
ಸಂಜೆವಾಣಿ ವಾರ್ತೆ,
ಮರಿಯಮ್ಮನಹಳ್ಳಿ, ಜೂ.11: ಸಮಾಜದಲ್ಲಿ ಅಂಗವಿಕಲರಿಗೆ ತಮ್ಮ ಅಂಗವೈಕಲ್ಯದ ಭಾವನೆಗಳು ಬರದಂತೆ ಆತ್ಮವಿಶ್ವಾಸ ಹೆಚ್ಚಿಸುವ ಕಾರ್ಯಗಳು ಆಗಬೇಕಿದೆ ಎಂದು ಬಿ.ಎಂ.ಎಂ. ಸಂಸ್ಥೆಯ ನಿರ್ದೇಶಕ ಗಣೇಶ್ ಹೆಗಡೆ ಅಭಿಪ್ರಾಯಪಟ್ಟರು.
ಅವರು ಬಿ.ಎಂ.ಎಂ.ಸಂಸ್ಥೆಯು ಆಯೋಜಿಸಿದ್ದ ಆಯ್ದ ಅಂಗವಿಕಲ ಫಲಾನುಭವಿಗಳಿಗೆ ಮೋಟಾರು ಚಾಲಿತ ತ್ರಿಚಕ್ರ ವಾಹನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾಜದಲ್ಲಿ ಅಂಗವಿಕಲರನ್ನು ಸಮಾನತೆ ಮತ್ತು ಗೌರವದಿಂದ ಕಾಣಬೇಕು. ಅಲ್ಲದೇ ಯಾವುದೇ ಭೇದ ಭಾವಗಳಿಲ್ಲದೇ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡಬೇಕಿದೆ. ಸಾರ್ವಜನಿಕವಾಗಿ ಶಿಕ್ಷಣ, ಉದ್ಯೋಗ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಅವರು ಸಕ್ರೀಯವಾಗಿ ಭಾಗಿಯಾಗಲು ಸಹಕರಿಸಬೇಕು. ಅಲ್ಲದೇ ಅಂಗವಿಕಲರ ಕೌಶಲ್ಯಾಭಿವೃದ್ಧಿ ತರಬೇತಿ ಹಾಗೂ ಪೂರಕ ವಾತಾವರಣ ಕಲ್ಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ ಎಂದರು.
ಇವರಿಗೆ ಶಿಕ್ಷಣ, ಉದ್ಯೋಗ, ನೀಡುವುದರ ಜೊತೆ ಸರಕಾರದ ವಿವಿಧ ಯೋಜನೆಗಳು, ಮೀಸಲಾತಿ ಹಾಗೂ ಆರ್ಥಿಕ ನೆರವಿನ ಯೋಜನೆಗಳು ಸಹ ಸಹಕಾರಿಯಾಗಿವೆ ಎಂದರು. ವಿಶೇಷವಾಗಿ ಸರಕಾರದ ಜೊತೆ ಅನೇಕ ಸಂಸ್ಥೆಗಳು ಅಂಗವಿಕಲರಿಗಾಗಿ ಕೃತಕ ಅಂಗಗಳು, ಗಾಲಿ ಕುರ್ಚಿಗಳು, ಶ್ರವಣ ಸಾಧನಗಳಂತಹ ಅನೇಕ ಉಪಕರಣಗಳನ್ನು ವಿತರಿಸುತ್ತಿರುವುದು ಪ್ರಶಂಸನೀಯ ಕಾರ್ಯವಾಗಿದ್ದು ಇವುಗಳ ಸದುಪಯೋಗವನ್ನು ಅಂಗವಿಕಲರು ಪಡೆದುಕೊಳ್ಳಬೇಕು ಎಂದರು.
ಪ್ರಸಕ್ತ ಸಾಲಿನಲ್ಲಿ ಜಿ.ನಾಗಲಾಪುರ ಮತ್ತು ಡಣನಾಯಕನಕೆರೆ ಗ್ರಾ.ಪಂ.ನ ಆಯ್ದ 21 ಫಲಾನುಭವಿಗಳಿಗೆ ನಾವು ತ್ರಿಚಕ್ರ ವಾಹನಗಳನ್ನು ವಿತರಿಸುತ್ತಿದ್ದೇವೆ ಎಂದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ ಪ್ರಭು ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ವಿಮಲ್ ಸಿಂಗ್, ಹಣಕಾಸು ಮತ್ತು ವಾಣಿಜ್ಯ ವಿಭಾಗದ ಮುಖ್ಯಸ್ಥ ರಾಜೇಂದ್ರ ಮುಂದ್ರಾ, ಬಿ.ಎಂಎಂ.ಸಂಸ್ಥೆಯ ಅಧಿಕಾರಿಗಳಾದ ಗಿರೀಶ್ ಕಾಕನೂರು, ಹೆಚ್.ಜಹಾಂಗೀರ್, ಜೇಕಬ್ ಸುದರ್ಶನ, ಸಿ.ಎಸ್.ಆರ್. ಅರುಣ್ ಕುಮಾರ್ ಮಾರುತಿ.ಕೆ, ರೇವಣ್ಣ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರಾದ ಪ್ರಕಾಶ್ ಪೂಜಾರ್, ಕೃಷ್ಣನಾಯಕ್, ಮಜ್ಗಿ ನಾಗರಾಜ, ಕೆ.ವೆಂಕಟೇಶ್, ಜಾತಪ್ಪ, ಕಂಪಲೆಪ್ಪ, ಫಕೀರಪ್ಪ ಹಾಗೂ ಇತರರು ಇದ್ದರು.
























