Home ಮುಖಪುಟ ಸುದ್ದಿ ಭ್ರಷ್ಟಾಚಾರ ರಹಿತ ಆಡಳಿತದಿಂದ ದೇಶದ ಅಭಿವೃದ್ಧಿಗೆ ವೇಗ

ಭ್ರಷ್ಟಾಚಾರ ರಹಿತ ಆಡಳಿತದಿಂದ ದೇಶದ ಅಭಿವೃದ್ಧಿಗೆ ವೇಗ

ಬೆಂಗಳೂರು, ಜೂ. ೧೧- ಪ್ರಧಾನಿ ಮೋದಿ ಅವರ ಇಚ್ಛಾಶಕ್ತಿ, ಭ್ರಷ್ಟಾಚಾರರಹಿತ ಆಡಳಿತದಿಂದ ಭಾರತ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಿಕೊಂಡು ವಿಶ್ವದಲ್ಲೇ ನಾಲ್ಕನೇ ಆರ್ಥಿಕ ಶಕ್ತಿ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.


ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿಂದು ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ೧೨ ವರ್ಷ ಪೂರೈಸಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಎಳೆ ಎಳೆಯಾಗಿ ಬಿಡಿಸಿಟ್ಟ ಅವರು, ಕೇಂದ್ರದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಮೂರನೇ ಬಾರಿ ಅಧಿಕಾರಕ್ಕೆ ಬಂದಿರುವುದು ಪ್ರಧಾನಿ ಮೋದಿ ಅವರ ಕಾರ್ಯವೈಖರಿ. ಅವರು ಕೊಟ್ಟ ಯೋಜನೆ ಹಾಗೂ ದಿಟ್ಟ ಆಡಳಿತದಿಂದ ಅವರು ಹೇಳಿ, ಜಾಗತಿಕವಾಗಿಯೂ ಪ್ರಧಾನಿ ಮೋದಿ ಅವರ ಪ್ರಭಾವ ದಿನೇ ದಿನೇ ಹೆಚ್ಚಾಗುತ್ತಿದೆ ಎಂದರು.


ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರದ ಸಾಧನೆ ಕೇವಲ ಭಾಷಣದಿಂದ ಸಾಧ್ಯವಾಗಿಲ್ಲ.ಮೋದಿ ಅವರ ಇಚ್ಛಾಶಕ್ತಿ ಉತ್ತಮ ಆಡಳಿತದಿಂದ ದೇಶದ ಪ್ರಗತಿ ಹೆಚ್ಚಿದೆ ಎಂದರು.


ಪ್ರಧಾನಿ ಮೋದಿ ಅವರು ಒಂದು ದಿನವೂ ವಿಶ್ರಾಂತಿ ಪಡೆಯದೆ ಬಡವರು, ರೈತರು, ಮಹಿಳೆಯರ ಪರ ಕೆಲಸ ಮಾಡಿದ್ದಾರೆ. ಜಾಗತಿಕವಾಗಿ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದರೂ ದೇಶದ ಜಿಡಿಪಿ ಶೇ. ೭.೮ರಷ್ಟಿದೆ. ಇದು ಮೋದಿ ಅವರ ಉತ್ತಮ ಆಡಳಿತದ ಉದಾಹರಣೆ ಎಂದರು.


ಪ್ರಧಾನಿ ಮೋದಿ ಅವರು ದೇಶದ ಭದ್ರತೆಗೆ ಹೆಚ್ಚಿನ ಗಮನ ನೀಡಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚು ಹಣ ನೀಡಿದರು. ದೇಶದಲ್ಲಿ ಹೆದ್ದಾರಿ ಕ್ರಾಂತಿಯೇ ಆಗಿದೆ. ಈ ಹಿಂದಿನ ಸರ್ಕಾರಗಳು ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆ ಗಮನ ಕೊಟ್ಟಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ಮೇಲೆ ಈಶಾನ್ಯ ರಾಜ್ಯಗಳು ಅಭಿವೃದ್ಧಿಯಾಗುತ್ತಿವೆ ಎಂದರು.
ಈ ಹಿಂದೆಯೂ ಯುಪಿಎ ಸರ್ಕಾರವಿದ್ದಾಗ ದೇಶದ ೧೨೬ ಜಿಲ್ಲೆಗಳಲ್ಲಿ ನಕ್ಸಲರ ಹಾವಳಿ ಇತ್ತು. ಅದನ್ನು ಮಟ್ಟ ಹಾಕಿ ಈಗ ಹತ್ತು ಜಿಲ್ಲೆಗಳಲ್ಲಿ ಮಾತ್ರ ನಕ್ಸಲಿಯರು ಇದ್ದಾರೆ. ಮುಂದಿನ ದಿನಗಳಲ್ಲಿ ದೇಶದ ನಕ್ಸಲಿಸಂ ಕಿತ್ತು ಹಾಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಲಿದೆ ಎಂದರು.


ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಒಂದು ಭ್ರಷ್ಟಾಚಾರ ಆರೋಪ ಇಲ್ಲ. ಕಪ್ಪು ಚುಕ್ಕೆ ಇಲ್ಲ. ಆ ರೀತಿ ಪ್ರಧಾನಿ ಮೋದಿ ಕೆಲಸ ಮಾಡಿದ್ದಾರೆ ಎಂದರು.
ಕಳೆದ ೧೨ ವರ್ಷಗಳಲ್ಲಿ ಭಾರತ ಜಾಗತಿಕ ಸವಾಲುಗಳ ನಡುವೆಯೂ ಅಭಿವೃದ್ಧಿಯತ್ತ ದಾಪುಗಾಲು ಇಟ್ಟಿದೆ. ಇದೆಲ್ಲಾ ಮೋದಿ ಅವರ ದಿಟ್ಟ ಆಡಳಿತದಿಂದ ಆಗಿತ್ತು ಎಂದು ವಿಜಯೇಂದ್ರ ಹೇಳಿದರು.


ಯುಪಿಎ ಅಧಿಕಾರದ ಅವಧಿಯಲ್ಲಿ ನಡೆದ ಹಗರಣ ಭ್ರಷ್ಟಾಚಾರದಿಂದ ಜನ ಬೇಸತ್ತಿದ್ದರು. ದೇಶದ ಅಭಿವೃದ್ಧಿ ಸಾಧ್ಯವೇ ಇಲ್ಲ ಎನ್ನುವಂತಾಗಿತ್ತು. ಆದರೆ ೨೦೧೪ರಲ್ಲಿ ಮೋದಿಯವರು ದೇಶದ ಸವಾಲನ್ನು ಸ್ವೀಕಾರ ಮಾಡಿ,ಭಾರತಕ್ಕೆ ಭವಿಷ್ಯವಿದೆ. ಭ್ರಷ್ಟಾಚಾರರಹಿತ ಆಡಳಿತ ಕೊಡಲು ಸಾಧ್ಯವಿದೆ ಎಂಬುದನ್ನು ಸಾಬೀತು ಮಾಡಿದೆ ಎಂದರು.


ಕೋವಿಡ್ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷರೇ ತಲೆ ಮೇಲೆ ಕೈಎತ್ತಿ ಕುಳಿತ್ತಿದ್ದರು. ಆಗ ಪ್ರಧಾನಿ ಮೋದಿಯವರು ಜಗತ್ತಿಗೆ ದಾರಿ ತೋರಿಸುವ ಕೆಲಸ ಮಾಡಿ ಕೋವಿಡ್ ವ್ಯಾಕ್ಸಿನ್ ಆವಿಷ್ಕರಿಸಿ ಜಗತ್ತಿನ ಅನೇಕ ದೇಶಗಳಿಗೆ ಉಚಿತವಾಗಿ ವ್ಯಾಕ್ಸಿನ್ ಕಳುಹಿಸಿದರು. ದೇಶದಲ್ಲಿ ರೈಲ್ವೆ ವಲಯ ಬಂದರು ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿಯಾಗಿದೆ. ನಗರ ಪ್ರದೇಶಗಳಲ್ಲಿ ಮೇಟ್ರೋ ರೈಲು ಮಾರ್ಗಗಳು ಹೆಚ್ಚಾಗಿವೆ. ಜಲಜೀವನ ಮಿಷನ್ ಯೋಜನೆಯಿಂದ ಹಳ್ಳಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆಯಾಗಿದೆ. ಶೌಚಾಲಯ ವಸತಿ ಸೌಲಭ್ಯ ಸೌಕರ್ಯ ಕಲ್ಪಿಸಲಾಗಿದೆ.