
ಕಲಬುರಗಿ,ಆ.೨: ನಗರದ ರಾಮಮಂದಿರ ವೃತ್ತದಿಂದ ಕೋಟನೂರ (ಡಿ) ಗ್ರಾಮದ ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಯವರೆಗೆ ಇರುವ ದಾರಿದೀಪಗಳನ್ನು ತುರ್ತಾಗಿ ದುರಸ್ತಿ ಮಾಡಿ ಬೆಳಗಿಸುವಂತೆ
ಪವನಕುಮಾರ ಬಿ ವಳಕೇರಿ ಅವರ ನೇತೃತ್ವದಲ್ಲಿ ಖಣದಾಳ, ಇಟಗಾ, ಸಿರನೂರು, ಪಣೆಗಾಂವ, ಸೀತನೂರು, ನಂದಿಕೂರು, ಕೋಟನೂರ (ಡಿ) ಹಾಗೂ ಸುತ್ತಮುತ್ತಲಿನ ಗ್ರಾಮಗಳ ನಾಗರಿಕರು ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ ಅವರಿಗೆ ಮನವಿ ಸಲ್ಲಿಸಿದರು.
ಕಲಬುರಗಿ ನಗರದ ಹೊರವಲಯದಲ್ಲಿರುವ ರಾಮಮಂದಿರ ವೃತ್ತದಿಂದ ಕೋಟನೂರ (ಡಿ) ಗ್ರಾಮದ ಡಾ. ಬಾಬಾಸಾಹೇಬ ಅಂಬೇಡ್ಕರ್ ಪ್ರತಿಮೆಯವರೆಗೆ ಸುಮಾರು ೩೨ ದಾರಿದೀಪ ಕಂಬಗಳು ಇದ್ದರೂ, ಬಹುತೇಕ ದಾರಿದೀಪಗಳು ಹಲವು ದಿನಗಳಿಂದ ಕಾರ್ಯನಿರ್ವಹಿಸುತ್ತಿಲ್ಲ. ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.ಈ ರಸ್ತೆಯ ಮೂಲಕ ಖಣದಾಳ, ಇಟಗಾ, ಸಿರನೂರು, ಪಣೆಗಾಂವ, ಸೀತನೂರು, ನಂದಿಕೂರು ಹಾಗೂ ಕೋಟನೂರ ಗ್ರಾಮಗಳ ಸಾವಿರಾರು ಜನರು ಪ್ರತಿದಿನ ಸಂಚರಿಸುತ್ತಾರೆ. ರಾತ್ರಿ ವೇಳೆ ಬಸ್‌ಗಾಗಿ ಕಾಯುವ ಪ್ರಯಾಣಿಕರು ಕತ್ತಲೆಯಲ್ಲೇ ನಿಲ್ಲಬೇಕಾಗಿದ್ದು, ಮಹಿಳೆಯರು ಹಾಗೂ ವಯೋವೃದ್ಧರು ಭಯದ ವಾತಾವರಣದಲ್ಲಿ ಓಡಾಡುವಂತಾಗಿದೆ.
ದಾರಿದೀಪಗಳಿಲ್ಲದ ಕಾರಣ ಕಳ್ಳತನ, ದರೋಡೆ, ಬೆದರಿಕೆ ಹಾಗೂ ಸಮಾಜಘಾತುಕ ಚಟುವಟಿಕೆಗಳಿಗೆ ಅವಕಾಶವಾಗುತ್ತಿದೆ.ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳುವುದು, ಅಗತ್ಯ ವಸ್ತುಗಳನ್ನು ಖರೀದಿಸುವುದು ಸೇರಿದಂತೆ ದೈನಂದಿನ ಕೆಲಸಗಳಿಗೆ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ.ಒಂದು ವೇಳೆ ಈ ನ್ಯಾಯಸಮ್ಮತ ಬೇಡಿಕೆಯನ್ನು ಶೀಘ್ರವಾಗಿ ಈಡೇರಿಸದಿದ್ದಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ರಾಮಮಂದಿರ ವೃತ್ತದಲ್ಲಿ ಪ್ರತಿಭಟನೆ ಹಾಗೂ ರಸ್ತೆ ತಡೆ ಹೋರಾಟ ನಡೆಸಬೇಕಾಗುವ ಅನಿವಾರ್ಯತೆ ಎದುರಾಗಲಿದೆ ಎಂದು ಮನವಿ ಸಲ್ಲಿಸಲಾಯಿತು.ರವೀಂದ್ರ ವಿಭೂತಿ, ಸಂಗಮೇಶ್ ನಾಗನಹಳ್ಳಿ, ಮಲ್ಲಿಗೆನಾಥ್ ನಾಗನಹಳ್ಳಿ, ಲೋಹಿತ್ ವೈಕಲ್ಲೂರ್ ವಿಶ್ವಕರ್ಮ, ವೈಭವ ಬಬಲಾದ, ಹರ್ಷದ್ ಖಾನ, ಶಿವಶರಣಪ್ಪ ಹೂಗಾರ್, ವೀರಗುಂಡ ಇನ್ನು ಅನೇಕರು ಉಪಸ್ಥಿತರಿದ್ದರು.






























