸ್ಕಾಂ ನಿಗಮ ಕಚೇರಿ ಎದುರು ದ್ವಾರ ಸಭೆ ಮತ್ತು ಸಾಂಕೇತಿಕ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರರು ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣಾ ಪರವಾನಿಗೆ ನೀಡಬಾರದು ಎಂದು ಆಗ್ರಹಿಸಿದರು. ಖಾಸಗೀಕರಣದಿಂದ ರೈತರು ಹಾಗೂ ಸಾಮಾನ್ಯ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಹೆಸ್ಕಾಂ ವ್ಯಾಪ್ತಿಯ ಬೆಳಗಾವಿ, ಧಾರವಾಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಖಾಸಗಿ ಕಂಪನಿಗಳಿಗೆ ವಿದ್ಯುತ್ ವಿತರಣೆಯ ಹಕ್ಕು ನೀಡುವ ಮನವಿಯನ್ನು ಕೆಇಆರ್‌ಸಿ ತಿರಸ್ಕರಿಸಬೇಕೆಂದು ಒತ್ತಾಯಿಸಿದರು. ವಿದ್ಯುತ್ ನಗರದಲ್ಲಿ ನಡೆದ ದ್ವಾರ ಸಭೆಯಲ್ಲಿ ಜೂನ್ ೨೦ರೊಳಗೆ ಪ್ರತಿಯೊಬ್ಬ ನೌಕರರು ಕೆಇಆರ್‌ಸಿಗೆ ತಮ್ಮ ಆಕ್ಷೇಪಣೆ ಸಲ್ಲಿಸುವಂತೆ ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಆಸೀಪ್ ಖಾನ್ ಎ. ಶಿವಳ್ಳಿ (ಸಂಘಟನಾ ಕಾರ್ಯದರ್ಶಿ), ಅಮೀನಭಾವಿ ಕೇಂದ್ರ ಸಮಿತಿ ಸದಸ್ಯ ಮೋಹನ್ ರಾಜ್, ಕಾರ್ಯನಿರ್ವಾಹಕ ಇಂಜಿನಿಯರ್ ರವೀಂದ್ರ ಬೇವಿನಮರ, ನಾಗಾ ನಾಯಕ್, ಇಂಜಿನಿಯರ್ ಅಸೋಸಿಯೇಷನ್ ಪದಾಧಿಕಾರಿಗಳಾದ ಶಶಿಕಾಂತ್ ಬಿಜಾಪುರ್ ಹಾಗೂ ರಾಮು ಕರಜಿಗಿ, ಇಂಜಿನಿಯರ್ ಅಸೋಸಿಯೇಷನ್ ಸಂಘಟನಾ ಕಾರ್ಯದರ್ಶಿ ಪ್ರಸಾದ ಘಾಟಿಕರ್, ಅಕೌಂಟ್ಸ್ ಅಧಿಕಾರಿ ಅಸೋಸಿಯೇಷನ್‌ನ ಅಡಿವೆಪ್ಪ ಮೆಣಸಿನಕಾಯಿ, ಎಂ.ಬಿ. ಕಲ್ಲಮ್ಮನವರ, ಇಂಜಿನಿಯರ್ ಅಸೋಸಿಯೇಷನ್ ಸಿಇಸಿ ಹನುಮಂತಗೌಡ ಪಾಟೀಲ್, ಸ್ಥಳೀಯ ಸಮಿತಿ ಅಧ್ಯಕ್ಷ ಉಸ್ಮಾನ್, ಖಜಾಂಚಿ ಡಿ.ಎಮ್. ಪಾನಿಬಂಡ್, ಸ್ಥಳೀಯ ಸಮಿತಿಯ ಸದಸ್ಯ ಎಸ್.ಎ. ಮಾನೆ, ಪ್ರಾಥಮಿಕ ಸಮಿತಿ ಅಧ್ಯಕ್ಷ ಶ್ರೀನಿವಾಸ್ ನಾಯ್ಡು ಹಾಗೂ ಡಿಪ್ಲೊಮಾ ಇಂಜಿನಿಯರ್‌ಗಳ ಸಂಘದ ಉಪಾಧ್ಯಕ್ಷ ಮಂಜುನಾಥ ದೊಡ್ಡಮನಿ ಸೇರಿದಂತೆ ವಿವಿಧ ಸಂಘಗಳ ಪದಾಧಿಕಾರಿಗಳು ಹಾಗೂ ಅಧಿಕಾರಿ-ನೌಕರರು ಉಪಸ್ಥಿತರಿದ್ದರು.
























